

'ಓ ಅಲ್ಲಿ ನೋಡು..' ಅವಳು ಹಾಗಂದಾಗ ದೂರ ದಿಗಂತದೆಡೆಗೆ ಒಮ್ಮೆ ಕಣ್ಣು ಹಾಯಿಸಿ ಮತ್ತೆ ಅವಳ ಮುಖವನ್ನೇ ನೋಡಿದ ಸತ್ಯದೇವ್. ಎತ್ತರೆತ್ತರದ ಬೆಟ್ಟಗಳೇ ಇರುವ ಆ ಊರಿನಲ್ಲಿ ಅವರಿಬ್ಬರು ಈಗ ಒಂದು ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿ ಮೇಲಿದ್ದರು. ಅದಕ್ಕೂ ಮೇಲೆ ಇನ್ನೂ ಮೇಲೆ ಕಾಣುತ್ತಿದ್ದ ಕೋಡುಗಲ್ಲಿನ ಬೆಟ್ಟಗಳು ಅಲ್ಲಿಗೆ ಬಂದವರನ್ನು ಹತ್ತಲು ಕೆಣಕುವಂತೆ ಚಾಚಿ ನಿಂತಿದ್ದವು.
ಅವರಿಬ್ಬರಿಗೂ ಬೆಟ್ಟ ಹತ್ತುವ ಯಾವ ಆಸಕ್ತಿಯು ಇರಲಿಲ್ಲವಾದರೂ ಎರಡು ಕೋಡುಗಲ್ಲುಗಳ ನಡುವೆ ಸಿಗುವ ಆ ಉದ್ದಾನುದ್ದ ಕಣಿವೆಗಳಲ್ಲಿ ತೆಕ್ಕೆಗೆ ತೆಕ್ಕೆ ಹಚ್ಚಿ ನಡೆಯುತ್ತಲೇ ಇದ್ದರು. ಬೆಳಗ್ಗೆ ಅವರಿಬ್ಬರನ್ನು ಈ ಬೆಟ್ಟದ ಬುಡಕ್ಕೆ ಕರೆತಂದ ಟ್ಯಾಕ್ಸಿಯವ ಇವರಿಬ್ಬರ ಸಂಬಂಧ ಏನಿರಬಹುದೆಂದು ಬಹಳ ಹೊತ್ತು ಯೋಚಿಸಿದ. ಗಂಡ-ಹೆಂಡತಿ ಅನಿಸುತ್ತಿಲ್ಲ. ಆಗಿದ್ದರೆ ಮಕ್ಕಳು, ಸಂಸಾರದ ತಾಪತ್ರಯ ಇದ್ದೇ ಇರ್ತಿತ್ತು. ಪ್ರೇಮಿಗಳಿಗಿರಬೇಕಾದ ಕೆಮಿಸ್ಟ್ರಿ ತುಸುವೇ ಕಂಡರೂ ಅವರು ಅದೂ ಅಲ್ಲ ಅನಿಸಿತ್ತು. ಅವನು ಅಲ್ಲೇ ಬೆಟ್ಟದ ಬುಡದ ನೆರಳಿನಲ್ಲಿ ಕಾರು ನಿಲ್ಲಿಸಿ ದೂರದ ಆ ತುದಿಯಲ್ಲಿ ಬಿಂದುಗಳಂತೆ ಕಾಣುತ್ತಿದ್ದ ಅವರಿಬ್ಬರನ್ನು ಕಣ್ಣು ಕಿರಿದಾಗಿಸಿ ನೋಡಿ ಮಳ್ಳುನಗೆ ನಕ್ಕ. ಕೋಡುಗಲ್ಲಿನ ಕೆಳಗೆ ಅವಳ ಮಡಿಲಿನಲ್ಲಿ ತಲೆ ಇಟ್ಟು ಅವಳ ಬೆರಳುಗಳ ಹಿತವಾದ ನೇವರಿಕೆಗೆ ಅರೆಗಣ್ಣಾಗಿದ್ದ ಅವನು ತಲೆ ಎತ್ತಿ 'ನೀನು ದೇವರನ್ನು ನಂಬ್ತಿಯಾ ಸೋನು' ಎಂದ.
