

ಕರೊನಾ ಮಹಾಮಾರಿಗೆ ಎಲ್ಲ ಕ್ಷೇತ್ರಗಳು ತತ್ತರಿಸಿವೆ. ಅದರಲ್ಲೂ, ಕಾರ್ವಿುಕರ ಗೋಳು ಹೇಳತೀರದು. ಅಲ್ಪಾದಾಯದಲ್ಲೇ ಜೀವನದ ಬಂಡಿ ಸಾಗಿಸುವ ಅನಿವಾರ್ಯತೆ. ಆದರೆ, ಕರೊನಾ ಹಾವಳಿ ದುಡಿಮೆಯನ್ನೇ ಕಿತ್ತುಕೊಂಡಿರುವುದರಿಂದ ಬರುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೂ ಕತ್ತರಿ ಬಿದ್ದಿದೆ. ಅದರಲ್ಲೂ, ವಿಶ್ವದಲ್ಲಿನ ಅಸಂಘಟಿತ ವಲಯದ ಆರ್ಥಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 160 ಕೋಟಿಗೂ ಅಧಿಕ ಜನರ ಜೀವನೋಪಾಯಕ್ಕೆ ಕುತ್ತು ಬಂದೋದಗಲಿದೆ ಎಂದು ಅಂತಾರಾಷ್ಟ್ರೀಯ ಕಾರ್ವಿುಕ ಸಂಘಟನೆ (ಐಎಲ್ಒ) ಅಂದಾಜಿಸಿದೆ. ವಿಶ್ವಾದ್ಯಂತ ಉದ್ಯಮಗಳು ಉತ್ಪಾದನಾ ಚಟುವಟಿಕೆ ಕಡಿಮೆ ಮಾಡಿವೆ ಇಲ್ಲವೇ ಸ್ಥಗಿತಗೊಳಿಸಿವೆ. ಇದರಿಂದ, ಅಸಂಘಟಿತ ವಲಯದ ಕಾರ್ವಿುಕರು ಉದ್ಯೋಗ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂದು ಸಂಘಟನೆ ಬುಧವಾರ ಬಿಡುಗಡೆ ಮಾಡಿರುವ ‘ಕೋವಿಡ್-19 ಮತ್ತು ಔದ್ಯೋಗಿಕ ಜಗತ್ತು’ ಎಂಬ ಅಧ್ಯಯನ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಭಾರತದ ಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ರಾಜ್ಯದಲ್ಲೂ ಲಾಕ್ಡೌನ್ ಅವಧಿ ಒಂದು ತಿಂಗಳು ಮೀರಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ.
ನಮ್ಮಲ್ಲಿ ಅಸಂಘಟಿತ ವಲಯ ದಲ್ಲಿರುವ ಕಾರ್ವಿುಕರ ಸಂಖ್ಯೆಯೇ ಹೆಚ್ಚು ಎಂಬುದು ಗೊತ್ತಿರುವಂಥದ್ದೇ. ಸೂಕ್ತ ಸಾಮಾಜಿಕ ಭದ್ರತೆಯನ್ನು ಹೊಂದಿಲ್ಲದ ಈ ವರ್ಗ ದುಡಿಮೆಯ ಆದಾಯವೇ ನಿಂತುಹೋದರೆ ಕಡುಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮನೆಕೆಲಸದವರು, ರ್ದಜಿಗಳು ಸೇರಿ ಹಲವು ವಲಯದ ಕಾರ್ವಿುಕರು ಅಸಂಘಟಿತ ವರ್ಗದಲ್ಲೇ ಬರುತ್ತಾರೆ. ಇವರಿಗೆ ಸೂಕ್ತ ಸೌಲಭ್ಯಗಳಿಲ್ಲ, ಕೆಲ ಸವಲತ್ತುಗಳಿದ್ದರೂ ಆ ಬಗ್ಗೆ ಇವರಿಗೆ ಮಾಹಿತಿಯಿಲ್ಲ. ಕರೊನಾ ಸಂಕಷ್ಟ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳಿಲ್ಲ. ಹಾಗಾಗಿ, ದುಡಿಯುವ ಈ ವರ್ಗದ ಹಿತಕ್ಕಾಗಿ ಸೂಕ್ತ ಹೆಜ್ಜೆಗಳನ್ನು ಇರಿಸಬೇಕಾಗಿದೆ. ಅವರಿಗೆ ಕಾಡುತ್ತಿರುವ ಅಭದ್ರತೆಯ ಆತಂಕವನ್ನು ನಿವಾರಣೆ ಮಾಡಬೇಕಿದೆ. ಅದುವೇ ‘ಕಾರ್ವಿುಕ ದಿನ’ದ ಉಡುಗೊರೆ ಆಗಬಲ್ಲದು.
ಗುರುವಾರ ವಿಜಯವಾಣಿ ಆಯೋಜಿಸಿದ್ದ ಫೋನ್ ಇನ್ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ಪಾಲ್ಗೊಂಡು, ಶ್ರಮಿಕವರ್ಗದಲ್ಲಿ ವಿಶ್ವಾಸ ತುಂಬಿದ್ದಾರೆ, ಅವರಿಗಾಗಿ ಇರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ಅಲ್ಲದೆ, ಅಸಂಘಟಿತ ಕಾರ್ವಿುಕರಿಗಾಗಿ ಐದು ಹೊಸ ಮಂಡಳಿ ಸ್ಥಾಪಿಸಲು ಮುಂದಾಗಿದ್ದಾರೆ. ‘ಗಾರ್ವೆಂಟ್ ನೌಕರರು, ಕೃಷಿ ಕಾರ್ವಿುಕರು, ಚಾಲಕರು ಹಾಗೂ ಹೊರಗುತ್ತಿಗೆ ನೌಕರರ ಕಲ್ಯಾಣಕ್ಕಾಗಿ ಮಂಡಳಿ ಸ್ಥಾಪಿಸುವುದಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ. ಮನೆಗೆಲಸದವರ ಕಲ್ಯಾಣ ಮಂಡಳಿ ಸ್ಥಾಪನೆ ವಿಚಾರ ಪರಿಶೀಲನೆಯಲ್ಲಿದೆ’ ಎಂದು ಸಚಿವರು ತಿಳಿಸಿದ್ದು, ಕಾರ್ವಿುಕ ಇಲಾಖೆಯಡಿಯಲ್ಲೇ ನಿಗಮವೊಂದನ್ನು ಸ್ಥಾಪಿಸಿ, ಅಸಂಘಟಿತ ಕಾರ್ವಿುಕರ ಹಿತಕ್ಕಾಗಿ ಪ್ರತ್ಯೇಕ ನಿಧಿ ತೆರೆಯುವ ಚಿಂತನೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೊಡನೆ ಚರ್ಚೆ ನಡೆಸುವ ಮಾತನ್ನೂ ಕಾರ್ವಿುಕ ಸಚಿವರು ಆಡಿದ್ದಾರೆ.
ಇದು ತೀವ್ರ ಸಂಕಷ್ಟದ ಹೊತ್ತು. ಹೀಗಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಬವಣೆಗಳನ್ನು ನೀಗಿಸಲಿ ಎಂಬುದೇ ಆಶಯ.