

ದೇಶದ ಮೂರನೇ ಎರಡು ಜನಸಂಖ್ಯೆಯ ಪ್ರಮುಖ ಆಹಾರವೇ ಅಕ್ಕಿ. ಅನ್ನವಿಲ್ಲದ ಊಟವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ‘ಕೃಷಿಯನ್ನು ನಿರ್ಲಕ್ಷಿಸಿದರೆ ತಿನ್ನಲು ಏನು ಮಾಡುವಿರಿ, ಚಿನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಹಿರಿಯರ ಅನುಭವದ ಮಾತುಗಳ ಮಹತ್ವ ಈಗ ಮತ್ತಷ್ಟು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೃಷಿಯಿಂದ ರೈತರು ವಿಮುಖವಾಗುತ್ತಿರುವುದು ಮತ್ತೊಂದೆಡೆ ವಾಣಿಜ್ಯ ಬೆಳೆಗಳತ್ತ ಒಲವು ತೋರುತ್ತಿರುವುದು, ಮೇಲಾಗಿ ಹವಾಮಾನ ವೈಪರೀತ್ಯದ ಸಮಸ್ಯೆ; ಇದೆಲ್ಲದರ ಪರಿಣಾಮ ಭತ್ತ ಬೆಳೆಯುವ ಪ್ರದೇಶದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಮತ್ತು ಪರಿಸ್ಥಿತಿ ಹೀಗೆ ಮುಂದುವರಿದರೆ ಬರುವ ಹತ್ತು ವರ್ಷಗಳಲ್ಲಿ ದೇಶದಾದ್ಯಂತ ಅನ್ನಕ್ಕೂ ಕುತ್ತು ಬರಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. 1996-97ರಿಂದ 2018-19ರವರೆಗೂ ಭತ್ತ ಬೆಳೆಯುವ ಪ್ರದೇಶ 43 ದಶಲಕ್ಷ ಹೆಕ್ಟೇರ್ನ ಆಸುಪಾಸಿನಲ್ಲಿ ಇದೆ.
ಭತ್ತ ಬೆಳೆಯುವ ರೈತನಿಗೆ ಒಂದೆಡೆ ಸರ್ಕಾರಗಳು ಘೋಷಿಸುವ ‘ಬೆಂಬಲ ಬೆಲೆ’ ಗೊಂದಲದ ಬಲೆಯಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಜಾಗತಿಕ ತಾಪಮಾನ ಏರಿಕೆಯ ಬಿಸಿ ಶಾಪವಾಗಿ ಪರಿಣಮಿಸಲಾರಂಭಿಸಿದೆ. ಇದರಿಂದ ಮುಂಬರುವ ದಿನಗಳಲ್ಲಿ ಅಕ್ಕಿಯ ಕೊರತೆ ಕಾಡಬಹುದು ಮತ್ತು ಬೆಲೆ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಕರ್ನಾಟಕದ ಮಟ್ಟಿಗೆ ಹೇಳುವುದಾದರೂ ಅಕ್ಕಿ ಪ್ರಮುಖ ಆಹಾರಧಾನ್ಯವಾಗಿ ಬಳಸಲಾಗುತ್ತದೆ. ಆದರೆ, ಬೆಳೆಯ ಪ್ರಮಾಣವೇ ಕುಸಿತಗೊಂಡರೆ ಗತಿಯೇನು ಎಂಬ ಗಂಭೀರ ಪ್ರಶ್ನೆಗೆ ಸಮರ್ಪಕ ಉತ್ತರ ಕಂಡುಕೊಳ್ಳುವ ಕಾಲ ಎದುರಾಗಿದೆ. ಇದನ್ನೂ ಓದಿ: ವಿಜಯವಾಣಿ ಸಂಪಾದಕೀಯ: ಜವಾಬ್ದಾರಿ ನಿಭಾಯಿಸಲಿ
