ರಾಜಕೀಯ ಮಾಡುವ ಸಮಯವಲ್ಲ; ಅಭಿವೃದ್ಧಿ ವಿಷಯಗಳಿಗೆ ಆದ್ಯತೆ ನೀಡಿ

IMG-20210527-WA0057
Published on

ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಜುಲೈ 26ಕ್ಕೆ ಎರಡು ವರ್ಷ ತುಂಬಲಿದೆ. ಈ ಅಲ್ಪಾವಧಿಯಲ್ಲೇ ಹಲವು ಬಾರಿ ನಾಯಕತ್ವ ಬದಲಾವಣೆಯ ಚರ್ಚೆ ಕೇಳಿಬಂದಿದೆ. ಈ ಬಾರಿಯಂತೂ ಪ್ರಸಕ್ತ ಬೆಳವಣಿಗೆ ದೆಹಲಿಯವರೆಗೆ ತಲುಪಿದ್ದು, ಬಿಜೆಪಿಯ ಕೆಲ ನಾಯಕರೇ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ.

ಆಡಳಿತಾರೂಢ ಪಕ್ಷದೊಳಗೇ ಪ್ರತಿಪಕ್ಷ ಸೃಷ್ಟಿಯಾಗಿರುವುದಕ್ಕೆ ಈ ಎಲ್ಲ ಬೆಳವಣಿಗೆ ಸಾಕ್ಷಿ. ಕೇಂದ್ರ ಮುಖಂಡರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರೂ, ಕೆಲ ನಾಯಕರ ಪ್ರಯತ್ನ ನಿಲ್ಲುತ್ತಿಲ್ಲ. ‘ಮುಖ್ಯಮಂತ್ರಿ ಬದಲಾಗುತ್ತಾರೆ’ ಎಂಬ ಊಹಾಪೋಹವನ್ನು ಎರಡು ವರ್ಷಗಳಿಂದಲೂ ಪೋಷಿಸಿಕೊಂಡು ಬರಲಾಗುತ್ತಿದೆ. ಆದರೆ, ಮೇಲಿಂದ ಮೇಲೆ ಇಂಥ ಬೆಳವಣಿಗೆಗಳು ಘಟಿಸಿದರೆ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುವುದಲ್ಲದೆ, ಸಚಿವರು ಮತ್ತು ಅಧಿಕಾರಿವರ್ಗದ ಮನೋಬಲವೂ ಕುಸಿಯುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿಯ ಆಶಯವೇ ಹಳಿತಪ್ಪಿಬಿಡುತ್ತದೆ. ಅಷ್ಟಕ್ಕೂ, ಅಭಿವೃದ್ಧಿ ನಿಟ್ಟಿನಲ್ಲಿ ಈ ಸರ್ಕಾರಕ್ಕೆ ಸಿಕ್ಕಿರುವುದೇ ಕಡಿಮೆ ಸಮಯ. 2023ರ ಏಪ್ರಿಲ್-ಮೇನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಹುತೇಕ ಪಕ್ಷಗಳು ಚುನಾವಣೆಗೆ ಒಂದು ವರ್ಷವಿರುವಾಗಲೇ ಸಿದ್ಧತೆ ತೀವ್ರಗೊಳಿಸಿ, ಪ್ರಚಾರಕ್ಕೆ ವೇಗ ನೀಡುತ್ತವೆ. ಒಂದು ವೇಳೆ ಈಗ ಕರೊನಾ ಹಾವಳಿ ಇಲ್ಲದಿದ್ದಲ್ಲಿ ಚುನಾವಣೆ ಕುರಿತಾದ ಚರ್ಚೆ, ತಯಾರಿ ಆರಂಭವಾಗಿರುತ್ತಿತ್ತು. ಅದೇನೆ ಇದ್ದರೂ, ಇದು ರಾಜಕೀಯ ಮಾಡುವ ಸಮಯವಂತೂ ಖಂಡಿತ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಕರ್ನಾಟಕ ಕರೊನಾ ಸಮಸ್ಯೆಯಿಂದ ನಲುಗಿದ್ದು, ಸೋಂಕು ಪ್ರಕರಣಗಳು ಗಣನೀಯವಾಗಿವೆ. ಮರಣ ಪ್ರಮಾಣ ನಿಯಂತ್ರಣಕ್ಕೆ ಬರಬೇಕಿದೆ. ಬಾಕಿ ಎಲ್ಲ ವಿಷಯಗಳನ್ನು ಬದಿಗೊತ್ತಿ ಮುಖ್ಯಮಂತ್ರಿಗಳು ಕರೊನಾ ನಿಯಂತ್ರಣವನ್ನು ಆದ್ಯತೆಯಾಗಿಸಿಕೊಂಡಿದ್ದಾರೆ; ಅದು ಅನಿವಾರ್ಯ ಕೂಡ. ಹೀಗಿರುವಾಗ ಇಂಥ ಜ್ವಲಂತ ಸವಾಲನ್ನು ಎದುರಿಸುವುದು, ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಇಡೀ ಸರ್ಕಾರದ ಜವಾಬ್ದಾರಿ. ಈಗ ನಡೆಯುತ್ತಿರುವ ಬೆಳವಣಿಗೆಗಳು ಸರ್ಕಾರಕ್ಕೆ ಮುಜುಗರ ತರುವ ಜತೆಗೆ, ಆಡಳಿತ ವ್ಯವಸ್ಥೆ ಮೇಲೂ ದುಷ್ಪರಿಣಾಮ ಬೀರುತ್ತವೆ. ಜನರೂ ಅನುಮಾನದ ದೃಷ್ಟಿಯಿಂದ ನೋಡುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮೊದಲು ಈಗಿನ ಗಂಭೀರ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವ, ಜನರ ಜೀವ ರಕ್ಷಿಸುವ ಕಾರ್ಯವಾಗಬೇಕಿದೆ. ಕರೊನಾ ವಿರುದ್ಧದ ಹೋರಾಟ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಸಾಮೂಹಿಕ ಹೊಣೆಗಾರಿಕೆಯಡಿ ನಡೆಯಬೇಕು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಈ ‘ಡಬಲ್ ಇಂಜಿನ್’ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂಬ ನಿರೀಕ್ಷೆ ಮೂಡಿಸಲಾಗಿತ್ತು. ಈಗಂತೂ ಕರೊನಾ ಕಾರಣಕ್ಕೆ ಆರ್ಥಿಕ ಸಂಕಷ್ಟ ಬೇರೆ ಎದುರಾಗಿದೆ. ಹಾಗಾಗಿ, ಇರುವ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುವ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಇಲ್ಲದಿದ್ದಲ್ಲಿ ‘ನಾಯಕತ್ವ ಬದಲಾವಣೆ’ ಎಂಬ ಮರೀಚಿಕೆಯ ಬೆನ್ನು ಹತ್ತಿ, ರಾಜಕೀಯವನ್ನೇ ಮುಖ್ಯವಾಗಿಸಿಕೊಂಡರೆ ಅಂಥ ಘಟನೆಗಳನ್ನು, ಅದಕ್ಕೆ ಕಾರಣರಾದವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿಕೊಂಡು, ಅದರ ಸಾಕಾರದ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಹೊರಹೊಮ್ಮಲಿ. ರಾಜಕೀಯ ಕಾರ್ಮೋಡ ಚೆದುರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net