'ನಾನು ದೇಹವನ್ನು ನಂಬ್ತಿನಿ ದೇವ್' ದೊಡ್ಡದಾಗಿ ನಗುತ್ತ ಅವಳು ಹೇಳಿದಳು. 'ನಾವಿಬ್ಬರೂ ಇಲ್ಲಿ ಕೂತಿದ್ದೇವೆ. ಮತ್ತು ನೀನು ನನ್ನ ಮಡಿಲೊಳಗೆ ಮಲಗಿದ್ದಿ ಅಂದರೆ ಅದು ದೇಹದ ಮೂಲಕ. ನಮ್ಮ ಸ್ಪರ್ಶಕ್ಕೆ ಪುಳಕವಿದೆ, ಅಪ್ಪುಗೆಗೆ ಇಂಟೆನ್ಸಿಟಿಯಿದೆ, ಮುತ್ತಿಗೆ ಅಮಲಿದೆ, ಅಗಲಿಕೆಗೆ ಸಂಕಟವಿದೆ ಅಂದರೆ ಅದು ದೇವರಲ್ಲ ದೇವ್. ದೇಹಮಹಿಮೆ. ಬಟ್ಟೆ ನಿಂತ ಆರನೇ ದಿನಕ್ಕೆ ಕರಾರುವಾಕ್ಕಾಗಿ ಗರ್ಭದೊಳಗೆ ಪುಟ್ಟ ಪುಟ್ಟ ಮಾಂಸದ ಮೆತ್ತೆಗಳು ರಚಿತವಾಗಿ ಒಳಗೆ ಬರುವ ವೀರನನ್ನು ಸ್ವಾಗತಿಸಲು ತಯಾರಾಗ್ತವೆ ಅಂದರೆ ದೇಹ ಎಷ್ಟು ಸಂಪೂರ್ಣ ಮತ್ತು ಸಂಕೀರ್ಣ ಅಲ್ವಾ. ಅಫ್ಕೊರ್ಸ್ ದೇವರು ಸೃಷ್ಟಿಸಿದ್ದೇ ಆದರೂ ಆ ದೇಹದ ಮೂಲಕವೇ ತಾನೇ ದೇವರ ಕುರಿತು ಯೋಚಿಸುವುದು, ಪೂಜಿಸುವುದು, ಅಲಂಕರಿಸುವುದು' ಅವಳದ್ದು ವಿತಂಡವಾದ ಎನಿಸಿ ಮಾತು ಮುಂದುವರಿಸಲಿಲ್ಲವಾದರೂ ಪದೇಪದೇ ಅವಳು ತನ್ನ ನೀಳ ಕೂದಲನ್ನು ಎತ್ತಿ ಗಂಟು ಹಾಕಿಕೊಳ್ಳುತ್ತಿದ್ದ ಚಂದವನ್ನು ಕಣ್ತುಂಬಿಕೊಳ್ಳುವ ಈ ಹುಕಿಯನ್ನೆ ಅವಳು ಬೇರೊಂದು ಬಗೆಯಲ್ಲಿ ಹೇಳ್ತಿದಾಳೆ. ಅವಳ ಈ ತರ್ಕದಲ್ಲಿ ಸತ್ಯವಿದೆ ಅನಿಸಿತು ಸತ್ಯದೇವನಿಗೆ. 'ಈ ದೇಹದ ವಿಚಿತ್ರ ಡಿಮ್ಯಾಂಡ್ ನೋಡು ದೇವ್. ಪ್ರೀತಿಸುವ ಗಂಡ ಹತ್ತಿರ ಬಂದರೆ, ಅವನ ಕೈ ಬೆರಳು ಹೆಂಡತಿಗಾಗಿ ತವಕಿಸಿದರೆ ಸುಮ್ಮನೆ ಕೊರಡಿನಂತೆ ತಣ್ಣಗಿರುತ್ತದೆ. ಮಗು ಶಾಲೆಯಿಂದ ಮನೆಗೆ ಬಂದು ಅಪ್ಪಿಕೊಳ್ಳುವಾಗ ಅಕ್ಕರೆಯುಕ್ಕಿಸುತ್ತದೆ.
ಸಂಜೆಯಾಗುತ್ತಲೆ ಮಳ್ಳನಗು ಹೊದ್ದ ನೆರೆಮನೆಯ ಗಂಡಸಿನ ಒಂದು ತುಡುಗು ನೋಟಕ್ಕೆ ಹಾತೊರೆಯುತ್ತದೆ. ತಿಂಗಳಿಗೆ ಸರಿಯಾಗಿ ನೆತ್ತರ ಚೆಲ್ಲಿ ಕನಸಿದ್ದವ ಬಾರದಿದ್ದಕ್ಕೆ ಮರುಗುತ್ತದೆ. ಮುಟ್ಟು ಮುಗಿದು ಏಳನೆ ದಿನಕ್ಕೆ ಲೋಳೆ ಮುಳುಮುಳುವೆದ್ದು ನಿನ್ನ ಕಾಣುವ ಹುಚ್ಚು ಮೋಹದಿಂದ ಹೇಗಾದರೂ ಹಾದಿ ಹುಡುಕುತ್ತದೆ. ಮತ್ತು ನೀನಲ್ಲಿ ಬರುವ ಹೆಜ್ಜೆಯ ಸದ್ದಿಗೆ ಎದೆ ಬಡಿತ ಏರಿಸಿಕೊಂಡು ಅರಳುತ್ತದೆ. ಒದ್ದೆಯಾಗುವುದಕ್ಕೆ ಇಷ್ಟೂ ಕಾಯುವ ತಾಳ್ಮೆ ಇಲ್ಲದ ಹೊಣೆಗೇಡಿ ಅನಿಸಲ್ವಾ ಈ ದೇಹ' ಒಮ್ಮೆ ಮೋಹಕ ನಗೆ ನಕ್ಕುಅವನ ಬೆಚ್ಚನೆಯ ಹಸ್ತವನ್ನು ತೆಗೆದು ತನ್ನ ಕೊರಳ ಇಳಿಜಾರಿನಲ್ಲಿಟ್ಟು ಮೆಲ್ಲಗೆ ಅದನ್ನು ತನ್ನ ಎದೆಯ ಮೇಲಿಂದ ಕೆಳಗಿಳಿಸಿಕೊಂಡಳು. ಕುಳಿತಿದ್ದವರು ಈಗ ಎದ್ದು ಮತ್ತೆ ಈ ಕೋಡುಗಲ್ಲಿನಿಂದ ದೂರದವರೆಗೂ ಇದ್ದ ಸಮತಟ್ಟಾದ ಕಾಲುದಾರಿಯಲ್ಲಿ ಬೆಟ್ಟಗಳ ನಡುವೆ ನಡೆಯತೊಡಗಿದರು. ಈ ಊರೇ ಹಾಗೆ. ಗಿರಿಗಳ ನಗರಿ. ಎಲ್ಲಿಂದ ಎಲ್ಲಿಗೆ ನೋಡಿದರೂ ಬೆಟ್ಟಗಳು. ಅದರ ತುಸು ಇಳಿಜಾರಿನಲ್ಲೆ ಮನೆಗಳಿದ್ದವು. ಹೋಮ್ಸ್ಟೇಗಳೆನಿಸಿಕೊಳ್ಳುವ ದುಬಾರಿ ವಿಲ್ಲಾಗಳಿದ್ದವು.
ಹಣವಿರುವ ಜನ ರಜಾದಿನಗಳಲ್ಲಿ ಬಂದು ಉಳಿದು ನೆಲದ ಮೇಲಿಂದ ಎಷ್ಟೋ ಎತ್ತರದಲ್ಲಿದ್ದೇವೆ ಅಂತ ಸಂಭ್ರಮಿಸುತ್ತಿದ್ದರು. ಯಾವ ಗಿರಿಯ ಯಾವ ಬದಿಗೆ ನಿಂತರೂ ಇಲ್ಲಿ ಸೂರ್ಯೋದಯವೋ ಸೂರ್ಯಾಸ್ತವೋ ಮನೋಹರವಾಗಿ ಕಾಣುತ್ತಿತ್ತು. ಅವತ್ತು ಚಳಿಯಿನ್ನೂ ಬಿಟ್ಟಿಲ್ಲವಾದ್ದರಿಂದ ಬೆಟ್ಟಗಳ ನಡುವೆ ನಡೆಯುವವರ ಸಂಖ್ಯೆ ಕಡಿಮೆ ಇತ್ತು. ಪ್ರತಿ ಹೆಜ್ಜೆ ಇಡುವಾಗಲೂ ಅವಳಿಡೀ ಮೈ ಅವನ ತಾಕಿ ಅವನ ದೇಹದ ಬಿಸಿ ಅವಳಿಗೆ ವರ್ಗಾವಣೆಯಾಗಿ ಹಾದಿ ಸಾಗುತ್ತಿತ್ತು. 'ನೀನು ಬೇಕು ಎನ್ನುವುದೂ ಕಷ್ಟ ನನಗೆ' ಎನ್ನುತ್ತಾ ಒಂದು ಕ್ಷಣ ನಿಂತ ಸೋನು ಅವನ ಮುಖವನ್ನು ತನ್ನ ಎರಡೂ ಕೈಗಳಿಂದ ತನ್ನೆಡೆಗೆ ಸೆಳೆದುಕೊಂಡು 'ಅದಕ್ಕಿಂತಲೂ ಹೆಚ್ಚಿನದೇನೊ ಇದೆ ನಮ್ಮ ನಡುವೆ' ಎಂದಳು. ನಾಕಾರು ಹೆಜ್ಜೆ ತಪ್ಪಿದರೆ ಆಳ ಪ್ರಪಾತವಿರುವ ಹಾದಿ ಅದು. 'ಎಷ್ಟು ಮಂದಿಯ ಜೀವ ಕಳೆದಿದೆಯೊ ಈ ಪ್ರಪಾತ' ಸತ್ಯದೇವ ಕೆಳಗೆ ನೋಡುತ್ತ ಕಾಲು ಕಂಪಿಸಿದಂತಾಗಿ ಒಂದು ಕ್ಷಣ ಹಾಗೇ ನಿಂತ.
