ಸಂಪಾದಕೀಯ: ಅವ್ಯವಹಾರ ನಿಲ್ಲಲಿ; ತನಿಖೆಯಿಂದ ಸತ್ಯಾಂಶ ಹೊರಬೀಳಬೇಕು

IMG-20210526-WA0022
Published on

ರೈತರು ಅನುಭವಿಸುತ್ತಿರುವ ತೊಂದರೆ, ತಾಪತ್ರಯಗಳು ಒಂದೆರಡಲ್ಲ. ಪ್ರಕೃತಿಯ ಮುನಿಸು, ಬೆಳೆ ಬಂದರೂ ಸಿಗದ ಸೂಕ್ತ ಬೆಲೆ, ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆ ಹೀಗೆ ಒಂದಿಲ್ಲೊಂದು ಸವಾಲುಗಳ ವಿರುದ್ಧ ಹೋರಾಡುತ್ತಲೇ ರೈತರು ಬಾಳಿನ ಬಂಡಿಯನ್ನು ದೂಡಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗಾಗಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಿದ್ದು, ಅವುಗಳ ಪೈಕಿ ಪ್ರಮುಖವಾದುದು ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್​ಪಿ). ಆದರೆ, ಇಂಥ ಸಾರ್ಥಕ ಯೋಜನೆಯಲ್ಲೂ ಅವ್ಯವಹಾರ ನಡೆದಿದ್ದು, ಕೆಲ ದಲ್ಲಾಳಿಗಳು, ಮಧ್ಯವರ್ತಿಗಳು ಗೋಲ್‍ಮಾಲ್ ನಡೆಸಿದ್ದಾರೆ.

ಈ ಜಾಲದ ಕುರಿತಂತೆ ಇತ್ತೀಚೆಗೆ ‘ವಿಜಯವಾಣಿ’ ವಿಸõತ ವರದಿಯನ್ನು ಪ್ರಕಟಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕಳೆದ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಬಿಳಿ ಜೋಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪರಿಶೀಲಿಸಿ ಎಂಟು ದಿನದೊಳಗೆ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದೆ. 12 ಜಿಲ್ಲೆಗಳಲ್ಲಿ ತನಿಖೆ ನಡೆಸಲು ಆಹಾರ ಇಲಾಖೆಯು 4 ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದು, ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತನಿಖಾಧಿಕಾರಿ ಗಳನ್ನು ನಿಯೋಜಿಸಲಾಗಿರುವುದು ಉತ್ತಮ ಬೆಳವಣಿಗೆ.

ಅಕ್ಕಿ ಗಿರಣಿ ಸಂಸ್ಥೆಗಳು ಹಾಗೂ ಖರೀದಿ ಏಜೆನ್ಸಿಗಳು, ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನುಂಗಿಹಾಕಿವೆ. ಅನ್ನಭಾಗ್ಯ ಯೋಜನೆಯಡಿ ಕಾರ್ಡ್​ದಾರರಿಗೆ ಪಡಿತರ ವಿತರಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಅಕ್ಕಿ, ಜೋಳ ಹಾಗೂ ರಾಗಿ ಸರಬರಾಜು ಮಾಡುವ ಜವಾಬ್ದಾರಿಯನ್ನು ಅಕ್ಕಿ ಗಿರಣಿದಾರರು ಹಾಗೂ ಖರೀದಿ ಏಜೆನ್ಸಿಗಳಿಗೆ ನೀಡಲಾಗಿದೆ. ಆದರೆ, ರೈತರಿಂದ ಆಹಾರ ಧಾನ್ಯ ಖರೀದಿಸಿರುವುದಾಗಿ ಸರ್ಕಾರಕ್ಕೆ ತಪ್ಪು ಲೆಕ್ಕ ಕೊಟ್ಟು ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ.

2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಡಿಮೆ ಪ್ರಮಾಣದಲ್ಲಿ ಆಹಾರ ಧಾನ್ಯ ಖರೀದಿಸಿ, ಹೆಚ್ಚು ಖರೀದಿಸಲಾಗಿದೆ ಎಂದು ಹಲವು ಏಜೆನ್ಸಿಗಳು ಸರ್ಕಾರಕ್ಕೆ ತಪು್ಪ ಮಾಹಿತಿ ನೀಡಿವೆ. ರೈತರಿಗೆ ಹಣದ ಆಮಿಷವೊಡ್ಡಿ ಅವರಿಂದ ಜಮೀನಿನ ಪಹಣಿ ಪಡೆದು ರೈತರ ಖಾತೆಗೆ ಸರ್ಕಾರದಿಂದ ಹಣ ಹಾಕಿಸಿಕೊಂಡಿವೆ. ಬಂದ ಹಣದಲ್ಲಿ ರೈತರಿಗೆ ಸ್ವಲ್ಪ ಕೊಟ್ಟು ಕೈ ತೊಳೆದುಕೊಂಡಿವೆ. ಇಂಥ ಮೋಸದ ಜಾಲಗಳ ಬಗ್ಗೆ ರೈತರೂ ಎಚ್ಚರದಿಂದ ಇರಬೇಕು. ಇಂಥ ಅಕ್ರಮಗಳಿಗೆ ಪ್ರೋತ್ಸಾಹ ನೀಡಬಾರದು. ಬೆಂಬಲ ಬೆಲೆ ಯೋಜನೆಯಡಿ ವಿಧಿಸಲಾಗಿದ್ದ ಕೆಲ ನಿಯಮ ಗಳನ್ನು ಸರ್ಕಾರ ಸಡಿಲಿಸಿರುವುದು ವಂಚನೆಗೆ ದಾರಿ ಮಾಡಿಕೊಟ್ಟಿದೆ ಎಂದೂ ಹೇಳಲಾಗುತ್ತಿದೆ. ರೈತರಿಗೆ ನೆರವಾಗಲಿ ಎಂದು ಸರ್ಕಾರ ಒಳ್ಳೆಯ ಉದ್ದೇಶದಿಂದ ಇಂಥ ಯೋಜನೆಗಳನ್ನು ರೂಪಿಸಿದರೂ, ಅದನ್ನು ದುರುಪಯೋಗ ಮಾಡಿ ಕೊಳ್ಳುವ ಕೆಲ ಶಕ್ತಿಗಳು ಯೋಜನೆಗಳ ಮೂಲಉದ್ದೇಶವನ್ನೇ ಹಾಳು ಮಾಡುತ್ತವೆ. ಹಲವು ಜನಪರ ಯೋಜನೆಗಳಲ್ಲೂ ಈ ಬಗೆಯ ನಿದರ್ಶನಗಳನ್ನು ಕಾಣಬಹುದು. ಆದರೆ, ಲೋಪ, ಅಕ್ರಮಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಸೂಕ್ತ ಶಿಕ್ಷೆಗೆ ಒಳಪಡಿಸುವುದು ವ್ಯವಸ್ಥೆಯ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಸಕ್ತ ತನಿಖೆ ಸಮರ್ಪಕವಾಗಿ ನಡೆದು, ಅಕ್ರಮಕ್ಕೆ ಕಡಿವಾಣ ಬೀಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net