ಹಲವು ರಾಜ್ಯಗಳಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದನ್ನು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸುತ್ತವೆ. ಆದ್ದರಿಂದ, ಅಲ್ಲಿನ ಪ್ರದೇಶದಕ್ಕೆ ಬೇಕಾದ ಆಹಾರ ಧಾನ್ಯಗಳು, ಇತರ ಬೆಳೆಗಳನ್ನು ಸಮರ್ಪಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಆ ವ್ಯವಸ್ಥೆ ಇಲ್ಲ. ಇದರಿಂದ ವಾಣಿಜ್ಯ ಬೆಳೆಗಳ ಪಾರಮ್ಯ ಹೆಚ್ಚುತ್ತಿದೆ. ಅಲ್ಲದೆ, ಯಾವ ಬೆಳೆಗೆ ಹೆಚ್ಚು ಬೆಲೆ ಇದೆಯೋ ಅದನ್ನೇ ಬಹುತೇಕ ರೈತರು ಬೆಳೆಯಲು ಮುಂದಾಗುತ್ತಾರೆ. ಇದರಿಂದ ಉತ್ಪಾದನೆ ಪ್ರಮಾಣ ಹೆಚ್ಚಾಗಿ ಬೆಲೆ ದಿಢೀರೆಂದು ಕುಸಿದು, ರೈತರು ಮತ್ತೆ ಕಂಗಾಲಾಗುತ್ತಾರೆ. ರಾಜ್ಯದಲ್ಲಿ ಭತ್ತಕ್ಕೆ ಸಮರ್ಪಕ ಮಾರುಕಟ್ಟೆ ಇಲ್ಲದಿರುವುದರಿಂದ ಬಹುತೇಕ ರೈತರು ನೆರೆಯ ತಮಿಳುನಾಡು ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಬೆಂಬಲ ಬೆಲೆಯ ಗೊಂದಲ, ಕೆಲವು ಅಕ್ಕಿ ಗಿರಣಿಗಳ ಏಕಸ್ವಾಮ್ಯ, ಏರಿಕೆಯಾಗುತ್ತಿರುವ ಕಾರ್ವಿುಕ ವೆಚ್ಚವೂ ರೈತರನ್ನು ಬಾಧಿಸುತ್ತಿದ್ದು, ಭತ್ತ ಬೆಳೆಯುವುದರಿಂದ ದೂರವಾಗುತ್ತಿದ್ದಾರೆ.
ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಅಕ್ಕಿಯ ಕೊರತೆ ಸೃಷ್ಟಿಯಾದ ಮೇಲೆ ಎಚ್ಚೆತ್ತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಭತ್ತ ಬೆಳೆಯುವ ಪ್ರದೇಶ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕು, ಈ ನಿಟ್ಟಿನಲ್ಲಿ ರೈತರಿಗೆ ಸಮರ್ಪಕ ಪ್ರೋತ್ಸಾಹ ಒದಗಿಸಿ ಕೊಡಬೇಕು, ಬೆಂಬಲ ಬೆಲೆಯಲ್ಲಿನ ಗೊಂದಲ ಪರಿಹಾರ ಮಾಡಿ, ಸಮರ್ಪಕ ಬೆಲೆ ಸಿಗುವಂತೆ ಮಾಡಬೇಕು. ಒಟ್ಟಾರೆ, ಒಂದು ಸ್ಪಷ್ಟ ನೀತಿಯನ್ನು ರೂಪಿಸಿ, ಅಳವಡಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರವಿರಲಿ. ಇದನ್ನೂ ಓದಿ: ಸಂಪಾದಕೀಯ: ಸೂಕ್ತ ಸಿದ್ಧತೆ ಅಗತ್ಯ; ಮಳೆ ಅನಾಹುತ ತಡೆಗಟ್ಟಲು ಜನಪ್ರತಿನಿಧಿಗಳು ಕಾಳಜಿ ತೋರಲಿ