'ಎಷ್ಟು ಪ್ರೇಮಿಗಳು ಈ ಕೋಡುಗಲ್ಲ ನೆರಳಲ್ಲಿ ಕೂಡಿ ಬೆವರಿದ್ದಾರೋ. ಎಷ್ಟು ಹಸೂಗೂಸುಗಳು ಈ ಎತ್ತರದಲ್ಲಿ ಮೂಡಿದ್ದಾವೋ' ಸೋನು ನಗುತ್ತಾ ಅವನ ಎರಡೂ ಕೆನ್ನೆಗಳನ್ನು ಚಿವುಟಿ ಕಣ್ಣು ಮಿಸುಕಿದಳು. ಅವಳ ಮುವತ್ತೆಂಟು ತುಂಬಿದ ದೇಹದಲ್ಲಿ ಯೌವನವೂ ಮೋಹವೂ ತುಳುಕುತ್ತಿತ್ತು. ಎಲ್ಲವನ್ನೂ ಒಮ್ಮೆಗೆ ಬಾಚಿಕೊಳ್ಳುವ ಆತುರಗಾರ್ತಿಯಂತೆ ತನ್ನ ಗೆಣೆಕಾರನ ಹೆಜ್ಜೆ ವಜ್ಜೆಗಳನ್ನು ಸುಖಿಸುತ್ತಿದ್ದಳು. ಈಗಲ್ಲದಿದ್ದರೆ ಮತ್ತೆಂದೂ ಸಿಗದು ಎನ್ನುವಂತೆ ಅವನ ಸರ್ವವನ್ನೂ ತುಂಬಿಕೊಳ್ಳುತ್ತಿದ್ದಳು. ಮುವ್ವತ್ತೆರಡರ ಸತ್ಯದೇವ ತಾಳ್ಮೆಗೇ ತಾಳ್ಮೆ ಕಲಿಸಿದವ. ಈ ಲೋಕಕ್ಕೆ ಸಲ್ಲದ ವ್ಯಕ್ತಿತ್ವ. ಅದೂ ಈ ವೇಗದ ಯುಗಕ್ಕಂತೂ ಅಲ್ಲವೇ ಅಲ್ಲ. ಅಧ್ಯಾತ್ಮದ ಕುರಿತು ಅಲೌಕಿಕದ ಕುರಿತು ತುಸು ಹೆಚ್ಚೇ ಸೆಳೆತ ಇರುವವ.
ಪರಸ್ಪರ ವಿರುದ್ಧ ಧ್ರುವ!
'ಇವಳೆಲ್ಲಿ ತೆಕ್ಕೆಗೆ ಬಿದ್ದಳು ಈ ಹುಚ್ಚಿ' ಎನಿಸುವಾಗೆಲ್ಲ ಆ ಹುಚ್ಚಿ ಪದಕ್ಕೆ ಅವನ ಮನಸ್ಸಿನಲ್ಲಿ ಅಕ್ಕರೆಯೂ ವಿಚಿತ್ರ ಶೋಭೆಯೂ ಮೆತ್ತಿಕೊಳ್ಳುತ್ತಿತ್ತು. 'ನಿನ್ನ ಗಂಡ ಪ್ರೀತಿಸ್ತಾನಾ ಸೋನು ನಿನ್ನ' ಕೇಳಿದ ಸತ್ಯದೇವ. 'ತುಂಬಾ..ತುಂಬಾ ಪ್ರೀತಿಸ್ತಾನೆ. ನೀನು ನಂಬುವುದಿಲ್ಲ ದೇವ್. ನಾನು ಹೆಚ್ಚು ಮಾತಾಡಿದರೆ ಆಯಾಸವಾಗಬಹುದೆಂದು ನನ್ನೊಡನೆ ಮಾತೇ ಆಡುವುದಿಲ್ಲ. ಹೊರಗಿನ ಧೂಳು ಗಾಳಿ ಜನರ ದೃಷ್ಟಿ ನನಗೆ ಸರಿಯಾಗುವುದಿಲ್ಲವೆಂದೂ ಎಂದೂ ಹೊರಗೆ ಕರೆದೊಯ್ಯುವುದಿಲ್ಲ. ಅಡುಗೆ ಮಾಡಿದರೆ ಮಡದಿ ಸೋಲುತ್ತಾಳೆ ಅಂತ ಅವನು ಮನೆಯಲ್ಲಿ ಉಣ್ಣುವುದೇ ಇಲ್ಲ. ತವರಿನಲ್ಲಿದ್ದರೆ ಹೆಚ್ಚು ಸಂತೋಷವಾಗಿರುತ್ತಾಳೆ ಎಂದು ಕರೆದುಕೊಂಡು ತವರಿಗೆ ಬಿಟ್ಟವ ಮರಳಿ ಬರುತ್ತೇನೆ ಅಂದರೂ ಇನ್ನೂ ತಿಂಗಳು ದಿನ ಇರು ಅಂತ ಉಪಚರಿಸುತ್ತಾನೆ.
