ಬ್ರೆಕ್ಸಿಟ್ ನಂತರದ ಸವಾಲು

edit jan 24 2020
Published on

ಳೆದ ಹಲವು ವರ್ಷಗಳಿಂದ ಬ್ರಿಟನ್ ಎದುರಿಸುತ್ತಿದ್ದ ಮಹಾ ಕಗ್ಗಂಟು ಬಗೆಹರಿದಿದೆ. ಈ ಕಗ್ಗಂಟನ್ನು ಬಗೆಹರಿಸಲು ಇಬ್ಬರು ಪ್ರಧಾನಿಗಳೇ ಅಧಿಕಾರದಿಂದ ನಿರ್ಗಮಿಸಬೇಕಾಯಿತು. ಆದರೂ, ಬಿಕ್ಕಟ್ಟು ಬಗೆಹರಿಯುವ ದಾರಿಗಳೇ ತೆರೆದುಕೊಳ್ಳುತ್ತಿರಲಿಲ್ಲ. ಕಡೆಗೂ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ‘ಬ್ರೆಕ್ಸಿಟ್’ ಮಸೂದೆಗೆ ಅಲ್ಲಿನ ಸಂಸತ್ತು ಬುಧವಾರ ಅಂಗೀಕಾರ ನೀಡಿದೆ. ಹಾಗಾಗಿ, ಯುರೋಪಿಯನ್ ಒಕ್ಕೂಟದಿಂದ ಇದೇ ಜನವರಿ 31ರಂದು ಬ್ರಿಟನ್ ಅಧಿಕೃತವಾಗಿ ಹೊರಬರಲಿದೆ. ಥೆರೇಸಾ ಮೇ ಪ್ರಧಾನಿಯಾಗಿದ್ದಾಗ ಬ್ರೆಕ್ಸಿಟ್​ಗೆ ಸಂಸತ್ತಿನಲ್ಲಿ ಮೂರು ಬಾರಿ ಸೋಲಾಯಿತು. ಆಗ ಪ್ರತಿಪಕ್ಷ ಮಾತ್ರವಲ್ಲದೆ, ಸ್ವಪಕ್ಷೀಯರೂ ವಿರೋಧ ತೋರಿದ್ದರು. ಬ್ರೆಕ್ಸಿಟ್​ಗೆ ಅಂಗೀಕಾರ ದೊರಕಿಸಲು ಅಂತಿಮ ಕ್ಷಣದವರೆಗೂ ಎಲ್ಲ ಪ್ರಯತ್ನ ಹಾಕಿದ ಥೆರೇಸಾ ಮೇ, ಅದು ಕೈಗೂಡದಿದ್ದಾಗ ಅಧಿಕಾರದಿಂದಲೇ ನಿರ್ಗಮಿಸಿದರು. ಈಗಿನ ಪ್ರಧಾನಿ ಬೋರಿಸ್ ಜಾನ್ಸನ್ ಹಾಲಿ ಮಸೂದೆಗೆ ಜಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಬ್ರಿಟನ್​ಗೆ ಆರಂಭಿಕ ಗೆಲುವು ಹೌದಾದರೂ, ಐರೋಪ್ಯ ಒಕ್ಕೂಟದಿಂದ ಹೊರಬರಲು ಕೆಲ ಪ್ರಕ್ರಿಯೆಗಳನ್ನು ಪೂರೈಸಬೇಕಿದೆ. ಅದಕ್ಕಿಂತ ಮುಖ್ಯವಾಗಿ, 28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯಾದ ಐರೋಪ್ಯ ಒಕ್ಕೂಟದ ಸದಸ್ಯರಾಷ್ಟ್ರವಾಗಿ ಬ್ರಿಟನ್ ಹಲವು ಅನುಕೂಲಗಳನ್ನು, ಕೆಲ ಅನನುಕೂಲಗಳನ್ನು ಹೊಂದಿತ್ತು. ಈ ರಾಷ್ಟ್ರಗಳ ನಡುವೆ ವ್ಯಾಪಾರ ನೀತಿ ಸರಳವಾಗಿತ್ತು. ಆಮದು-ರಫ್ತಿಗೆ ಸೂಕ್ತ ಉತ್ತೇಜನವಿತ್ತು. ವೀಸಾ ಪಡೆಯುವ ಪ್ರಕ್ರಿಯೆಯನ್ನು ಸರಳ ಮಾಡಲಾಗಿತ್ತು. ಆದರೆ, ಭವಿಷ್ಯದ ದೃಷ್ಟಿಯಿಂದ ಐರೋಪ್ಯ ಒಕ್ಕೂಟದಿಂದ ಹೊರಬರುವುದೇ ಲೇಸು ಎಂಬುದು ಬ್ರಿಟನ್ ಜನರ ಆಶಯವೂ ಆಗಿತ್ತು. ಅಂದರೆ, ಇನ್ಮೇಲೆ ವ್ಯಾಪಾರ, ಬಂಡವಾಳ ಹೂಡಿಕೆ, ದೊಡ್ಡ ಉದ್ಯಮಗಳನ್ನು ಆಕರ್ಷಿಸುವುದು, ರಫ್ತಿಗೆ ಉತ್ತೇಜನ ಮುಂತಾದವಕ್ಕೆ ಬ್ರಿಟನ್ ಹೊಸ ನೀತಿಗಳನ್ನೇ ರೂಪಿಸಬೇಕಾಗುತ್ತದೆ. ಅಲ್ಲದೆ, ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅಂದರೆ, ಇಲ್ಲಿ ಬರೀ ಆರ್ಥಿಕ ರಂಗದ ಪ್ರಶ್ನೆ ಮಾತ್ರವಲ್ಲ ವಿದೇಶಾಂಗ ನೀತಿಯಲ್ಲೂ ಸಕಾರಾತ್ಮಕ ಬದಲಾವಣೆ ಅನಿವಾರ್ಯವಾಗುತ್ತದೆ. ಈ ಸ್ಥಿತ್ಯಂತರಗಳ ನಡುವೆ ದೇಶದ ಆರ್ಥಿಕತೆ ಕುಸಿಯದಂತೆ, ನಿರುದ್ಯೋಗ ಪ್ರಮಾಣ ಹೆಚ್ಚದಂತೆಯೂ ಜಾಗ್ರತೆ ವಹಿಸಬೇಕಾಗುತ್ತದೆ. ಅಂಥ ಸಂಕಟವನ್ನು ಅದು 2008ರಲ್ಲಿಯೇ ಅನುಭವಿಸಿದೆ. ಪ್ರಧಾನಿ ಬೋರಿಸ್ ಈ ಎಲ್ಲ ಸವಾಲುಗಳಿಗೆ ಹೇಗೆ ಎದುರುಗೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ಬ್ರಿಟನಿನ ಮುಂದಿನ ಹಾದಿ ನಿರ್ಧಾರಗೊಳ್ಳಲಿದೆ.

