

ರಾಜಕೀಯದಲ್ಲಿ ಅಪರಾಧೀಕರಣ ಹೆಚ್ಚುತ್ತಲೇ ಸಾಗಿರುವುದು ತೀವ್ರ ಕಳವಳದ ವಿಷಯ. ಗಂಭೀರ ಆಪಾದನೆಗಳಿದ್ದರೂ, ‘ಗೆಲ್ಲುವ ಅರ್ಹತೆ’ಯನ್ನಷ್ಟೇ ನೋಡಿ ರಾಜಕೀಯ ಪಕ್ಷಗಳು ಕಳಂಕಿತರಿಗೆ ಟಿಕೆಟ್ ನೀಡುವುದು ಮತ್ತು ಅಂಥವರು ಗೆದ್ದು ಬರುತ್ತಿರುವುದಕ್ಕೆ ಇತ್ತೀಚಿನ ವರ್ಷಗಳ ರಾಜಕಾರಣ ಸಾಕ್ಷಿಯಾಗಿದೆ. ಇತರೆ ಕ್ಷೇತ್ರದ ಶುದ್ಧೀಕರಣಗಳ ಬಗ್ಗೆ ಮಾತನಾಡುವ ರಾಜಕೀಯ ಕ್ಷೇತ್ರ ತನ್ನದೇ ಶುದ್ಧಿಕರಣ ಮಾಡಿಕೊಳ್ಳದಿದ್ದರೆ, ಕಳಂಕಿತರನ್ನು ದೂರವಿಡದಿದ್ದರೆ ಏನು ಸಾರ್ಥಕ? ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಂಡ ಚುನಾವಣಾ ಆಯೋಗ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಸ್ಪರ್ಧೆಗೆ ಕಡಿವಾಣ ಹಾಕಲು ಮುಂದಾಗಿತ್ತು. ಪ್ರಸಕ್ತ, ಸುಪ್ರೀಂ ಕೋರ್ಟ್ ಕೂಡ ಆ ನಿಲುವನ್ನೇ ಎತ್ತಿ ಹಿಡಿದಿರುವುದು ಒಳ್ಳೆಯ ಸಂದೇಶ. ರಾಜಕೀಯ ಪಕ್ಷಗಳು ಬದಲಾವಣೆಗೆ ಒಗ್ಗಿಕೊಳ್ಳಬೇಕಾದ ಘಟ್ಟವೂ ಹೌದು.
ಅಪರಾಧಿಕ ಹಿನ್ನೆಲೆ ಇರುವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ತಮ್ಮ ಮೇಲಿರುವ ಪ್ರಕರಣಗಳ ವಿವರವನ್ನು ಮಾಧ್ಯಮದಲ್ಲಿ ಜಾಹೀರಾತು ನೀಡುವ ಮೂಲಕ ಸಂಪೂರ್ಣ ವಿವರ ಒದಗಿಸಬೇಕು ಎಂದು ಈ ಹಿಂದೆ ಚುನಾವಣಾ ಆಯೋಗ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಅಪರಾಧ ಪ್ರಕರಣಗಳ ವಿವರಗಳನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಹೇಳಿದೆ. ಚುನಾವಣಾ ರಾಜಕೀಯದಿಂದ ಕ್ರಿಮಿನಲ್ ಹಿನ್ನೆಲೆ ಇರುವವರನ್ನು ದೂರ ಇರಿಸುವಂತೆ ರಾಜಕೀಯ ಪಕ್ಷಗಳಿಗೆ ಸಲಹೆಯನ್ನೂ ನೀಡಿದೆ.
