

ಕರೊನಾ ಎರಡನೇ ಅಲೆ ತೀವ್ರವಾಗಿದೆ. ಇನ್ನೇನು ತಹಬಂದಿಗೆ ಬಂತು ಎಂಬಂತಿದ್ದ ಈ ಸಾಂಕ್ರಾಮಿಕ ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲನ್ನೇ ಒಡ್ಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕದಲ್ಲಿ ಹೊಸ ನಿಯಮಗಳು ಬುಧವಾರದಿಂದ ಜಾರಿಗೆ ಬಂದಿವೆ. ಈ ಪ್ರಕಾರ, ರಾತ್ರಿ ಕರ್ಫ್ಯೂ ಎಲ್ಲ ಪ್ರದೇಶಗಳಿಗೆ ವಿಸ್ತರಣೆಯಾಗಿದೆ, ಅವಧಿಯನ್ನೂ ಹೆಚ್ಚಿಸಲಾಗಿದೆ. ಪೂರ್ಣ ಲಾಕ್ಡೌನ್ ಮಾಡಿದರೆ ಜನಜೀವನಕ್ಕೆ ಮತ್ತು ಆರ್ಥಿಕತೆಗೆ ತಡೆದುಕೊಳ್ಳಲು ಅಸಾಧ್ಯವಾಗಬಹುದು ಎಂಬ ಕಾರಣಕ್ಕೆ ಭಾಗಶಃ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ‘ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಜನರು ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಕಠಿಣ ನಿಯಮಗಳ ಜಾರಿ ಅನಿವಾರ್ಯವಾಗುತ್ತದೆ’ಎಂದು ಸರ್ಕಾರ ಎಚ್ಚರಿಸಿದೆ.
ಇದರ ಜತೆಗೆ, ಐಸಿಯು ಬೆಡ್ಗಳ ಕೊರತೆ, ಚಿಕಿತ್ಸೆಗೆ ಆಕ್ಸಿಜನ್ ಸಮಸ್ಯೆ ಮುಂತಾದವು ಸಹ ಬಾಧಿಸುತ್ತಿವೆ. ಇದರಿಂದಾಗಿ ಸೋಂಕಿತರು ಮತ್ತು ಕುಟುಂಬಿಕರು ತೊಂದರೆ ಎದುರಿಸಬೇಕಾಗಿದೆ. ಜನರಿಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಕೂಡ ಆಗಬೇಕಿದೆ. ಈ ನಡುವೆ, ಕೆಲವರು ಈ ಸನ್ನಿವೇಶವನ್ನೇ ದುರುಪಯೋಗ ಪಡಿಸಿಕೊಂಡು ಹಣಮಾಡುವ ಕೃತ್ಯಕ್ಕೆ ಮುಂದಾಗಿರುವುದು ಅಮಾನವೀಯ, ಅಕ್ಷಮ್ಯ. ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ರೆಮ್ೆಸಿವಿರ್ ಔಷಧ ಮಹತ್ವದ ಪಾತ್ರ ವಹಿಸುತ್ತದೆ. ಇದರ ಬೆಲೆ ಕೂಡ ಹೆಚ್ಚು. ಕೆಲವು ಕಡೆಗಳಲ್ಲಿ ಈ ಔಷಧ ಸೂಕ್ತ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಈ ಪರಿಸ್ಥಿತಿಯನ್ನು ಕೆಲವರು ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ದುರಂತವೇ ಸರಿ.
ಅಕ್ರಮವಾಗಿ ರೆಮ್ೆಸಿವಿರ್ ಔಷಧ ಸಂಗ್ರಹ ಮಾಡಿಕೊಂಡ ಪ್ರಕರಣಗಳ ಜತೆಗೆ, ನಕಲಿ ರೆಮ್ೆಸಿವಿರ್ ಮಾರಾಟ ಜಾಲವನ್ನು ಕೂಡ ಪತ್ತೆಹಚ್ಚಲಾಗಿದೆ. ಇದಲ್ಲದೆ, ಈ ಔಷಧವನ್ನು ಎಂಆರ್ಪಿಗಿಂತ ಅಧಿಕ ಬೆಲೆಗೆ ಮಾರುತ್ತಿರುವ ಪ್ರಕರಣಗಳು ಕಂಡುಬಂದಿವೆ. ಇನ್ನು, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಂಬುಲೆನ್ಸ್ ಎಷ್ಟು ಇದ್ದರೂ ಕಡಿಮೆ ಎನ್ನುವಂತಾಗಿದೆ. ಈ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಕೆಲವರು ಸೋಂಕಿತರನ್ನು ಕರೆದೊಯ್ಯಲು ಹೆಚ್ಚಿಗೆ ಹಣ ಕೇಳುವ ಪ್ರಕರಣಗಳು ಕೂಡ ವರದಿಯಾಗುತ್ತಿವೆ.
ಮತ್ತೊಂದೆಡೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ಗೆ ಬೇಡಿಕೆ ವಿಪರೀತ ಹೆಚ್ಚಿದೆ. ಸಕಾಲಕ್ಕೆ ಆಮ್ಲಜನಕ ವ್ಯವಸ್ಥೆ ಸಿಗದೆ ರೋಗಿಗಳು ಸಾವನ್ನಪ್ಪಿದ ನಿದರ್ಶನಗಳು ಕೂಡ ಇವೆ. ಹೀಗಿರುವಾಗ, ಕೆಲವು ತಯಾರಕರು ಆಕ್ಸಿಜನ್ ಸಿಲಿಂಡರ್ಗಳಿಗೆ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ಕೇಳುತ್ತಿರುವ ದೂರುಗಳು ಬಂದಿವೆ. ಇವೆಲ್ಲವೂ ಅನಿವಾರ್ಯತೆಯನ್ನೇ ದಾಳವಾಗಿಸಿಕೊಂಡು ಹಣಮಾಡುವ ವಿಕೃತ ಮನಸ್ಥಿತಿಯಲ್ಲದೆ ಮತ್ತೇನಲ್ಲ. ಸರ್ಕಾರ ಇಂಥವರ ವಿರುದ್ಧ ತ್ವರಿತವಾಗಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಂದಾಗ ಇತರರಿಗೆ ಎಚ್ಚರಿಕೆಯ ಸಂದೇಶ ನೀಡಿದಂತಾಗುತ್ತದೆ. ಕರೊನಾ ಹೇಗೆ ಒಂದು ಆರೋಗ್ಯ ಸಮಸ್ಯೆಯೋ ಹಾಗೇ ಮಾನವೀಯ ಬಿಕ್ಕಟ್ಟು ಕೂಡಾ ಹೌದು. ಸಾಮೂಹಿಕ ಹೋರಾಟವೇ ಇದರ ನಿಯಂತ್ರಣಕ್ಕೆ ಪರಿಣಾಮಕಾರಿ ಅಸ್ತ್ರ. ಈ ಸಂಗತಿ ಎಲ್ಲರ ಗಮನದಲ್ಲಿರಬೇಕು.