

ಸರ್ಕಾರದ ಯೋಜನೆಗಳಲ್ಲಿ ಬದಲಾವಣೆ, ಸುಧಾರಣೆ, ಪಾರದರ್ಶಕತೆಗೆ ಒತ್ತು ನೀಡಲು ತಂತ್ರಜ್ಞಾನದ ಸ್ಪರ್ಶ ಅಗತ್ಯವೇನೋ ಹೌದು. ಆದರೆ, ಸೂಕ್ತ ತಯಾರಿಗಳೇ ಇಲ್ಲದೆ, ಲೋಪದೋಷಗಳನ್ನು ಸರಿಪಡಿಸದೆ, ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳದೆ ಬದಲಾವಣೆ ಮಾಡಿದರೆ ಅದರಿಂದ ಜನಾಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದಕ್ಕೆ ಆಸ್ತಿ ನೋಂದಣಿಯ ಆನ್ಲೈನ್ ಸೇವೆಯೇ ಸಾಕ್ಷಿ ಎನ್ನಬಹುದು. ಎರಡು ವರ್ಷಗಳ ಹಿಂದೆಯೇ ಈ ಪ್ರಯತ್ನ ವಿಫಲವಾಗಿತ್ತು. ಆ ಬಳಿಕವಾದರೂ ಎಚ್ಚೆತ್ತುಕೊಂಡು ತೊಂದರೆಗಳನ್ನು ನಿವಾರಿಸಿದ್ದರೆ ಮತ್ತೊಂದು ವಿಫಲಯತ್ನ ಎದುರಿಸಬೇಕಾದ ಪ್ರಮೇಯ ಬರುತ್ತಿರಲಿಲ್ಲ. ಶ್ರೀಸಾಮಾನ್ಯರೇ ಹೆಚ್ಚಾಗಿರುವ ನಮ್ಮ ರಾಜ್ಯದಲ್ಲಿ ಎಲ್ಲರಿಗೂ ಕಂಪ್ಯೂಟರ್ ಜ್ಞಾನ ಇಲ್ಲ. ಇದ್ದರೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆ ಕಠಿಣ. ಅಲ್ಲದೆ ಈ ಹಿಂದೆಯೂ ಕಾಡಿದ್ದ ಸರ್ವರ್ ಸಮಸ್ಯೆ ಸೇರಿ ಯಾವುದೇ ತಾಂತ್ರಿಕ ತೊಡಕುಗಳು ನಿವಾರಣೆಯಾಗಿಲ್ಲ. ಹಾಗಾಗಿಯೇ, ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಕ್ರಯ, ಮಾರಾಟ, ವರ್ಗಾವಣೆ ಪತ್ರ, ಅಡಮಾನ ಪತ್ರ ನೋಂದಣಿಗೆ ಜಾರಿಗೆ ತಂದ ಬಹುನಿರೀಕ್ಷಿತ ಆನ್ಲೈನ್ ಸೇವೆ ಆರಂಭದಲ್ಲೇ ವಿಘ್ನ ಕಂಡಿದೆ.
ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಸೇವೆಯನ್ನು ಸರಳೀಕರಣ ಮಾಡುವ ಉದ್ದೇಶದಿಂದ ಕಾವೇರಿ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನೋಂದಣಿ ಸೇವೆಯನ್ನು ನ.2ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ತುಮಕೂರು ಜಿಲ್ಲೆ ಬೈಲಹೊಂಗಲ, ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಮತ್ತು ಬೆಂಗಳೂರು ಗ್ರಾಮಾಂತರ ಜಾಲ ಉಪನೋಂದಣಿ ಕಚೇರಿಯಲ್ಲಿ ಆನ್ಲೈನ್ ಸೇವೆ ಕಲ್ಪಿಸಲಾಗಿತ್ತು. ಆದರೆ, 3 ಸಬ್ ರಿಜಿಸ್ಟ್ರರ್ ಕಚೇರಿಗಳಲ್ಲೂ ಒಂದೇ ಒಂದು ನೋಂದಣಿ ಪ್ರಕ್ರಿಯೆ ನಡೆದಿಲ್ಲ ಎಂಬುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ಈ ಕಚೇರಿಗಳಲ್ಲಿ ಪ್ರತಿ ದಿನ 60-70 ನೋಂದಣಿಗಳು ನಡೆಯುತ್ತಿದ್ದವು.
ಸಾರ್ವಜನಿಕರೇ ಪಿಡಿಇಎಸ್ (ಪ್ರೀ ಡಾಟಾ ಎಂಟ್ರಿ ಸಿಸ್ಟಂ)ನಲ್ಲಿ ದತ್ತಾಂಶ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಿತ್ತು. ನೋಂದಣಿ, ಮುದ್ರಾಂಕ ಶುಲ್ಕವನ್ನೂ ಆನ್ಲೈನ್ನಲ್ಲಿಯೇ ಪಾವತಿ ಮಾಡಬೇಕಿತ್ತು. ಆದರೆ, ಸಮರ್ಪಕ ಕಾರ್ಯನಿರ್ವಹಣೆ ಸಾಧ್ಯವಾಗದೆ ಇರುವುದರಿಂದ ಈ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಆಶಯ ಭಂಗವಾಗಿದೆ. ಆಸ್ತಿ ನೋಂದಣಿಯ ಪ್ರಕ್ರಿಯೆಯೇ ಜಟಿಲ ಸ್ವರೂಪದ್ದು. ಹೀಗಿರುವಾಗ ಹೊಸ ವ್ಯವಸ್ಥೆ/ಯೋಜನೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡದೆ, ಸೂಕ್ತ ಜಾಗೃತಿ ಮೂಡಿಸದೆ ತರಾತುರಿಯಲ್ಲಿ ಜಾರಿಗೆ ತಂದದ್ದಾದರೂ ಏಕೆ ಎಂಬುದು ಯಕ್ಷಪ್ರಶ್ನೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಮೊದಲೇ ನಿಧಾನ ಗತಿಯಲ್ಲಿ ಸಾಗುತ್ತವೆ ಎಂಬ ಆರೋಪ ಜನಸಾಮಾನ್ಯರದ್ದು. ಸಿಬ್ಬಂದಿ ಇಂಥ ತೊಡಕುಗಳನ್ನೇ ಮುಂದಿಟ್ಟುಕೊಂಡು ಜನರನ್ನು ಸಾಗಹಾಕಿದರೆ ಸಮಸ್ಯೆ ಮತ್ತಷ್ಟು ಕ್ಲಿಷ್ಟಗೊಳ್ಳುತ್ತದೆ. ಹಾಗಾಗಿ, ಮೊದಲು ಈ ಅನ್ಲೈನ್ ಸೇವೆಯ ಸಾಧಕ-ಬಾಧಕಗಳನ್ನು ಅವಲೋಕಿಸಬೇಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಿಜಕ್ಕೂ ಅದರ ಜಾರಿ ಸಾಧ್ಯವಾಗುವುದೇ ಎಂಬುದನ್ನು ಅವಲೋಕಿಸಿ, ಇಂಥ ಸೇವೆಗಳ ಮಾಹಿತಿ ನೀಡಲು, ಮತ್ತು ಅನುಮಾನ/ಸಮಸ್ಯೆಗಳನ್ನು ಪರಿಹರಿಸಲು ತಂಡವನ್ನೂ ರೂಪಿಸಬೇಕು.