ಸಂಪಾದಕೀಯ| ತಂತ್ರಜ್ಞಾನದ ಸಮರ್ಥ ಬಳಕೆ ಉತ್ತಮ ಯೋಜನೆ

old age
Published on
ಸರ್ಕಾರದ ಆಡಳಿತ ಸರಳ, ಪಾರದರ್ಶಕವಾಗಿರಬೇಕು. ಯೋಜನೆಗಳು, ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು. ಆದರೆ, ಈ ಆಶಯದ ಈಡೇರಿಕೆ ಎಷ್ಟೋ ಬಾರಿ ಮರೀಚಿಕೆ ಆಗಿಯೇ ಉಳಿಯುತ್ತದೆ. ಜನಸಾಮಾನ್ಯರು ಸಣ್ಣ ಸಣ್ಣ ಕೆಲಸಗಳಿಗೆ, ಮಂಜೂರಾತಿಗಳಿಗೆ ಹಲವು ಬಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಎಲ್ಲ ಪ್ರಕ್ರಿಯೆ ಪೂರೈಸಿದರೂ ವ್ಯವಸ್ಥೆಯಲ್ಲಿನ ವಿಳಂಬನೀತಿಯಿಂದ ಕಡತಗಳು ನನೆಗುದಿಗೆ ಬೀಳುತ್ತವೆ. ಇದರಿಂದ ಶ್ರೀಸಾಮಾನ್ಯರ ಸಮಯ-ಶ್ರಮ ವೃಥಾ ಪೋಲಾಗುವುದುಂಟು. ಆದರೆ, ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ಬಲದಿಂದ ಬದಲಾವಣೆಯ ಆಶಾಕಿರಣ ಗೋಚರಿಸಿದೆ. ಯೋಜನೆಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಸಹಾಯಧನವನ್ನು ನೇರ ಫಲಾನುಭವಿ ಖಾತೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

ರಾಜ್ಯ ಸರ್ಕಾರ ಕೂಡ ಇಂಥ ಮಹತ್ವದ ಸುಧಾರಣೆಗೆ ಮುಂದಾಗಿರುವುದು ಉತ್ತಮ ನಡೆ. ಮನೆಬಾಗಿಲಿಗೇ ಮಾಸಾಶನ ತಲುಪಿಸುವ ಯೋಜನೆಗೆ ಬುಧವಾರ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಪತ್ರ ವಿತರಿಸಿದ್ದಾರೆ. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ನವೋದಯ ಆಪ್ ಮತ್ತು ತಂತ್ರಾಶದ ಮೂಲಕ ಸ್ವಯಂಪ್ರೇರಿತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಯೋಜನೆ ಇದು. ಇದಕ್ಕಾಗಿ ಅರ್ಜಿ ಸಲ್ಲಿಸುವ ಗೊಡವೆ ಇಲ್ಲ. ಸ್ವಯಂಪ್ರೇರಿತವಾಗಿ ಮಂಜೂರಾದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿ ಜಮೆಯಾಗಲಿದೆ. ಇದಕ್ಕಾಗಿ ಸರ್ಕಾರ ಪ್ರಸಕ್ತ ಸಾಲಿನಲ್ಲಿ -7500 ಕೋಟಿ ರೂ. ಮೀಸಲಿರಿಸಿದೆ. ಫಲಾನುಭವಿಯ ವಾರ್ಷಿಕ ಆದಾಯದ ಮಿತಿಯನ್ನು -12 ಸಾವಿರ ರೂ.ನಿಂದ 32 ಸಾವಿರ ರೂ.ಗೆ.ಹೆಚ್ಚಿಸಲಾಗಿದೆ. ಸಮಾಜದ ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇದರಿಂದ ಅನುಕೂಲವಾಗಲಿದೆ. ಮೊದಲ ಹಂತದಲ್ಲಿ 60 ವರ್ಷ ವಯೋಮಿತಿ ದಾಟಿದವರಿಗೆ, ವೃದ್ಧಾಪ್ಯ, ಸಂಧ್ಯಾಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಸ್ವಯಂಪ್ರೇರಿತ ಪಿಂಚಣಿ ಮಂಜೂರು ಮಾಡಲಾಗುತ್ತದೆ. ನವೋದಯ ತಂತ್ರಾಶ, ಮೊಬೈಲ್ ಆಪ್​ನಿಂದ ಯೋಜನೆಯ ಪರಿಣಾಮಕಾರಿ ಜಾರಿಗೆ ಅನುಕೂಲವಾಗಲಿದೆ. ಇದು ಫಲಾನುಭವಿಯ ಮಾಹಿತಿ, ಪಿಂಚಣಿ ಸ್ಥಿತಿ, ಅನುದಾನ ಬಿಡುಗಡೆ ಸೇರಿ ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆಯಡಿ ಸಿಗುವಂತೆ ಮಾಡುತ್ತದೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡರೆ ಆಡಳಿತವನ್ನು ಸರಳಗೊಳಿಸಲು ಸಾಧ್ಯವಿದೆ. ಅಲ್ಲದೆ ಕಾರ್ಯದಕ್ಷತೆಯೂ ಹೆಚ್ಚುತ್ತದೆ. ಪಾರದರ್ಶಕತೆ ತರಲು ಸಾಧ್ಯವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ. ಆಡಳಿತ ಸುಧಾರಣೆಯ ವಿಷಯದಲ್ಲಿ ಇಂಥ ಕ್ರಮಗಳು ಅಗತ್ಯ. ಕರ್ನಾಟಕವಂತೂ ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ಮುಂಚೂಣಿಯಲ್ಲಿದೆ. ಆಡಳಿತ ಸುಧಾರಣೆಗೆ ಅದನ್ನು ಬಳಸಿಕೊಂಡರೆ ಸರ್ಕಾರ ಮತ್ತು ಜನಸಾಮಾನ್ಯರ ಶ್ರಮ, ಸಮಯ ಎರಡೂ ಉಳಿಯುತ್ತದೆ. ಹೊಸ ಪಿಂಚಣಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡು, ಇಂಥ ಮತ್ತಷ್ಟು ಸುಧಾರಣೆಗಳಿಗೆ ಮಾದರಿಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net