ಸಂಸತ್ತಿನ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರ ಪಡೆದ ಬಳಿಕ ಮಹಾರಾಣಿಗೆ ಕಳುಹಿಸಲಾಗಿತ್ತು. ಅಲ್ಲೂ ಕೂಡ ಸಮ್ಮತಿಯ ಮುದ್ರೆ ಬಿದ್ದಿದೆ. ಹಾಗಾಗಿ, ಅದು ಕಾನೂನಾಗಿ ಬದಲಾಗಿದೆ. ಹಾಗಂತ ಸರ್ಕಾರದ ಮುಂದಿನ ಹಾದಿ ಸುಲಭವೇನಲ್ಲ. ಏಕೆಂದರೆ, ಬ್ರೆಕ್ಸಿಟ್​ನ್ನು ವಿರೋಧಿಸುವವರ ಸಂಖ್ಯೆಯೂ ಬ್ರಿಟನ್​ನಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಆರ್ಥಿಕ ಚೇತರಿಕೆ ಸೇರಿ ಒಟ್ಟಾರೆ ಬ್ರಿಟನ್ ಮುಂದೆ ಹಲವು ಸವಾಲುಗಳಂತೂ ಇದ್ದು, ಪ್ರಧಾನಿ ಬೋರಿಸ್ ಇವುಗಳ ಪರಿಹಾರಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net