ಸಂಪಾದಕೀಯ: ಸಾಧಕ-ಬಾಧಕ ಅರಿಯಲಿ

editorial
Published on

ಎಪಿಎಂಸಿ ಕಾಯ್ದೆಯ ತಿದ್ದುಪಡಿ ಬೆನ್ನಲ್ಲೇ ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ವಿದ್ಯುತ್ (ತಿದ್ದುಪಡಿ) ಕಾಯ್ದೆ 2020ರ ಕರಡುಪ್ರತಿ ಪ್ರಕಟಿಸಲಾಗಿದ್ದು, ವಿದ್ಯುತ್ ವಿತರಣೆ ರಂಗದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಲಾಗಿದೆ. ಆದರೆ, ಹಲವು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಖಾಸಗಿಯವರ ಕೈ ಮೇಲಾಗಲಿದೆ, ಸರ್ಕಾರ ತನ್ನ ನಿಯಂತ್ರಣಾಧಿಕಾರ ಕಳೆದುಕೊಳ್ಳಲಿದೆ ಎಂಬ ಆತಂಕಗಳು ವ್ಯಕ್ತವಾಗಿವೆ. ಪ್ರತಿಪಕ್ಷ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸಿದ್ದು, ರೈತರ ಹಿತಕ್ಕೆ ಮಾರಕವಾಗಲಿದೆ ಎಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿಲುವು ತೆಗೆದುಕೊಂಡಿರಲಿಲ್ಲ. ಆದರೆ, ಹೊಸ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲು ಮಂಗಳವಾರ ನಿರ್ಧಾರ ಕೈಗೊಂಡಿದೆ.

ಹಲವು ರಂಗಗಳನ್ನು ಸುಧಾರಣೆಯ ಹಾದಿಗೆ ಕೊಂಡೊಯ್ಯುವಾಗ ಈ ರೀತಿಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸ್ವಾಭಾವಿಕ. ಆದರೆ, ಯಾವುದೇ ಕಾಯ್ದೆಯನ್ನು ತಿದ್ದುಪಡಿ ಮಾಡುವಾಗ ಅದರಿಂದ ಸಾಮಾನ್ಯ ಜನರು ಸಮಸ್ಯೆ ಅನುಭವಿಸುವಂತಾಗಬಾರದು ಎಂಬ ಎಚ್ಚರಿಕೆ ಪ್ರಭುತ್ವಕ್ಕೆ ಇರಬೇಕು.

ವಿದ್ಯುತ್ ವಿತರಣೆ ವ್ಯವಸ್ಥೆಯ ಸುಧಾರಣೆಗಾಗಿ ಕಾಯ್ದೆ ತಿದ್ದುಪಡಿಯ ಕರಡನ್ನು 2014ರಲ್ಲೇ, ಸಿದ್ಧಪಡಿಸಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆಗ ಲೋಕಸಭೆಯ ಅವಧಿ ಕೊನೆಗೊಂಡಿದ್ದರಿಂದ ಮಸೂದೆ ರದ್ದಾಗಿತ್ತು. 2018, 2019ರಲ್ಲೂ ಕರಡು ರಚಿಸಲಾಗಿತ್ತು. ಪ್ರಸಕ್ತ ನಾಲ್ಕನೇ ಪ್ರಯತ್ನದಲ್ಲಿಯಾದರೂ ಪ್ರಸಕ್ತ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಪೂರೈಕೆದಾರರ ಹಿತರಕ್ಷಣೆಗೆ ಒತ್ತು, ರಾಷ್ಟ್ರೀಯ ನವೀಕರಿಸಬಲ್ಲ ಇಂಧನ ನೀತಿ, ವಿದ್ಯುತ್ ಪ್ರಸರಣ ನಿರ್ಧಾರದಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲುದಾರಿಕೆ, ಪ್ರಾಧಿಕಾರಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ-ಇವು ಕರಡು ಒಳಗೊಂಡಿರುವ ಮುಖ್ಯಾಂಶಗಳು. ವಿದ್ಯುತ್ ಮಾರಾಟ, ಖರೀದಿ ಹಾಗೂ ಪ್ರಸರಣ ವ್ಯವಸ್ಥೆಯ ಸಬ್ ಲೈಸೆನ್ಸಿಂಗ್ ಮತ್ತು ಫ್ರಾಂಚೈಸಿ ವ್ಯವಸ್ಥೆ ಖಾಸಗಿಯವರ ಪಾಲಾದರೆ ರೈತರಿಗೆ ಉಚಿತವಾಗಿ ನೀಡುತ್ತಿರುವ 10 ಎಚ್​ಪಿವರೆಗಿನ ಮತ್ತು ಬಡವರಿಗೆ ನೀಡಲಾಗುವ ಸಬ್ಸಿಡಿ ದರದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಅಲ್ಲದೆ, ಸಣ್ಣ ಕೈಗಾರಿಕೆಗಳಿಗೆ ನೀಡಿರುವ ವಿದ್ಯುತ್ ರಿಯಾಯಿತಿಗಳಿಗೂ ಕಡಿವಾಣ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಮೂಲಗಳು ಇದನ್ನು ನಿರಾಕರಿಸಿವೆ. ರೈತರಿಗೆ ಉಚಿತ ವಿದ್ಯುತ್ತಿನ ಬದಲಾಗಿ ವಿದ್ಯುತ್ ಶುಲ್ಕದ ಮೊತ್ತ ನೇರ ವರ್ಗಾವಣೆ ಮೂಲಕ ರೈತರ ಖಾತೆಗಳಿಗೆ ತಲುಪಲಿದೆ. ಮುಖ್ಯವಾಗಿ, ವಿದ್ಯುತ್ ವಿತರಣೆಯ ವ್ಯವಸ್ಥೆ ಬಲಗೊಳ್ಳಲಿರುವುದರಿಂದ, ಈ ಕ್ಷೇತ್ರ ಮತ್ತಷ್ಟು ಶಕ್ತಿಶಾಲಿಯಾಗಲಿದೆ, ಪಾರದರ್ಶಕತೆಯೂ ಹೆಚ್ಚಲಿದೆ ಎಂಬ ವಿವರಣೆ ಚರ್ಚೆಗೆ ಗ್ರಾಸವಾಗಿದೆ. ಅದೇನಿದ್ದರೂ, ಕರೊನಾ ಹಾವಳಿಯ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ವಿದ್ಯುತ್ (ತಿದ್ದುಪಡಿ) ಕಾಯ್ದೆ ಬಗ್ಗೆ ತರಾತುರಿಯ ಕ್ರಮ ಬೇಡ. ಇದರ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾದ ಚರ್ಚೆ ನಡೆಯಲಿ. ಕೇಂದ್ರವು ಎಲ್ಲ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಇದರ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net