ಸಂಪಾದಕೀಯ| ಉತ್ತಮ ಉಪಕ್ರಮ

Labor
Published on

ಅಸಂಘಟಿತ ವಲಯದ ಕಾರ್ವಿುಕರು ಎದುರಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಕಠಿಣ ದುಡಿಮೆಯಲ್ಲಿ ತೊಡಗಿಸಿಕೊಂಡರೂ ಜೀವನಭದ್ರತೆ ಇಲ್ಲ, ಸೂಕ್ತ ಸೌಲಭ್ಯಗಳೂ ಇಲ್ಲ. ದೇಶಾದ್ಯಂತ ಲಾಕ್​ಡೌನ್ ಘೋಷಣೆಯಾದಾಗ ಅಸಂಘಟಿತ ವಲಯದ ಕಾರ್ವಿುಕರ ಕಡುಕಷ್ಟದ ದಾರುಣ ಸ್ಥಿತಿ ಅನಾವರಣಗೊಂಡಿತ್ತು. ಎಷ್ಟೋ ಕಾರ್ವಿುಕರು ನೂರಾರು ಕಿಲೋಮೀಟರ್ ನಡೆದುಕೊಂಡೇ ಅವರ ಊರುಗಳಿಗೆ ಸೇರಿದ ಕರುಣಾಜನಕ ದೃಶ್ಯಗಳಿಗೆ ರಾಜ್ಯ, ದೇಶ ಸಾಕ್ಷಿಯಾಯಿತು.

ಮುಖ್ಯ ಸಮಸ್ಯೆ ಎಂದರೆ ಈ ವಲಯದ ಕಾರ್ವಿುಕರ ಕುರಿತಾಗಿ ನಿಖರ ಅಂಕಿಸಂಖ್ಯೆ, ಇತರ ಮಾಹಿತಿಯೇ ಸರ್ಕಾರದ ಬಳಿ ಇಲ್ಲ. ಈ ಎಲ್ಲ ಕೊರತೆಗಳನ್ನು ನಿವಾರಿಸಿಕೊಂಡು, ಅಸಂಘಟಿತ ವಲಯದ ಕಾರ್ವಿುಕರಿಗೆ ಜೀವನಭದ್ರತೆ ಒದಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, 32 ಕಲ್ಯಾಣ ಮಂಡಳಿಗಳನ್ನು ರಚಿಸಲು ಮುಂದಾಗಿದೆ. ರಾಜ್ಯದಲ್ಲಿ ಈಗಾಗಲೇ ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ, ಟೇಲರ್, ಅಕ್ಕಸಾಲಿಗರು, ಮೆಕ್ಯಾನಿಕ್​ಗಳು, ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುವವರು, ಅಡುಗೆಯವರು, ವಾದ್ಯಗಾರರು, ಮನೆಕೆಲಸದವರು, ಕೃಷಿಕಾರ್ವಿುಕರು, ಹಮಾಲಿಗಳು, ಸವಿತಾ ಸಮಾಜ, ಕುಂಬಾರ, ಕಮ್ಮಾರ, ಸಾರಿಗೆ ನೌಕರರು ಸೇರಿ 32 ವಲಯಗಳಿಗೆ ಕಲ್ಯಾಣ ಮಂಡಳಿಗಳನ್ನು ಬರುವ ಜನವರಿಯಲ್ಲಿ ರಚಿಸಲು ಸರ್ಕಾರ ತೀರ್ವನಿಸಿರುವುದು ಮಹತ್ವದ ಬೆಳವಣಿಗೆ.

