

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನಾಂ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರ ಹೆಸರಿಗೆ ಜಮೀನು ಹಕ್ಕು ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಪರಿಶೀಲನೆಗೆ ರಚಿಸಲಾಗಿದ್ದ ಸಮಿತಿಯ ವರದಿಯ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಾವಿರಾರು ರೈತರಿಗೆ ಎದುರಾಗಿದ್ದ ಗೊಂದಲ, ಅತಂತ್ರ ಸ್ಥಿತಿಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇದು ಉತ್ತಮ ಹೆಜ್ಜೆ ಎಂದು ಹೇಳಬಹುದಾಗಿದೆ. ಇನಾಂ ಭೂಮಿ ಹಕ್ಕು ಕುರಿತು ಅರ್ಜಿ ಸಲ್ಲಿಸಲು ಈ ಹಿಂದೆ ಅವಕಾಶ ನೀಡಲಾಗಿತ್ತಾದರೂ, ಮಾಹಿತಿ ಕೊರತೆಯಿಂದಾಗಿ ಅನೇಕರು ಅರ್ಜಿ ಸಲ್ಲಿಸಿರಲಿಲ್ಲ. ಈ ರೀತಿ ಸುಮಾರು 70 ಸಾವಿರ ಎಕರೆ ಇನಾಂ ಜಮೀನು ಇದೆ ಎಂದು ಅಂದಾಜಿಸಲಾಗಿದೆ. ಇನಾಂ ಜಮೀನು ಒಡೆತನದ ಸಮಸ್ಯೆ ಇತ್ಯರ್ಥಕ್ಕಾಗಿ ಸರ್ಕಾರ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದು, ಆಯಾ ರೈತರ ಹೆಸರಿಗೆ ಜಮೀನಿನ ಹಕ್ಕು ನೀಡಬೇಕೆಂಬ ಶಿಫಾರಸು ಮಾಡಿದೆ.
ತಿಳಿವಳಿಕೆ ಕೊರತೆಯಿಂದ ಅರ್ಜಿ ಸಲ್ಲಿಸಿ ದಾಖಲೆ ಪಡೆಯಲು ಸಾಧ್ಯವಾಗದ ರೈತರಿಗೆ ಇನ್ನೆರಡು ವರ್ಷ ಕಾಲಾವಕಾಶ ನೀಡಿ, ಅರ್ಜಿ ಪಡೆಯಬೇಕು ಎಂದು ಸಮಿತಿ ಹೇಳಿದ್ದು, ಈ ಶಿಫಾರಸನ್ನು ಸರ್ಕಾರ ಅಂಗೀಕರಿಸಿದೆ. ಹೀಗೆ ಪುನಃ ಅರ್ಜಿ ಕರೆಯುವುದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿ, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂಬ ಸಕಾರಾತ್ಮಕ ಅಭಿಪ್ರಾಯವನ್ನು ಸಚಿವ ಅಶೋಕ್ ಹೇಳಿದ್ದಾರೆ. ನಾನಾ ಕಾರಣಕ್ಕೆ ಕೃಷಿ ಲಾಭದಾಯಕವಲ್ಲ ಎಂಬ ಅನಿಸಿಕೆ ಬಲವಾಗುತ್ತ, ಬೆಲೆ-ಫಸಲು ಏರಿಳಿತಗಳ ನಡುವೆ ರೈತರು ಏಗುತ್ತಿರುವಾಗ, ಅನೇಕರು ಕೃಷಿಗೆ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಇಂಥ ನಿರ್ಧಾರಗಳು ರೈತರಲ್ಲಿ ಒಂದಷ್ಟು ಭರವಸೆ ತುಂಬಬಲ್ಲವು. ಹಿಂದಿನ ಕಾಲದಲ್ಲಿ ಸಮಾಜಕ್ಕೆ ಬೇರೆ ಬೇರೆ ಬಗೆಯಲ್ಲಿ ನೆರವಾದವರಿಗೆ, ಸಮಾಜಸೇವಕರಿಗೆ ಬಳುವಳಿ ರೂಪದಲ್ಲಿ ಜಮೀನು ನೀಡುವ ರೂಢಿ ಇತ್ತು. 100, 200, 500 ಎಕರೆ ಹೀಗೆ ದೊಡ್ಡ ಪ್ರಮಾಣದ ಭೂಮಿಯನ್ನೂ ನೀಡಿದ ಉದಾಹರಣೆಗಳಿವೆ. ಆದರೆ ಹಾಗೆ ಭೂಮಿ ಪಡೆದವರೆಲ್ಲರೂ ಉಳುಮೆ ಮಾಡಲಾಗದೆ ರೈತರಿಗೆ ನೀಡುತ್ತಿದ್ದರು. ಈ ಭೂಮಿಯ ಹಕ್ಕನ್ನು ಆಯಾ ರೈತರಿಗೆ ನೀಡಬೇಕೆಂಬ ಆಗ್ರಹ-ಬೇಡಿಕೆ ಬಹಳ ವರ್ಷಗಳಿಂದ ಇತ್ತು.
ಇದೇ ರೀತಿ, ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಕುಮ್ಕಿ, ಬಾಣೆ, ಹಾಡಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ, ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ಅವರ ಹೆಸರಿಗೇ ಮಾಡಿಕೊಡಬೇಕೆಂಬ ಬೇಡಿಕೆ ಕೂಡ ಹಲವು ವರ್ಷಗಳಿಂದ ಇದೆ. ಈ ನಿಟ್ಟಿನಲ್ಲಿ ಕೂಡ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ. ರಾಜ್ಯದಲ್ಲಿರುವ ಡೀಮ್್ಡ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಭೂಮಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳಿಂದಾಗಿ ಈ ಸಮಸ್ಯೆ ಹಲವು ವರ್ಷಗಳಿಂದ ಬಗೆಹರಿಯುತ್ತಿಲ್ಲ. ಇಂಥ ಭೂಮಿಯನ್ನು ಬಿಟ್ಟುಕೊಟ್ಟರೆ ಅರಣ್ಯ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆಂಬ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರಾದರೂ ಸರ್ಕಾರ ರೈತರ ಬೇಡಿಕೆಗೆ ಮನ್ನಣೆ ನೀಡುವ ಮನಸ್ಸು ಮಾಡಿದೆ.