

ಬೇಸಿಗೆ ರಜೆ ಮುಗಿದು ಇಂದಿನಿಂದ (ಸೋಮವಾರ) ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಶೈಕ್ಷಣಿಕ ವರ್ಷ, ಸಂಬಂಧಿತ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕರೊನಾ ಮಹಾಮಾರಿಯ ಪರಿಣಾಮ ಹೆಚ್ಚುಕಡಿಮೆ ಎರಡು ವರ್ಷ ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ, ಹೊಸ ಕೌಶಲಗಳತ್ತಲೂ ಗಮನ ನೀಡಬೇಕಿದೆ. ಪರಿಣಾಮ, ಕರೊನಾ ನಂತರದ ದಿನಗಳಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದು, ಪ್ರಬಲ ಇಚ್ಛಾಶಕ್ತಿಯೊಂದಿಗೆ ಅವನ್ನು ಎದುರಿಸಬೇಕಾಗಿದೆ. ಈ ನಡುವೆ ಒಳ್ಳೆಯ ಬೆಳವಣಿಗೆ ಎಂದರೆ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿರುವುದು. ಕರೊನಾದಿಂದಾಗಿ ಹಳ್ಳಿ ಸೇರಿರುವವರು ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಪ್ರತಿಷ್ಠಿತ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಹಿಂದೆಲ್ಲ "ಸರ್ಕಾರಿ ಶಾಲೆಗಳಿಗೆ ಪ್ರವೇಶ ಕೊಡಿಸಿ' ಎಂದು ಮನವೊಲಿಸಲು ಶಿಕ್ಷಕರೇ ಪಾಲಕರ ಮನೆಬಾಗಿಲಿಗೆ ಹೋಗುವ ಸ್ಥಿತಿಯಿತ್ತು. ಆದರೀಗ, ಪರಿಸ್ಥಿತಿ ತದ್ವಿರುದ್ಧವಾಗಿದೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಆರಂಭಗೊಂಡ ಕೆಲ ದಿನಗಳಲ್ಲೇ ಸ್ಥಾನಗಳು ಭರ್ತಿಯಾಗಿವೆ, ಕೆಲವೆಡೆಯಂತೂ ಸಾಮರ್ಥ್ಯ ಮೀರಿ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಸಲು ಪಾಲಕರು ಮುಗಿಬಿದ್ದಿರುವುದು ಇದಕ್ಕೆ ನಿದರ್ಶನ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಂಟನೇ ತರಗತಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಸೇರಿ 137 ಮಕ್ಕಳು ದಾಖಲಾಗಿರುವುದು ವಿಶೇಷವೇ ಸರಿ. ಹೊರ ಜಿಲ್ಲೆಯಿಂದಲೂ ಮಕ್ಕಳನ್ನು ದಾಖಲಿಸಲು ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಹಲವೆಡೆ ಇದೇ ಚಿತ್ರಣ ಕಂಡುಬರುತ್ತಿದೆ. ಸರ್ಕಾರಿ ಶಾಲೆಗಳತ್ತ ಜನರ ಆಸಕ್ತಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸರ್ಕಾರ ಈ ಬೆಳವಣಿಗೆಯನ್ನು ಅವಕಾಶವನ್ನಾಗಿ ಬಳಸಿಕೊಳ್ಳಬೇಕು ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಇದು ಮೈಲಿಗಲ್ಲಾಗಬೇಕು. ಕಲಿಕೆಯ ಮಟ್ಟ ಸುಧಾರಣೆಗೊಂಡು, ಗುಣಮಟ್ಟದ ಶಿಕ್ಷಣ ದೊರೆಯುವಂತಾದರೆ ಅದೊಂದು ಮಹತ್ವದ ಪರಿವರ್ತನೆಯಾಗಬಲ್ಲದು.
ಸರ್ಕಾರಿ ಶಾಲೆಗಳ ಕುರಿತಾದ ಈ ಸಕಾರಾತ್ಮಕ ಬೆಳವಣಿಗೆ ಭರವಸೆ ಮೂಡಿಸುವಂಥದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅದೆಷ್ಟೋ ಶಾಲೆಗಳು ಮೂಲಸೌಕರ್ಯವಿಲ್ಲದೆ ಬಳಲುತ್ತಿದ್ದು, ಅವುಗಳ ಕಾಯಕಲ್ಪಕ್ಕೆ ಮುಂದಾಗಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿಗಳ ದುರಸ್ತಿ ಮಾಡಿಸಿ, ಶೌಚಗೃಹ, ಶುದ್ಧ ಕುಡಿಯುವ ನೀರು, ಪಿಠೋಪಕರಣ, ಪಾಠೋಪಕರಣದ ವ್ಯವಸ್ಥೆ ಮಾಡಬೇಕಿದೆ. ಮಕ್ಕಳಿಗೆ ಸಮವಸ್ತ್ರಗಳಿಲ್ಲ, ಸಮರ್ಪಕವಾಗಿ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಮಳೆ, ಗಾಳಿಯಿಂದ ಹಾನಿಗೀಡಾದ ಕಟ್ಟಡಗಳ ದುರಸ್ತಿಯಾಗಿಲ್ಲ. ಕಲಿಕಾ ಚೇತರಿಕೆ ಕಾರ್ಯಕ್ರಮ ನಿರ್ವಹಿಸಲು ಅತಿಥಿ ಶಿಕರಿಗೆ ತರಬೇತಿ ನೀಡಲಾಗಿಲ್ಲ. ಹೀಗೆ ಹಲವು ಕೊರತೆಗಳು ಢಾಳಾಗಿ ಕಂಡುಬರುತ್ತಿವೆ. ಮಕ್ಕಳ ಸಂಭ್ರಮಕ್ಕೆ, ಶಿಕ್ಷಕರ ಉತ್ಸಾಹಕ್ಕೆ, ಪ್ರಯತ್ನಗಳಿಗೆ ಈ ಕೊರತೆಗಳು ಅಡ್ಡಿಯಾಗಬಾರದು. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿರುವ ಹೊತ್ತಲ್ಲಿ ಮೂಲಸೌಕರ್ಯದ ವಿಸ್ತರಣೆಯ ಜತೆಗೆ ಸೂಕ್ತ ಕಲಿಕಾ ವಾತಾವರಣ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಬೇಕು.