ಸಂಪಾದಕೀಯ| ಲೋಪಗಳನ್ನು ನಿವಾರಿಸಿ

Paddy
Published on

ಕೃಷಿಕ್ಷೇತ್ರ ಮತ್ತು ರೈತರ ಕಲ್ಯಾಣದ ಹೆಸರಲ್ಲಿ ಅದೆಷ್ಟೋ ಯೋಜನೆ, ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸುತ್ತಲೇ ಇರುತ್ತವೆ. ಇಂಥ ಯೋಜನೆಗಳು ಬಂದಾಗ ರೈತರಲ್ಲಿ ಒಂದಿಷ್ಟು ನಿರೀಕ್ಷೆ ಮೂಡಿ, ಹಳೆಯ ಸಮಸ್ಯೆ, ಸಂಕಟಗಳಿಗೆ ಪರಿಹಾರ ದೊರೆಯಬಹುದು ಎಂಬ ಆಶಾಭಾವನೆ ಗರಿಗೆದರುತ್ತದೆ. ಆದರೆ, ಘೋಷಣೆಯ ಹೊತ್ತಲ್ಲಿ ಇರುವ ಉತ್ಸಾಹ ಅನುಷ್ಠಾನದ ವೇಳೆ ಕಾಣುವುದೇ ಇಲ್ಲ. ಅದೇ ನಿಧಾನಗತಿ ಧೋರಣೆ, ಹತ್ತುಹಲವು ನಿಯಮಗಳ ಬಂಧನ, ಸಮರ್ಪಕ ಮಾಹಿತಿಯ ಕೊರತೆ, ಫಲಾನುಭವಿಗಳನ್ನು ಸರಿಯಾಗಿ ತಲುಪುವ ಇಚ್ಛಾಶಕ್ತಿ ಇಲ್ಲದಿರುವುದು... ಹೀಗೆ ಸರಣಿ ಸಮಸ್ಯೆಗಳ ಚಕ್ರವ್ಯೂಹದೊಳಗೆ ಸಿಲುಕಿ ಯೋಜನೆ ತನ್ನ ಮೂಲೋದ್ದೇಶವನ್ನೇ ಕಳೆದುಕೊಳ್ಳುತ್ತದೆ. ಅಸಹಾಯಕ ಸ್ಥಿತಿಗೆ ಸಿಲುಕುವ ರೈತರು ಬಂದ ಬೆಲೆಗೆ ಬೆಳೆಗಳನ್ನು, ಇತರ ಕೃಷಿಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ. ಮತ್ತೆ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುತ್ತಾರೆ. ಆದರೆ, ಯೋಜನೆ ಸರಿಯಾಗಿ ಅನುಷ್ಠಾನಗೊಂಡರೆ ಸಾವಿರಾರು ರೈತರಿಗೆ ನೆಮ್ಮದಿ. ಈ ವಾಸ್ತವವನ್ನು ಸರ್ಕಾರದಲ್ಲಿ ಇರುವವರು ಏಕೆ ಮರೆಯುತ್ತಾರೋ ತಿಳಿಯದು.

ಬೆಳೆಗಳನ್ನು ಅಥವಾ ಕೃಷಿಉತ್ಪನ್ನಗಳನ್ನು ರೈತರು ಕಡಿಮೆ ದರದಲ್ಲಿ ಮಾರಾಟ ಮಾಡಿಕೊಂಡು ನಷ್ಟಕ್ಕೆ ಗುರಿ ಆಗಬಾರದು ಎಂಬ ಉದ್ದೇಶದಿಂದಲೇ ಬೆಂಬಲಬೆಲೆ ಯೋಜನೆ ಚಾಲ್ತಿಯಲ್ಲಿದೆ ಎಂಬುದು ಗೊತ್ತಿರುವಂಥದ್ದೇ. ಸರ್ಕಾರ ಈ ಸಂಬಂಧ ಖರೀದಿಕೇಂದ್ರಗಳನ್ನು ಆರಂಭಿಸುವ ಹೊತ್ತಿಗೆ ಅರ್ಧದಷ್ಟು ರೈತರು ಮುಕ್ತ ಮಾರುಕಟ್ಟೆಯಲ್ಲಿ ಕೃಷಿಉತ್ಪನ್ನವನ್ನು ಬಂದ ಬೆಲೆಗೆ ಮಾರಾಟ ಮಾಡಿಬಿಟ್ಟಿರುತ್ತಾರೆ. ಈ ಬಾರಿ ಭತ್ತದ ವಿಷಯದಲ್ಲೂ ಹೀಗೇ ಆಗಿದೆ. ಅಲ್ಲದೆ, ವಿಚಿತ್ರ ಷರತ್ತುಗಳು ಬೆಳೆಗಾರರಿಗೆ ಅಡ್ಡಿಯಾಗಿ ಪರಿಣಮಿಸಿವೆ.