ತಬ್ಬಿದರೆ ಮುತ್ತಿಟ್ಟರೆ ಕೂಡಿದರೆ ಹೆಂಡತಿಯ ಚೆಲುವು ಮಾಸಬಹುದೆಂದು ಅವನು ಅದಕ್ಕಾಗಿ ಬೇರೆಯದೇ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಸ್ವಲ್ಪವೇ ನೋವಿನಲ್ಲಿದ್ದರೂ ನೀನು ಸುಖವಾಗಿರಬೇಕು, ನೀನು ಸುಖವಾಗಿರುವುದಷ್ಟೇ ನನ್ನ ಉದ್ದೇಶ ಅನ್ನುತ್ತಾನೆ. ಬಂಧುಗಳು ನನ್ನನ್ನು ನೋಡಿ ಕರುಬುತ್ತಾರೆ ಅಷ್ಟು ಪ್ರೀತಿಸುತ್ತಾನೆ ನನ್ನ' ಅವಳು ಯಾವುದೇ ಏರಿಳಿತವಿಲ್ಲದೆ ಹೇಳಿದಳು. ದೃಷ್ಟಿ ದೂರದ ಬೆಟ್ಟದ ತುದಿಯಲ್ಲಿತ್ತು. ಸತ್ಯದೇವನಿಗೆ ಮುಂದಕ್ಕೆ ಏನು ಮಾತಾಡಬೇಕೆಂದು ತಿಳಿಯಲಿಲ್ಲ. ನನಗಿಂತಲೂ ಹಿರಿಯಳಾದ ಇವಳೊಡನೆ ನನ್ನದು ಯಾವ ಬಗೆಯ ಸಂಬಂಧ? ಪ್ರೇಮಿಸುತ್ತಿರುವುದಲ್ಲ ಇದು ಎನ್ನುವುದಂತೂ ಸ್ಪಷ್ಟವಾಗಿದೆ. ಅವಳು ಆ ದಿನ ಯಾವುದೋ ಕಾರಣಕ್ಕೆ ನನ್ನ ಆಫೀಸಿಗೆ ಬಂದಿದ್ದಾಗ ನನ್ನೆಡೆಗೆ ಆಕರ್ಷಿತಳಾಗಿದ್ದಾಳೆ ಎನ್ನುವ ಸಣ್ಣ ಸಂಕೇತ ಕೊಟ್ಟು ಹೋಗಿದ್ದಳು.
ಅಂತಹ ಆಕರ್ಷಣೆಗಳು ಬಾಳಿಕೆ ಬರುವುದಿಲ್ಲ ಅಂತ ಸತ್ಯದೇವನಿಗೆ ತಿಳಿದಿತ್ತು. ಜೊತೆಗೆ ತನಗಂತದ್ದರಲ್ಲಿ ಯಾವ ಆಸಕ್ತಿಯೂ ಇಲ್ಲ ಎಂದು ಅರಿತಿದ್ದ ಸತ್ಯದೇವ ದಿನಚರಿ ಮುಂದುವರೆಸಿದ್ದ. ಅವಳು ನೆಪಗಳನ್ನು ಹುಡುಕಿ ಆಫೀಸಿಗೆ ಬರುವುದು ಹೆಚ್ಚಾಯಿತು. ತನ್ನ ಅಧ್ಯಾತ್ಮದ ವಿಚಾರಗಳೂ ಎಲ್ಲೋ ಅಲುಗಾಡುತ್ತಿವೆ ಅನಿಸತೊಡಗಿತು ಇವನಿಗೆ. ಹೇಳಿಕೊಳ್ಳಲಾಗದಂತ ನೋವಿದೆ ಆಕೆಗೆ ಎನಿಸಿ ಮರುಗಿದ ತನ್ನ ಹೆಣ್ಣುಮನದ ಕುರಿತು ಅಸಹನೆಯಾದರೂ ಅವಳ ನಿತ್ಯದ ಅನಗತ್ಯ ಬರುವಿಕೆಗಾಗಿ ಸತ್ಯದೇವ್ ಕಾಯತೊಡಗಿದ್ದ.
