

ಇಲಾಖೆಯಲ್ಲಿನ ಸಮಸ್ಯೆಗಳು, ನೌಕರರ ಬವಣೆಯ ಬಗ್ಗೆ ಗಮನ ಹರಿಸಿ, ಶೀಘ್ರ ಸ್ಪಂದಿಸುವಿಕೆಯ ವ್ಯವಸ್ಥೆ ರೂಪಿಸಿದರೆ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುವುದಿಲ್ಲ. ಇಲಾಖೆಯ ಕೆಳಹಂತದಲ್ಲಿ ಹಲವು ಸಮಸ್ಯೆಗಳಿರುವುದು, ನೌಕರರು ಕಿರುಕುಳ ಅನುಭವಿಸುತ್ತಿರುವುದು ವಾಸ್ತವವೇ ಹೌದು. ಮಾರ್ಗ ಹಾಕಿಸಿಕೊಳ್ಳುವುದು, ಬಸ್ಗಳ ರಿಪೇರಿ, ರಜೆ ಮಂಜೂರಾತಿ ಸೇರಿ ಹಲವು ವಿಷಯಗಳಿಗೆ ಪರದಾಡುವ ನೌಕರರು, ಕಿರುಕುಳದಿಂದ ಬೇಸತ್ತಿದ್ದಾರೆ. ಇದು ಎಷ್ಟು ತೀವ್ರ ಸ್ವರೂಪಕ್ಕೆ ಹೋಗಿದೆಯೆಂದರೆ ಕೆಲ ನೌಕರರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೆ ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದುಂಟು. ಸಂಬಂಧಿತ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಸಕಾಲದಲ್ಲಿ ಮಧ್ಯಪ್ರವೇಶಿಸಿ ನೌಕರರ ಹಿತರಕ್ಷಣೆ ಮಾಡಿದ್ದಲ್ಲಿ, ಆಕ್ರೋಶ ಆಗಲೇ ತಣ್ಣಗಾಗುತ್ತಿತ್ತು. ಒಟ್ಟಿನಲ್ಲಿ, ಈ ಮುಷ್ಕರದ ಪ್ರಸಂಗ ಸಾಕಷ್ಟು ಪಾಠಗಳನ್ನು ಕಲಿಸಿರುವುದಂತೂ ಹೌದು. ಯಾವುದೇ ಪರಿಸ್ಥಿತಿ ಬಿಗಡಾಯಿಸುವವರೆಗೆ ಸರ್ಕಾರ ಸುಮ್ಮನೆ ಕುಳಿತುಕೊಳ್ಳಬಾರದು, ಹಾಗಂತ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಅಥವಾ ಪ್ರತಿಭಟನೆಯೊಂದೇ ದಾರಿಯಲ್ಲ. ಅದರಲ್ಲೂ ದಿಢೀರ್ ಪ್ರತಿಭಟನೆಯಿಂದ ಎಲ್ಲರಿಗೂ ತೊಂದರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತುಕತೆ, ಸಂವಾದದ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ನೌಕರರ ಸಮಸ್ಯೆಗಳ ನಿವಾರಣೆಗೆ ಸೂಕ್ತ ವ್ಯವಸ್ಥೆ ರೂಪಿಸಿ, ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಅಗತ್ಯ. ಹಠದಿಂದ ಸಮಸ್ಯೆ ಬಗೆಹರಿಯದು. ಸೌಹಾರ್ದಯುತವಾಗಿ ಈ ಬಿಕ್ಕಟ್ಟು ಕೂಡಲೇ ಅಂತ್ಯವಾಗಲಿ.