

ಶೀಲಾ ದೀಕ್ಷಿತ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದರು. ಅವರ ಬಳಿಕ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿ ಹುದ್ದೆ ಏರಿರುವ ನಾಯಕ ಎಂಬ ಹೆಗ್ಗಳಿಕೆಗೆ ಅರವಿಂದ ಕೇಜ್ರಿವಾಲ್ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರಿ ಬಹುಮತ (70ರಲ್ಲಿ 62 ಸ್ಥಾನ) ಪಡೆದರೆ, ಬಿಜೆಪಿ ಎಂಟು ಸ್ಥಾನಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಭಾನುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅರವಿಂದ ಕೇಜ್ರಿವಾಲ್ ವ್ಯವಸ್ಥೆಗೆ ಭರವಸೆ ತುಂಬುವ ಮಾತುಗಳನ್ನು ಆಡಿದ್ದಾರೆ. ‘ಚುನಾವಣೆ ಮುಗಿದಿದೆ. ನಾನೀಗ ಎಲ್ಲರ ಮುಖ್ಯಮಂತ್ರಿ. ದೆಹಲಿಯ ಎರಡು ಕೋಟಿ ಜನರು ನನ್ನ ಕುಟುಂಬದ ಸದಸ್ಯರು. ಏನೇ ಸಮಸ್ಯೆಯಿದ್ದರೂ ನೇರವಾಗಿ ಬನ್ನಿ; ಪರಿಹರಿಸೋಣ. ದೆಹಲಿಯನ್ನು ಅಭಿವೃದ್ಧಿಯ ಮಾರ್ಗದಲ್ಲಿ ಕೊಂಡೊಯ್ಯೋಣ’ ಎಂದು ಹೇಳಿದ್ದಾರೆ. ಕಳೆದ ಬಾರಿ, ಕೇಂದ್ರ ಸರ್ಕಾರದೊಂದಿಗೆ ಅನಗತ್ಯ ವಿವಾದ ಸೃಷ್ಟಿಸಿಕೊಂಡು ಸುದ್ದಿಯಾಗಿದ್ದ ಕೇಜ್ರಿವಾಲ್ ಈ ಬಾರಿ ಸಹಕಾರದ ಮಂತ್ರವನ್ನು ಜಪಿಸಿರುವುದು ವಿಶೇಷ. ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಜ್ರಿವಾಲ್ ಆಹ್ವಾನಿಸಿದ್ದರು. ಪ್ರಧಾನಿ ವಾರಾಣಸಿ ಪ್ರವಾಸದಲ್ಲಿರುವುದರಿಂದ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲವಾದರೂ, ಫಲಿತಾಂಶ ಹೊರಬೀಳುತ್ತಿದ್ದಂತೆ ಕೇಜ್ರಿವಾಲ್ರನ್ನು ಅಭಿನಂದಿಸಿದ್ದರು. ‘ದೆಹಲಿಯ ಅಭಿವೃದ್ಧಿಗೆ ಪ್ರಧಾನಿಯ ಆಶೀರ್ವಾದ ಕೋರುತ್ತೇನೆ’ ಎಂದು ಹೇಳುವ ಮೂಲಕ ತಾನು ಬದಲಾಗಿದ್ದೇನೆ ಎಂಬ ಸಂದೇಶವನ್ನೂ ಕೇಜ್ರಿವಾಲ್ ಕೊಟ್ಟಿದ್ದಾರೆ.