'ನನ್ನನ್ನೇ ಯಾಕೆ ಆಯ್ಕೆ ಮಾಡಿಕೊಂಡೆ ಸೋನು' ಮಾತಿನ ಹಂತ ಮುಗಿದು ದೇಹಗಳು ಪರಿಚಯವಾಗುವ ಹೊತ್ತಿಗೆ ಅವಳ ಹಸಿವಿಗೆ ಆತುರಕ್ಕೆ ಅಬ್ಬರಕ್ಕೆ ಮುಗಿಯದ ತವಕಕ್ಕೆ ಸತ್ಯದೇವ್ ಬೆರಗಾಗಿದ್ದ. ಎಷ್ಟು ನೀಡಿದರೂ ಎಷ್ಟು ಪಡೆದರೂ ಮುಕ್ತಿಯಿಲ್ಲದ ಶಪಿತ ಅಪ್ಸರೆಯಂತೆ ಕೂಡುತ್ತಿದ್ದಳು. ಸತ್ಯದೇವನಿಗೆ ಇದೂ ಅಧ್ಯಾತ್ಮದ ಒಂದು ಭಾಗವೆಂಬಂತೆ ಅನಿಸತೊಡಗಿತು. ಅವಳ ಕೂಡುವಿಕೆಯಲ್ಲಿ ಯೋಗದ ಅಷ್ಟಾಂಗ ಮಾರ್ಗಗಳು ತುಂಬಿಕೊಂಡಿರುವಂತೆ ಕೊನೆಯಲ್ಲಿ ಇಬ್ಬರೂ ಧ್ಯಾನದ ತುರೀಯದಲ್ಲಿ ತೊಡಗಿದಂತೆ ಅಲೌಕಿಕ ದರ್ಶನವಾದಂತೆ ಅನಿಸುತಿತ್ತು. ಆದರೆ ಸತ್ಯದೇವನದ್ದು ಒಂದೇ ಒಂದು ಷರತ್ತು. 'ಎಂದಿಗೂ ನನ್ನನ್ನು ಕಟ್ಟಿಹಾಕಬಾರದು.ಇದೆಲ್ಲವನ್ನೂ ಮುಗಿಸಿಕೊಳ್ಳುತ್ತೇನೆ ಎಂದಾಗ, ಅಥವಾ ಇದು ನಿಸ್ಸಾರ ಎನಿಸಿದಾಗ ತಡೆಯಬಾರದು' ಅಂತ ಮಾತು ಪಡೆದಿದ್ದ ಅವಳ ಬಳಿ.
'ನೋ ಮೋರ್ ಕ್ವಷ್ಚನ್ಸ್ ದೇವ್' ಸೋನು ಅವನ ಪ್ರಶ್ನೆಗಳಲ್ಲಿ ಆಸಕ್ತಿಯಿಲ್ಲದವಳಂತೆ ಸುತ್ತಲೂ ನೋಡಿ ಮೋಹಕ ನಗೆ ನಕ್ಕು ಅವನ ತುಟಿಗಳ ಮೆದುವನ್ನು ತನ್ನ ತುಟಿಗಳಿಂದ ಪರೀಕ್ಷಿಸುವವಳಂತೆ ಹತ್ತಿರ ಹೋಗಿ ಹೂ ತಾಗಿದಂತೆ ಚುಂಬಿಸಿದಳು. ಸತ್ಯದೇವನಿಗೆ ಮೈ ಝಲ್ಲೆಂದ ಹಾಗಾಗಿ ಸಣ್ಣಗೆ ನಡುಗಿದ. ತನ್ನಿಡೀ ಮುಖದಿಂದ ಅವನ ಮುಖವನ್ನು ಆವರಿಸಿಕೊಂಡು ಅವನ ಕಾಲುಗಳ ಬಿಸುಪು ಪೂರ್ಣವಾಗಿ ತನ್ನ ಹೊಟ್ಟೆಗೆ ತಾಗುವಂತೆ ಒತ್ತಿಕೊಳ್ಳುತ್ತಾ 'ಸತ್ಯದೇವ..ಅಷ್ಟಲ್ಲದೇ ನಾನು ಈ ದೇಹವನ್ನು ನಂಬ್ತಿನಿ ಅನ್ನಲಿಲ್ಲವೊ ಜಾಣ. ತನ್ನ ದೇಹಕ್ಕೆ ಬೇಕಾದ ದೇಹವನ್ನು ದೇಹವೇ ಹುಡುಕಿಕೊಳ್ಳುತ್ತದೆಯಂತೆ. ಎಲ್ಲೋ ಓದಿದ್ದೀನಿ ನಾನು. ಅದನ್ನು ಕಂಪ್ಯಾಟಬಿಲಿಟಿ ಅಂತಾರಂತೆ.
