

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಹಾಗೂ ಭೂಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲೀಗ ಕೆಲ ರೈತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಇಂದು, ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಕೆಲವು ಸಾರ್ವಜನಿಕ ಸೌಲಭ್ಯಗಳು ಎಂದಿನಂತೆ ಇರಲಿದ್ದು, ಬಂದ್ ನಿಮಿತ್ತ ಕೆಲವು ಸೇವೆಗಳು ಇರುವುದಿಲ್ಲ. ಈ ನಡುವೆ, ಸಂಸತ್ ಈಚೆಗೆ ಅಂಗೀಕರಿಸಿರುವ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿಗಳು ಭಾನುವಾರ ಸಹಿಹಾಕಿದ್ದು, ಅವು ಕಾನೂನಾಗಿ ಜಾರಿಗೆ ಬರಲಿವೆ. ವಿಪಕ್ಷಗಳು ಈ ಮಸೂದೆಗಳನ್ನು ವಿರೋಧಿಸುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತದೆ, ಖಾಸಗಿಯವರಿಗೆ ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸುತ್ತಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಸರ್ಕಾರದ ಪ್ರಮುಖರೆಲ್ಲ ಮಸೂದೆಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದು, ಇವುಗಳಿಂದ ರೈತರಿಗೆ ಪ್ರಯೋಜನವಾಗುತ್ತದೆ, ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲು ಸಹಾಯವಾಗುತ್ತದೆ, 21ನೇ ಶತಮಾನಕ್ಕೆ ಅನುಗುಣವಾದ ಅಂಶಗಳನ್ನು ಇವು ಹೊಂದಿವೆ ಎಂದು ಹೇಳುತ್ತಿದ್ದಾರೆ. ಹೀಗಿದ್ದರೂ, ಪಂಜಾಬ್, ಹರಿಯಾಣ ಮುಂತಾದೆಡೆ ಪ್ರತಿಭಟನೆಗಳು ಮುಂದುವರಿದಿವೆ. ಇತ್ತ, ಕರ್ನಾಟಕ ವಿಧಾನಸಭೆಯು ವಿಪಕ್ಷಗಳ ವಿರೋಧದ ನಡುವೆಯೇ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿದೆ. ವಿಪಕ್ಷಗಳ ಒತ್ತಡಕ್ಕೆ ಮಣಿದು ಭೂ ಮಸೂದೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಸರ್ಕಾರ ಮಾಡಿಕೊಂಡಿದೆ. ಆದರೆ ಪ್ರಮುಖವಾದ ಮೂರು ಮಸೂದೆಗಳು ವಿಧಾನಪರಿಷತ್ನಲ್ಲಿ ಬಾಕಿ ಇದ್ದು, ಹಾಲಿ ವಿಧಾನಮಂಡಲ ಅಧಿವೇಶನ ಈಗ ಮುಗಿದಿರುವುದರಿಂದ ಸರ್ಕಾರ ಏನು ಮಾಡುತ್ತದೆಂಬುದನ್ನು ಕಾದುನೋಡಬೇಕು. ಸುಗ್ರೀವಾಜ್ಞೆ ದಾರಿಯಂತೂ ಸರ್ಕಾರಕ್ಕೆ ಮುಕ್ತವಾಗಿದೆ. ಇದನ್ನೂ ಓದಿ: 35 ಸಾವಿರ ರನ್ಸ್ಗೆ ಸಿಕ್ಕಿದ್ದರೆ 45 ಸಾವಿರ ಸಾಂಗ್ಸ್ಗೆ ಏಕೆ ಸಿಗಬಾರದು?
ಸರ್ಕಾರದ ನೀತಿನಿಲುವುಗಳು ಸರಿಬರದಿದ್ದರೆ ಅಥವಾ ಆ ಬಗ್ಗೆ ವಿರೋಧ ಇದ್ದರೆ ಪ್ರತಿಭಟನೆ ನಡೆಸಲು ಜನರಿಗೆ ಹಕ್ಕಿದೆ. ಇದು ಪ್ರಜಾತಂತ್ರ ಒದಗಿಸುವ ಅಮೂಲ್ಯ ಅವಕಾಶ. ಆದರೆ ಬಂದ್ ಅಥವಾ ಪ್ರತಿಭಟನೆಯಂತಹ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ, ಕಿಡಿಗೇಡಿಗಳು ಈ ಸನ್ನಿವೇಶವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಮಾಡದಂತೆ ಎಚ್ಚರ ವಹಿಸುವ ವಿವೇಕವನ್ನೂ ಪ್ರದರ್ಶಿಸಬೇಕಾಗುತ್ತದೆ. ಏಕೆಂದರೆ, ಇಂಥ ಸಂದರ್ಭದಲ್ಲಿ ಯಾವುದೇ ಹಾನಿಯಾದಲ್ಲಿ ಅದರಿಂದ ತೊಂದರೆಯಾಗುವುದು ಮತ್ತು ಕಷ್ಟನಷ್ಟ ಎದುರಿಸಬೇಕಾಗುವುದು ನಾವೇ ಮತ್ತು ನಮ್ಮದೇ ಸರ್ಕಾರ ಎಂಬುದನ್ನು ಮರೆಯಬಾರದು. ಹಿಂದೆ ಎಷ್ಟೋ ಸಂದರ್ಭಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಈ ಮಾತು. ಕರೊನಾ ಹಾವಳಿಯ ಈ ಸನ್ನಿವೇಶದಲ್ಲಿ ಕೃಷಿ ಸೇರಿದಂತೆ ಎಲ್ಲ ರಂಗಗಳು ತೀವ್ರ ಸಂಕಷ್ಟದಲ್ಲಿವೆ. ಅಪಾರ ಉದ್ಯೋಗನಷ್ಟವಾಗಿದೆ. ಇದರಿಂದ ಹೊರಬರಲು ಸರ್ಕಾರಗಳ ನೀತಿನಿರ್ಣಯಗಳಲ್ಲಿ ಒಂದಷ್ಟು ಬದಲಾವಣೆಗಳು ಹಾಗೇ ಹೊಸ ರೀತಿಯ ಆಲೋಚನೆಗಳು ಅನಿವಾರ್ಯ. ಆದರೆ ಹೀಗೆ ಬದಲಾವಣೆ ತರುವಾಗ ಅದರಲ್ಲಿ ರಾಜಕೀಯ ಬೆರೆಸದೆ ಜನಸಾಮಾನ್ಯರ ಹಿತವೇ ಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸಂಯಮ ಹಾಗೂ ಬದ್ಧತೆಯನ್ನು ಪ್ರದರ್ಶಿಸಬೇಕು. ಹಾಗೇ, ಸಂಬಂಧಪಟ್ಟ ಸಂಘಟನೆಗಳು ಕೂಡ ಈ ವಿಷಯದಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಬೇಕಾದುದು ಸದ್ಯದ ಅಗತ್ಯ. ಕರೊನೊತ್ತರ ಬದುಕನ್ನು ಕಟ್ಟಿಕೊಳ್ಳುವುದು ಸಾಮೂಹಿಕ ಹೊಣೆಗಾರಿಕೆ ಎಂಬದು ಎಲ್ಲರ ನೆನಪಿನಲ್ಲಿರಬೇಕು.