ಮಂಡಳಿಗಳ ಮೂಲಕ ಸ್ಮಾರ್ಟ್ ಕಾರ್ಡ್ ವಿತರಣೆ, ಕಾರ್ವಿುಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಆರೋಗ್ಯವಿಮೆ ಸೌಲಭ್ಯ, ಮಕ್ಕಳ ಮದುವೆಗೆ ಆರ್ಥಿಕ ಸಹಾಯ, 60 ವರ್ಷ ಆದ ನಂತರ ಪಿಂಚಣಿಯಂಥ ಸೌಲಭ್ಯಗಳು ದೊರಕಲಿವೆ. ಹಾಗಾಗಿ, ಜೀವನಭದ್ರತೆ ಇಲ್ಲದೆ ಆತಂಕದಲ್ಲೇ ದಿನದೂಡುತ್ತಿದ್ದ ಕಾರ್ವಿುಕವರ್ಗದಲ್ಲಿ ನಿರಾಳತೆ ಮೂಡಲಿದೆ. ಕೇರಳ, ತಮಿಳುನಾಡು ಸರ್ಕಾರಗಳು ಅಸಂಘಟಿತ ಕಾರ್ವಿುಕರಿಗಾಗಿ ವಿಶೇಷ ಮಂಡಳಿ ರಚಿಸಿದ್ದು, ಅದೇ ಮಾದರಿಯಲ್ಲಿ ಇಲ್ಲೂ ಮಂಡಳಿಗಳು ಕಾರ್ಯನಿರ್ವಹಿಸಲಿವೆ. ವಲಸೆ ಕಾರ್ವಿುಕರ ಅಂಕಿಅಂಶಗಳನ್ನು ಸಂಗ್ರಹಿಸಲೂ ಮುಂದಾಗಿರುವ ಸರ್ಕಾರ ಈ ನಿಟ್ಟಿನಲ್ಲಿ, ಉತ್ತರ ಪ್ರದೇಶ ಸರ್ಕಾರದ ಕಾನೂನನ್ನು ಅಭ್ಯಸಿಸುತ್ತಿದೆ. ಇಷ್ಟೊಂದು ಮಂಡಳಿಗಳಿಗೆ ಅನುದಾನ ಒದಗಿಸುವುದೂ ಸವಾಲಿನ ಕೆಲಸವೇ. ಇದಕ್ಕಾಗಿ ಸಂಪನ್ಮೂಲ ಕ್ರೋಡೀಕರಣದ ಹೊಸ ಮಾರ್ಗಗಳನ್ನು ಶೋಧಿಸುತ್ತಿರುವ ಸರ್ಕಾರ, ಮುಂದಿನ ಬಜೆಟ್​ನಲ್ಲಿ ಇದಕ್ಕೆ ಹಣ ಮೀಸಲಿರಿಸಲಿದೆ.

ಈ ಸುಧಾರಣೆ ಕ್ರಮಗಳು ನಿಜಕ್ಕೂ ಸಾಹಸದ ಹೆಜ್ಜೆಗಳೇ. ಕಾರ್ವಿುಕರ ಹಿತಕ್ಕಾಗಿ ಇಂಥದ್ದೊಂದು ದಿಟ್ಟ ನಿರ್ಧಾರ ತಳೆಯುವ ಅವಶ್ಯಕತೆ ಇತ್ತು. ಆದರೆ, ಈ ಹಿಂದೆ ಸೂಕ್ತ ದಾಖಲೆಗಳಿಲ್ಲ, ಮಾಹಿತಿಗಳಿಲ್ಲ ಎಂಬ ನೆಪವನ್ನು ಮುಂದೆ ಮಾಡಿ ಅಸಂಘಟಿತ ವಲಯದ ಕಾರ್ವಿುಕರಿಗೆ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿತ್ತು. ಕಲ್ಯಾಣ ಮಂಡಳಿಗಳ ರಚನೆಯ ನಂತರವೂ ಮತ್ತೆ ಇದೇ ಸಮಸ್ಯೆ ಉದ್ಭವಿಸಬಾರದು. ಕಾರ್ವಿುಕ ರಾಜ್ಯದ ಯಾವುದೇ ಭಾಗಕ್ಕೆ ವಲಸೆ ಹೋದರೂ, ಸೌಲಭ್ಯ ನಿರಾಕರಿಸುವಂತಾಗಬಾರದು. ಹಾಗಾಗಿ, ಈ ಮಹತ್ವದ ಯೋಜನೆಯಲ್ಲಿ ತಾಂತ್ರಿಕ ತೊಡಕುಗಳು ಅಡ್ಡಿ ಆಗದಂತೆ ಕಾಳಜಿ ವಹಿಸಿದರೆ, ಕಾರ್ವಿುಕರ ಹಿತ ಕಾಯಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net