ಸಂಪಾದಕೀಯ: ದಿಕ್ಕುತಪ್ಪಿದ ಹೋರಾಟ-ಇಂಥ ಶಕ್ತಿಗಳಿಂದ ದೇಶದ ಸಾರ್ವಭೌಮತ್ವಕ್ಕೆ ಹಾನಿ

Editorail Image
Published on

ರಾಷ್ಟ್ರವಿರೋಧಿ ಚಿಂತನೆಗಳು ಮತ್ತು ಶಕ್ತಿಗಳು ಎಷ್ಟು ವ್ಯಾಪಕ ಪ್ರಮಾಣದಲ್ಲಿ ಸ್ಥಾಪಿತವಾಗಿವೆ ಎಂಬುದರ ಚಿತ್ರಣ ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗುತ್ತಿದೆ. ಹೋರಾಟ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಂಡು, ವಿಷಚಿಂತನೆಯನ್ನು ಬಿತ್ತುವ ಕೃತ್ಯ ಆಘಾತಕಾರಿ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸುವ ನೆಪದಲ್ಲಿ ತಾವಿರುವ ರಾಷ್ಟ್ರವನ್ನೇ ಹಳಿಯುವ, ಶತ್ರುರಾಷ್ಟ್ರಕ್ಕೆ ಜೈಕಾರ ಹಾಕುವಂಥ ಭಂಡತನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಗುರುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಅಮೂಲ್ಯ ಎಂಬ ಯುವತಿ ದೇಶದ್ರೋಹಿ ಘೋಷಣೆಯನ್ನು ಕೂಗಿ, ರಾದ್ಧಾಂತ ಮಾಡಿದ್ದಾಳೆ. ಹುಬ್ಬಳ್ಳಿ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕೂಡ ಪಾಕಿಸ್ತಾನ ಪರ ಘೋಷಣೆ ಹಾಕಿದ ಘಟನೆ ಮಾಸುವ ಮುನ್ನವೇ ಇಂಥ ದ್ದೊಂದು ಪ್ರಕರಣ ಸಂಭವಿಸಿದೆ. ಅಷ್ಟು ಮಾತ್ರವಲ್ಲ, ಶುಕ್ರವಾರ ಬೆಂಗಳೂರಿನ ಟೌನ್​ಹಾಲ್ ಎದುರು ಯುವತಿಯೊಬ್ಬಳು ‘ಫ್ರೀ ಕಾಶ್ಮೀರ’ ಎಂಬ ಭಿತ್ತಿಪತ್ರ ಪ್ರದರ್ಶಿಸಿದ್ದಾಳೆ. ಇಂಥ ಘಟನೆಗಳನ್ನು ಒಕ್ಕೊರಲಿನಿಂದ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕೆಲ ಪಕ್ಷಗಳು ರಾಜಕೀಯಕರಣಗೊಳಿಸುತ್ತಿವೆ.

ಕರ್ನಾಟಕದ ನಾಯಕರೊಬ್ಬರೇ ‘ಅಮೂಲ್ಯಾಳಿಗೆ ಮಾತು ಮುಂದುವರಿಸಲು ಅವಕಾಶ ಕಲ್ಪಿಸಬೇಕಿತ್ತು’ ಎಂದು ಹೇಳಿರುವುದು, ವಿಚಿತ್ರ ಮಾನಸಿಕತೆಗೆ ಸಾಕ್ಷಿ. ದೆಹಲಿಯ ಶಾಹಿನ್​ಬಾಗ್​ನಲ್ಲಿ ಕೂಡ ಪ್ರತಿಭಟನಾಕಾರರು ಪಟ್ಟು ಸಡಿಲಿಸದೆ, ಧರಣಿ ಮುಂದುವರಿಸಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿರುವ ಸಂಧಾನಕಾರರು ಅಲ್ಲಿಗೆ ಭೇಟಿ ನೀಡಿ-‘ಪ್ರತಿಭಟನೆ ನಡೆಸುವುದು ನಿಮ್ಮ ಹಕ್ಕು ನಿಜ; ಹಾಗೆಂದ ಮಾತ್ರಕ್ಕೆ ಬೇರೆಯವರ ಹಕ್ಕುಗಳನ್ನು ಕಿತ್ತುಕೊಳ್ಳುವಂತಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ, ಪ್ರತಿಭಟನಾಕಾರರು ಪಟ್ಟು ಸಡಿಲಿಸಿಲ್ಲ. ಇದೆಲ್ಲ ನೋಡುತ್ತಿದ್ದರೆ ಸಿಎಎ ವಿರೋಧಿ ಹೋರಾಟ ಸಂಪೂರ್ಣವಾಗಿ ದಿಕ್ಕುತಪ್ಪಿದೆ ಎಂಬುದು ಸ್ಪಷ್ಟವಾಗುತ್ತಿದೆ. ಆರಂಭಿಕ ಹಂತದಲ್ಲಿ ಹಿಂಸಾಚಾರ ಕಾಣಿಸಿಕೊಂಡು, ಸೂಕ್ತ ಕ್ರಮದ ಬಳಿಕ ಅದಕ್ಕೆ ಕಡಿವಾಣ ಬಿತ್ತು. ಆದರೀಗ, ಬಹುಶಃ ಹತಾಶೆಯ ಸ್ಥಿತಿಗೆ ತಲುಪಿರುವ ಕೆಲವರು ದೇಶವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ವ್ಯವಸ್ಥೆಯ ಸಾಮರಸ್ಯ ಹಾಳುಗೆಡವುತ್ತಿದ್ದಾರೆ. ಈ ತಥಾಕಥಿತ ಹೋರಾಟಗಾರರು ಭಾಷಣಗಳಲ್ಲಿ ಸಂವಿಧಾನರಕ್ಷಣೆ, ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಅದೆಲ್ಲ ತೋರಿಕೆಗೆ ಎಂಬುದು ಅವರ ವರ್ತನೆಗಳಿಂದಲೇ ಸ್ಪಷ್ಟವಾಗುತ್ತಿದೆ. ಭಾರತದಲ್ಲಿದ್ದುಕೊಂಡೇ, ಇಲ್ಲಿನ ಸಕಲ ಸೌಲಭ್ಯಗಳನ್ನು ಅನುಭವಿಸಿಕೊಂಡೇ ದೇಶದ ವಿರುದ್ಧ ಮಾತನಾಡುವ ಮೂಲಕ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ. ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ. ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಅದಕ್ಕಿಂತ ಹೆಚ್ಚಾಗಿ ರಾಷ್ಟ್ರವಾದ, ನೈಜ ರಾಷ್ಟ್ರಭಾವದ ಜಾಗೃತಿ ಸಾಮೂಹಿಕವಾಗಿ ನಡೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net