ಸಂಪಾದಕೀಯ| ಪ್ರತಿಭಟನೆ ಹೆಸರಲ್ಲಿ ಮತ್ತೊಬ್ಬರ ಹಕ್ಕುಗಳನ್ನು ಕಸಿಯಬಾರದು, ಇಲ್ಲಿ ವಿವೇಚನೆ ಮುಖ್ಯ

protest
Published on
ಪ್ರಜಾಪ್ರಭುತ್ವದ ಮೌಲ್ಯಗಳು ಜನರಿಗೆ ಸಾಕಷ್ಟು ಶಕ್ತಿಯನ್ನು ಕೊಟ್ಟಿವೆ. ಅವ್ಯವಸ್ಥೆ ಕಂಡುಬಂದಾಗ, ಅನ್ಯಾಯವಾದಾಗ ಅಥವಾ ಯಾವುದೇ ತೊಂದರೆಗಳು ಸಂಭವಿಸಿದಾಗ ಅದರ ವಿರುದ್ಧ ದನಿ ಎತ್ತುವ, ಪ್ರತಿಭಟಿಸುವ, ನ್ಯಾಯಕ್ಕಾಗಿ ಆಗ್ರಹಿಸುವ ಹಕ್ಕು ಇದ್ದೇಇದೆ. ಈ ಮಾರ್ಗದ ಮುಖಾಂತರ ಅದೆಷ್ಟೋ ಗಂಭೀರ, ಗಹನ ಸಮಸ್ಯೆಗಳು ಪರಿಹಾರಗೊಂಡ ನಿದರ್ಶನಗಳಿಗೆ ಕೊರತೆಯೇನಿಲ್ಲ. ಆದರೆ, ಪ್ರ್ರತಿಭಟಿಸುವ ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಎಲ್ಲ ಕಾಲಕ್ಕೂ ಮತ್ತು ಎಲ್ಲೆಡೆಗೂ ಅನ್ವಯ ಆಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಯ ಹೆಸರಲ್ಲಿ ಜನರಿಗೇ ತೊಂದರೆಯನ್ನು ಉಂಟು ಮಾಡುವ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವ, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಕಳವಳಕಾರಿ ಪ್ರಕರಣಗಳು ಹೆಚ್ಚುತ್ತಿರುವುದು ಗಂಭೀರ ಬೆಳವಣಿಗೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್​ಬಾಗ್​ನಲ್ಲಿ 2019ರಲ್ಲಿ ನಡೆದ ಪ್ರತಿಭಟನೆ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ 2020 ಅಕ್ಟೋಬರ್ 7ರಂದು ತೀರ್ಪು ನೀಡಿತ್ತು. ಅದನ್ನು ಮರುಪರಿಶೀಲಿಸುವಂತೆ ಕೋರಿ 12 ಮಂದಿ ಹೋರಾಟಗಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ‘ಕೆಲವೊಮ್ಮೆ ದಿಢೀರ್ ಮತ್ತು ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆಯಬಹುದು. ಆದರೆ, ಅದು ದೀರ್ಘಾವಧಿಯದ್ದಾಗಿರಬಾರದು. ಇತರರ ಹಕ್ಕುಗಳಿಗೆ ಧಕ್ಕೆ ತರಬಾರದು. ಸಾರ್ವಜನಿಕ ಸ್ಥಳವನ್ನು ಪ್ರತಿಭಟನಾಕಾರರು ನಿರಂತರವಾಗಿ ಕಸಿದುಕೊಳ್ಳುವಂತಹ ಪ್ರತಿಭಟನೆ ಕೂಡ ಸಲ್ಲದು’ ಎಂದು ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದ್ದು, ಮಹತ್ವದ ಸಂದೇಶವನ್ನು ರವಾನಿಸಿದೆ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಆಂದೋಲನವೂ ದೆಹಲಿ ಹೊರವಲಯದ ಹೆದ್ದಾರಿಯನ್ನೇ ಅತಿಕ್ರಮಿಸಿಕೊಂಡಿದೆ. ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಪಡುವಂತಾಗಿದೆ. ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸುವಂತೆ ಇತ್ತೀಚೆಗೆ ಅಲ್ಲಿನ ನಿವಾಸಿಗಳು ಹೋರಾಟ ನಡೆಸಿದ್ದು, ಗೊತ್ತಿರುವಂಥದ್ದೇ. ಅಲ್ಲದೆ, ರೈತ ಆಂದೋಲನವನ್ನು ಅನಿರ್ದಿಷ್ಟಾವಧಿ ನಡೆಸಲಾಗುವುದು ಎಂದು ಆ ಆಂದೋಲನದ ನಾಯಕರು ಏಕಾಏಕಿಯಾಗಿ ಘೋಷಿಸಿರುವುದು ಕೂಡ ಕಳವಳಕ್ಕೆ ಕಾರಣವಾಗಿದೆ.

ಪ್ರತಿಭಟನೆಯ ಹಕ್ಕಿನಿಂದ ಇತರರಿಗೆ ತೊಂದರೆ ಆಗಬಾರದು. ವಿವೇಚನಾರಹಿತವಾಗಿ ನಡೆಸುವ ಇಂಥ ಹೋರಾಟಗಳಿಂದ ನಷ್ಟ ಆಗುವುದು ನಮ್ಮ ಜನರಿಗೇ, ಕಷ್ಟ ಅನುಭವಿಸುವುದು ನಮ್ಮ ಸುತ್ತಮುತ್ತಲಿನವರೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಆರ್ಥಿಕ ನಷ್ಟದ ಪ್ರಮಾಣವಂತೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ . ಸಾರ್ವಜನಿಕ ಪ್ರದೇಶಗಳನ್ನು ದೀರ್ಘಾವಧಿಯವರೆಗೆ ಪ್ರತಿಭಟನೆ ನೆಪದಲ್ಲಿ ಅತಿಕ್ರಮಿಸಿಕೊಳ್ಳುವುದು ಸರಿಯಲ್ಲ. ಇಂಥ ಹೊತ್ತಲ್ಲಿ ಪ್ರತಿಭಟನಾಕಾರರು/ಹೋರಾಟಗಾರರು ವಿವೇಚನೆ ಬಳಸಬೇಕು. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಿಕ್ಕ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಅದೆಷ್ಟು ಸರಿ? ಅದರಲ್ಲೂ, ಹೊರಗಿನ ಶಕ್ತಿಗಳು, ಪ್ರಭಾವಗಳು ಹೋರಾಟಗಳನ್ನು ಆವರಿಸಿಕೊಂಡು ಬಿಟ್ಟರೆ ಎಂಥ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದಕ್ಕೆ ದೆಹಲಿಯ ಬೆಳವಣಿಗೆಗಳು ಸಾಕ್ಷಿ. ಹಾಗಾಗಿ, ಇನ್ನಾದರೂ, ಪ್ರತಿಭಟನೆಗೆ ಮುಂದಾಗುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ಸಮಾಜದ ಹಿತಕ್ಕೆ ಹಾನಿಯಾಗದಂತೆ ವಿರೋಧದ ದನಿಯನ್ನು ಪ್ರಭುತ್ವಕ್ಕೆ ತಲುಪಿಸುವ ಸಂಕಲ್ಪ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net