‘ಅಪರಾಧ ಪ್ರಕರಣಗಳು ಬಾಕಿ ಇರುವವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಪಕ್ಷಗಳು ಕಾರಣ ಪ್ರಕಟಿಸಬೇಕು. ಅದು ಅವರ ಅರ್ಹತೆ, ಸಾಧನೆಗಳನ್ನು ಸಮರ್ಥಿಸಿ ಕೊಳ್ಳುವಂತಿರಬೇಕು. ಕೇವಲ ಅವರು ಗೆಲ್ಲುವ ಸಾಧ್ಯತೆಯನ್ನು ಆಧರಿಸಿ ಇರಬಾರದು’ ಎಂದು ನ್ಯಾಯಮೂರ್ತಿ ಆರ್.ಎಫ್.ನರಿಮನ್ ನೇತೃತ್ವದ ನ್ಯಾಯಪೀಠ ಆದೇಶದಲ್ಲಿ ಸೂಚಿಸಿರುವುದು ಗಮನಾರ್ಹ. ಇನ್ಮುಂದೆ, ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 72 ಗಂಟೆಯೊಳಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವುದು ಕಡ್ಡಾಯ. ಪಕ್ಷಗಳು ವರದಿ ಸಲ್ಲಿಸಲು ವಿಫಲವಾದಲ್ಲಿ, ಈ ವಿಷಯವನ್ನು ಆಯೋಗ ಸುಪ್ರೀಂ ಕೋರ್ಟ್ ಗಮನಕ್ಕೆ ತರಬಹುದಾಗಿದೆ.
ಇಂಥ ಸುಧಾರಣೆಯ ಅವಶ್ಯಕತೆ ತುಂಬ ಇತ್ತು. ಪ್ರಜಾಪ್ರಭುತ್ವದ ಆಶಯವನ್ನು, ಅದರ ಮೌಲ್ಯಗಳನ್ನು ಗಟ್ಟಿಗೊಳಿಸಲು ಈ ಆದೇಶ ಪೂರಕವಾಗಲಿದೆ. ರಾಜಕೀಯ ಪಕ್ಷಗಳ ಮೇಲಿನ ನೈತಿಕ ಜವಾಬ್ದಾರಿ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂಬುದನ್ನು ಗಮನಿಸಬೇಕು. ರಾಜಕೀಯ ಪಕ್ಷಗಳು ಸ್ವಯಂಪ್ರೇರಿತವಾಗಿ ಅಪರಾಧೀಕರಣಕ್ಕೆ, ಕಳಂಕಿತರಿಗೆ ಕಡಿವಾಣ ಹಾಕಿದ್ದಲ್ಲಿ ಈ ಸಮಸ್ಯೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ. ಇನ್ನಾದರೂ ರಾಜಕೀಯ ಪಕ್ಷಗಳು ಗಂಭಿರವಾಗಿ ವರ್ತಿಸಬೇಕು. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳನ್ನು ಚಾಚುತಪ್ಪದೆ ಪಾಲಿಸಬೇಕು. ಅಪರಾಧೀಕರಣದ ನಿಯಂತ್ರಣ ಬಹುದೊಡ್ಡ ಜವಾಬ್ದಾರಿ ಮತ್ತು ಈಗಿನ ತುರ್ತು ಅಗತ್ಯವೂ ಹೌದು. ಹಾಗಾಗಿ, ರಾಜನೀತಿಯಲ್ಲಿ ನೈತಿಕತೆ, ಮೌಲ್ಯಾಧಾರಿತ ಆರೋಗ್ಯಕರ ಸ್ಪರ್ಧೆ, ಪಾರದರ್ಶಕತೆಗಳನ್ನು ಅಳವಡಿಸಿಕೊಂಡು ಕಳಂಕಿತರನ್ನು ದೂರ ಇಡಬೇಕು. ಆಗಲೇ, ರಾಜಕೀಯ ವ್ಯವಸ್ಥೆ ಇನ್ನಷ್ಟು ಬಲಶಾಲಿಯಾಗಲು, ಸಮಾಜಮುಖಿಯಾಗಿ ಕೆಲಸ ಮಾಡಲು ಸಾಧ್ಯ.