ಕೇಂದ್ರ ಸರ್ಕಾರ ಗುಣಮಟ್ಟದ ಭತ್ತಕ್ಕೆ ಪ್ರತಿ ಕ್ವಿಂಟಲ್​ಗೆ -ಠಿ; 1886 ಬೆಂಬಲ ಬೆಲೆ ನಿಗದಿಪಡಿಸಿದರೂ ಸರ್ಕಾರದ ಎಡವಟ್ಟು ನಿರ್ಧಾರಗಳಿಂದ ರೈತರಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ. ತುಂಬ ವಿಳಂಬವಾಗಿ ಖರೀದಿಕೇಂದ್ರಗಳನ್ನು ಆರಂಭಿಸಲಾಗಿದೆ. ಅಲ್ಲದೆ, ಹಲವು ಜಿಲ್ಲೆಗಳಲ್ಲಿ ಈ ಬಾರಿ ನೇರವಾಗಿ ಖರೀದಿ ಕೇಂದ್ರಗಳಿಂದ ಖರೀದಿಸದೆ ರೈತರ ಹೆಸರು ನೋಂದಣಿ ಮಾಡಿಕೊಂಡು, ಸಮೀಪದ ಅಕ್ಕಿ ಗಿರಣಿಗೆ ಕೊಡಲು ಹೇಳುತ್ತಿರುವುದು ಹೊಸ ಸಮಸ್ಯೆಗೆ ಕಾರಣವಾಗಿದೆ. ಗಿರಣಿ ಮಾಲೀಕರು ಭತ್ತ ತಂದ ಮೇಲೆ ತೇವಾಂಶದ ಹೆಸರಿನಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ, ಹಣ ನೀಡದೆ 2-3 ತಿಂಗಳು ಸತಾಯಿಸುತ್ತಿದ್ದಾರೆ ಎಂಬುದು ಬೆಳೆಗಾರರ ಆರೋಪವಾಗಿದೆ. ಇವರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಬೇಕಿದೆ.

ಬೆಂಬಲಬೆಲೆ ಯೋಜನೆ, ಖರೀದಿಕೇಂದ್ರಗಳ ಆರಂಭದಲ್ಲಿನ ಲೋಪಗಳನ್ನು ನಿವಾರಿಸಬೇಕಿದೆ. ರೈತರ ಉತ್ಪನ್ನ ಕಟಾವಿಗೆ ಬರುವ ಮುನ್ನವೇ ನೋಂದಣಿ ಆರಂಭಿಸಿ, ಬೆಳೆ ಬಂದ ಕೂಡಲೆ ಖರೀದಿ ಶುರು ಮಾಡುವುದು ಸರಿಯಾದ ಕ್ರಮ. ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ಮುಂದಾಗಬೇಕು, ತೂಕದಲ್ಲಿ ಮೋಸವಾಗದಂತೆ ಎಚ್ಚರವಹಿಸಬೇಕು. ಮತ್ತು ರೈತರಿಗೆ ಒಂದು ವಾರದಲ್ಲಿ ಹಣ ಪಾವತಿಗೆ ವ್ಯವಸ್ಥೆ ಮಾಡಿದರೆ ಅನುಕೂಲವಾದೀತು. ಇಲ್ಲವಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಪರಿಸ್ಥಿತಿ ಆಗುತ್ತದೆ. ಸರ್ಕಾರ ರೈತರನ್ನು ಅಂಥ ಅಸಹಾಯಕ ಸ್ಥಿತಿಗೆ ದೂಡದಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net