

‘ನೂತನ ಕೃಷಿ ಕಾನೂನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅವಕಾಶ ನೀಡಬೇಕು. ಜನರಿಗೆ ಪ್ರತಿಭಟಿಸುವ ಹಕ್ಕನ್ನು ನೀಡಬೇಕು ಮತ್ತು ಶಾಂತಿಯುತವಾಗಿ ಪ್ರತಿಭಟಿಸಬೇಕು. ರೈತರ ಪರಿಸ್ಥಿತಿ ಕಳವಳಕಾರಿಯಾಗಿದೆ’ ಎಂದು ಟ್ರುಡಿಯೋ ಹೇಳಿದ್ದು, ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ. ಕೆನಡಾದ ರಕ್ಷಣಾ ಮಂತ್ರಿ ಹರ್ಜಿತ್ ಸಿಂಗ್ ಸಜ್ಜನ್ ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್ ಮಾಡಿದ ಬೆನ್ನಲ್ಲೇ, ಅಲ್ಲಿನ ಪ್ರಧಾನಿ ಈ ಬಗೆಯ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಪ್ರತ್ಯೇಕ ಖಲಿಸ್ತಾನ ಚಳವಳಿ ಬೆಂಬಲಿಸಿ ಹೇಳಿಕೆ ನೀಡಿದ್ದ ಜಸ್ಟಿನ್ ಟ್ರುಡಿಯೋ, ಈ ಬಾರಿ ರೈತರ ಪ್ರತಿಭಟನೆಯಲ್ಲಿ ಸಿಖ್ ಸಮುದಾಯದವರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ ಇಂಥ ಹೇಳಿಕೆ ನೀಡಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ತೀಕ್ಷ್ಣವಾದ ಪ್ರತಿಕ್ರಿಯೆಯನ್ನೇ ನೀಡಿದೆ. ‘ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಂಥ ಹೇಳಿಕೆಗಳು ಅನಗತ್ಯ. ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳಲು ರಾಜತಾಂತ್ರಿಕ ವಿಚಾರಗಳನ್ನು ತಪ್ಪಾಗಿ ನಿರೂಪಿಸಬಾರದು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ. ಭಾರತದಲ್ಲಿನ ಪೂರ್ಣ ಪರಿಸ್ಥಿತಿಯಾಗಲಿ, ಕೃಷಿ ಕಾನೂನುಗಳ ಬಗ್ಗೆಯಾಗಲಿ ಕೆನಡಾ ಪ್ರಧಾನಿಗೆ ಸಂಪೂರ್ಣ ಅರಿವಿಲ್ಲ. ಹೀಗಿರುವಾಗ ಯಾವುದೋ ಗುಪ್ತ ಕಾರ್ಯಸೂಚಿಗಳನ್ನು ಇರಿಸಿಕೊಂಡು, ರಾಜತಾಂತ್ರಿಕ ಸಂಬಂಧ ಮತ್ತು ಶಿಷ್ಟಾಚಾರಗಳನ್ನು ಬದಿಗೆ ಸರಿಸಿ ನೀಡುವಂಥ ವಿವೇಕರಹಿತ ಹೇಳಿಕೆಗಳು ಯಾವುದೇ ರಾಷ್ಟ್ರಕ್ಕೂ ಶೋಭೆ ತರುವಂಥದ್ದಲ್ಲ. ಅಷ್ಟಕ್ಕೂ, ಭಾರತ ದುರ್ಬಲ ರಾಷ್ಟ್ರವಲ್ಲ. ಎಷ್ಟೋ ಜಟಿಲ ಸಮಸ್ಯೆಗಳನ್ನೂ ಪ್ರಜಾಪ್ರಭುತ್ವದ ಬುನಾದಿಯ ಆಧಾರದಲ್ಲೇ ಪರಿಹರಿಸಿಕೊಂಡಿದೆ. ಹೀಗಿರುವಾಗ ರೈತರ ಪ್ರತಿಭಟನೆಯಲ್ಲಿ ಮೂಗು ತೂರಿಸುವ ಯಾವುದೇ ಹಕ್ಕು ಕೆನಡಾ ಸರ್ಕಾರಕ್ಕೆ ಇಲ್ಲ ಎಂಬುದನ್ನು ಆ ದೇಶ ಅರ್ಥಮಾಡಿಕೊಂಡರೆ ಕ್ಷೇಮ.