ಹೊಸ ಪ್ರಯೋಗ ಮತ್ತು ಜನರಿಗೆ ಅಗತ್ಯವಾದ ಕೆಲಸಗಳನ್ನು ಮಾಡುವ ಮೂಲಕ ಅವರು ಈ ಬಾರಿ ಗೆಲುವನ್ನು ಸುಲಭವಾಗಿಸಿಕೊಂಡರು ಎಂಬುದು ಗೊತ್ತೇ ಇದೆ. ಸರ್ಕಾರಿ ಶಾಲೆಗಳ ಸುಧಾರಣೆ, ಶಿಕ್ಷಣದ ಗುಣಮಟ್ಟ ಹೆಚ್ಚಳ, ಮೂಲ ಸೌಕರ್ಯಗಳ ವಿಸ್ತರಣೆ, ಮೊಹಲ್ಲಾ ಕ್ಲಿನಿಕ್ಗಳ ಸ್ಥಾಪನೆ, ಉಚಿತ ವಿದ್ಯುತ್, ಉಚಿತ ನೀರು... ಹೀಗೆ ಸಾಲು ಸಾಲು ಕೊಡುಗೆಗಳನ್ನೇ ಅವರು ನೀಡಿದರು. ಆದರೆ, ಈ ಮುಂದಿನ ಐದು ವರ್ಷಗಳಲ್ಲಿ ಕೇಜ್ರಿವಾಲ್ ಆಡಳಿತ ಹೇಗಿರಲಿದೆ ಎಂಬ ಕುತೂಹಲ ಇದ್ದೇ ಇದೆ. ಅಷ್ಟೇ ಅಲ್ಲ, ಹೊಸ ಸ್ವರೂಪದ ಸಮಸ್ಯೆಗಳು ಕಾಣಿಸಿಕೊಂಡು, ಗಂಭೀರ ಸ್ವರೂಪ ತಳೆದಿವೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ವಾಯುಮಾಲಿನ್ಯದ್ದು. ಸುಪ್ರೀಂ ಕೋರ್ಟ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಹಿಂದೆ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.
ವಾಯುಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುವುದು, ಸಂಚಾರ ದಟ್ಟಣೆ ನಿಯಂತ್ರಣ, ಅಂತಾರಾಷ್ಟ್ರೀಯ ನಗರ ಎಂಬ ಖ್ಯಾತಿಯ ದೆಹಲಿಯ ಮೂಲಸೌಕರ್ಯ ಉನ್ನತೀಕರಿಸುವುದು, ಕೊಳೆಗೇರಿಗಳಲ್ಲಿ ವಾಸಿಸುವ ಜನರ ಜೀವನಸ್ತರ ಹೆಚ್ಚಿಸುವುದು, ಜತೆಗೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಅನುಷ್ಠಾನಕ್ಕೆ ತರುವುದು ಆದ್ಯತೆ ಆಗಬೇಕಿದೆ. ಇದಕ್ಕೆಲ್ಲ ಹಣಕಾಸು ಮೂಲಗಳನ್ನು ಗಟ್ಟಿಗೊಳಿಸಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡದೆ ಯೋಜನೆಗಳನ್ನು ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ಜಾರಿಗೆ ತರುವುದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೇಜ್ರಿವಾಲರ ಈ ಅವಧಿಯನ್ನು ಎಲ್ಲರೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಹಾಗಾಗಿ, ಹಿಂದಿನ ತಪು್ಪಗಳು ಮರುಕಳಿಸದಂತೆ (ಅನಗತ್ಯ ಧರಣಿ, ಲೆಫ್ಟಿನಂಟ್ ಗವರ್ನರ್ ಜತೆ ಭಿನ್ನಾಭಿಪ್ರಾಯ) ಜಾಗ್ರತೆ ವಹಿಸಿ, ಜನರ ನಾಡಿಮಿಡಿತವನ್ನು ಅರಿತು ಕೆಲಸ ಮಾಡಬೇಕಿದೆ. ‘ನಾನು ಎಲ್ಲರ ಮುಖ್ಯಮಂತ್ರಿ’ ಎಂಬ ಮಾತನ್ನು ಕೇಜ್ರಿವಾಲ್ ಕೆಲಸಗಳ ಮೂಲಕ ಸಾಕಾರಗೊಳಿಸಬೇಕಿದೆ. ಅವರ ಮುಂದಿನ ಹಾದಿ ದೆಹಲಿಯ ಅಭಿವೃದ್ಧಿಗೆ ಹೊಸ ಗರಿ ಮೂಡಿಸಲಿ.