ಬಹುವಿಧವಾದ ಆಯ್ಕೆಗಳಿದ್ದವು ನನ್ನಲ್ಲಿ. ಕಾಮದ ಕಲೆ ಪೂರ್ಣವಾಗಿ ತಿಳಿದವರಿಂದ ಹಿಡಿದು ಅವಕಾಶಗಳಿಗಾಗಿ ಹದ್ದಿನಂತೆ ಕಾಯುತ್ತಿರುವ ನಡುವಯದವರೂ, ರತಿಯ ಪಾಠಗಳನ್ನು ಕಲಿಸಬೇಕಾದ ನಿಗಿನಿಗಿ ಹುಡುಗರು, ಸಮಾಜದ ಮೇಲುಸ್ತರದ ಗೌರವಾನ್ವಿತರೂ ನನ್ನೆದುರಿನಲ್ಲಿ ಇದ್ದರು. ಗುಟ್ಟು ಹೇಗೆ ಕಾಪಾಡಿಕೊಳ್ಳುತ್ತಿ ಎನ್ನುವ ಪೆದ್ದು ಪ್ರಶ್ನೆ ಕೇಳಬೇಡ ಈಗ. ಈ ಉದ್ದ ಸರದಿಯಲ್ಲಿ ನನ್ನ ದೇಹ ನಿನ್ನನ್ನೇ ಆಯ್ಕೆ ಮಾಡಿಕೊಂಡಿತು ಅಂದರೆ ನಾನು ಮೇಲೆ ಹೇಳಿದ್ದು ನಿಜವಲ್ಲವ?'' ಎಲ್ಲೊ ಒಮ್ಮೊಮ್ಮೆ 'ಸತ್ಯದೇವ' ಎಂದು ಅವಳು ಕರೆಯುವ ಆ ಅಪರೂಪದ ಕ್ಷಣಗಳಲ್ಲಿ ಇಡೀ ಸೃಷ್ಟಿಯೇ ತನ್ಮಯವಾಗಿ ಆ ಹೆಸರು ಕೇಳಿಸಿಕೊಳ್ಳುತ್ತದೆ ಎನಿಸುತ್ತದೆ ಅವನಿಗೆ. 'ಹೆಣ್ಣಿಗೆ ಹೀಗನಿಸುತ್ತದೆ. ಅಥವಾ ಹೆಣ್ಣಿಗೆ ಮಾತ್ರ ಹೀಗನಿಸುತ್ತದೆ ಎನ್ನುವುದೂ ಸತ್ಯ.
ಗಂಡು ಈ ವಿಷಯದಲ್ಲಿ ತೀರಾ ಜಾಳು. ಹೊಂದಿಕೆಯೇ ಆಗದಂತವಳನ್ನೂ ಕರೆದು ನಿಲ್ಲಿಸಿ ನಾಕಾರು ಸಲುಗೆಯ ಮಾತಾಡಿ ಒಂದಿಷ್ಟು ಆಕರ್ಷಣೆ ಹುಟ್ಟಿಸಿದರೆ ಸಾಕು. ಕೂಡುವುದಕ್ಕೆ ಯಾವುದೇ ಅಡ್ಡಿ ಇಲ್ಲ ಅವನಿಗೆ. ಅರೆ..!!ಇವಳನ್ನು ಕೂಡಿದ್ದಾ ನೀವು ಅಂದರೆ ಬಣ್ಣ ಕಣ್ಣು ಎತ್ತರ ದಪ್ಪ ಇದಾವುದೂ ಅಲ್ಲ. ಅದು ಸಂಪೂರ್ಣ ವ್ಯಕ್ತಿತ್ವದ ಆಕರ್ಷಣೆ ಅಂತೇನೋ ಆ ಕ್ಷಣಕ್ಕೆ ಹೊಳೆದ ಪೊಳ್ಳುವಾದ ಮಂಡಿಸುತ್ತಾನೆ. ಹೆಣ್ಣಿನ ಆಯ್ಕೆ ಹಾಗಲ್ಲ. ಅದರಲ್ಲಿ ಖಚಿತತೆ ಇರುತ್ತದೆ. ಅವಳ ಅವನಲ್ಲದ ಯಾವ ಚಲುವಾಂತ ಚಲುವನೂ ಗರಿಮುರಿ ಹುಡುಗನೂ ಅವಳನ್ನು ಸೆಳೆಯಲಾರ.
ನೋಡು..ಮುವ್ವತ್ತೆಂಟೆಂದರೆ ಮುಟ್ಟು ನಿಲ್ಲುವ ಮೂಕಾಲ ಹಿಂದಿನದ್ದೆಂದು ,ಹೆಂಡತಿ ಆ ಸಮಯದಲ್ಲಿ ಯಾವುದಕ್ಕೂ ಸಹಕರಿಸುವುದಿಲ್ಲವೆಂದು,ಒಣ ಒಣ ಇರುತ್ತಾಳೆಂದು ಹೇಳಿಕೊಳ್ಳುವ ಅನೇಕ ಬರಹಗಳನ್ನು ಓದಿದ್ದೀನಿ ನಾನು. ಸತ್ಯ ಗೊತ್ತಾ ದೇವ್. ಅದು ಹೆಣ್ಣಿಗೆ ಪೂರ್ಣ ಸೌಂದರ್ಯ ಕೊಡುವ ವಯಸ್ಸು. ಮಕ್ಕಳು ಮನೆಗಳ ಹೊರೆ ಇಳುಕಿ ಹಾಯಾಗಿ ತನ್ನ ಸಲುವಾಗಿ ಯೋಚಿಸಿಕೊಳ್ಳುವ ವಯಸ್ಸು. ಹರೆಯದ ಮಕ್ಕಳ ತಾಯಾಗಿ, ವೃದ್ಧಾಪ್ಯದ ತಂದೆತಾಯಿಗಳಿಗೆ ಜವಾಬ್ದಾರಿಯುತ ಮಗಳಾಗಿ ಸಂಬಂಧಿಕರ ನಡುವೆ ಸದ್ಗೃಹಿಣಿಯಾಗಿ ಹೊರಪಾತ್ರವನ್ನು ಪೋಷಿಸಿಕೊಳ್ಳುತ್ತಲೇ ಒಳಗೆ ನಿರಂತರವಾಗಿ ಹೆಡೆ ಎತ್ತುವ ಮಿಡಿನಾಗರವನ್ನು ಬಡಿದು ಬುಟ್ಟಿಯೊಳಗೇ ಕೂರಿಸಲು ಹೆಣಗಾಡುವ ವಯಸ್ಸು. ಗಂಡ ಇದನ್ನು ಅರಿತು ನುರಿತವನಾದರೆ ಅಡ್ಡಿಯಿಲ್ಲ. ಆಗದಿದ್ದರೆ ಜಗತ್ತು ವಿಶಾಲವಾಗಿದೆ ಎನ್ನುವ ಹುಚ್ಚುಖೋಡಿ ವಯಸ್ಸು. ಗರ್ಭನಿಲ್ಲುವ, ಮುಟ್ಟಿಗೆ ಮೈ ಮುರಿಯುವಂತೆ ಬೆನ್ನು ಹೊಟ್ಟೆ ನೋಯುವ ಎಲ್ಲವೂ ಮುಗಿದು ಕನಸು ಕೆನೆಗಟ್ಟುವ ವಯಸ್ಸು. ಮನಸ್ಸು ಕಡೆವ ಮೊಸರು, ತೇಲುವ ಬೆಣ್ಣೆ ,ಕಾಯುವ ತುಪ್ಪ.. ಘಮ್ಮಘಮ್ಮೆನ್ನುವ ವಯಸ್ಸು' ಅವನ ತಲೆಗೂದಲಲ್ಲಿ ಕೈಯಾಡಿಸುತ್ತಾ ಕೊರಳಿಗೆ ಮೂಗು ತಾಕಿಸುತ್ತಿದ್ದವಳನ್ನೇ ನೋಡುತ್ತಿದವನಿಗೆ ದಬ್ಬಿಕೊಂಡು ನಿಟ್ಟುಸಿರು ಬಂದಿತು.
'ಎಷ್ಟೊಂದು ಹಗೂರ ಮಾತಾಡುತ್ತಾಳೆ. ಮೊದಲಿನ ನಾನಾಗಿದ್ದರೆ ಎಗ್ಗಿಲ್ಲದ ಹೆಂಗಸಿನ ಮಾತು ಅಂದುಕೊಂಡು ಬಿಡ್ತಿದ್ದೆ' ಸತ್ಯದೇವ ಅವಳೆದೆಯ ಬಿಸುಪಿನಲ್ಲಿ ಉಸುರುಗಟ್ಟುತ್ತಿದ್ದವ ಏನೋ ನೆನಪಾಗಿ ಉನ್ಮತ್ತತೆಯಲ್ಲಿ ಕಣ್ಣು ಮುಚ್ಚಿದ. ತಿಳಿಗಿಳಿ ಬಣ್ಣದ ಚೂಡಿದಾರಿನ ಮೇಲೆ ಹೊದ್ದಿದ್ದ ಚಿನ್ನದ ಬಣ್ಣದ ಲೇಸಿನ ದುಪ್ಪಟ್ಟಾವನ್ನು ತಲೆಮೇಲೆ ಹಾಕಿಕೊಂಡು ಆ ಜಾಗದ ನೆನಪಿಗೆಂಬಂತೆ ಅವನ ಎಡತೋಳಿಗೆ ಒಂದು ಮುತ್ತು ಒತ್ತಿ ಕುಳಿತಲ್ಲಿಂದ ಎದ್ದಳು. ಅವಳನ್ನೇ ಅನುಕರಿಸುವವನಂತೆ ಸತ್ಯದೇವ ಕೋಡುಗಲ್ಲಿನ ಕೊನೆಯಲ್ಲಿ ಕೆಂಪಗೆ ಕಾಯುತ್ತಿದ್ದ ಮುಗಿಲನ್ನು ನೋಡುತ್ತ ತಾನೂ ಎದ್ದ. ಗಿರಿಗಳೇ ತುಂಬಿದ ಆ ಊರಿನ ಎಲ್ಲ ಸಣ್ಣ ದೊಡ್ಡ ಗಿರಿಗಳ ಮೇಲೂ ,ಅದರೆತ್ತರದ ಕೋಡುಗಲ್ಲುಗಳ ಮೇಲೂ, ಎಳೆಗರಿಕೆಗಳ ಮೇಲು, ಪುಟ್ಟಾಣಿ ಮರಗಳ ಮೇಲೂ ಸೂರ್ಯ ಆ ದಿನದ ತನ್ನ ಕೊನೆಯ ಪಾಳಿಯ ಪ್ರೇಮ ಹೊದಿಸುತ್ತಿದ್ದ. ಅವರು ಇಳಿಯುವುದನ್ನು ನೋಡಿದ ಟ್ಯಾಕ್ಸಿ ಡ್ರೈವರ್ ತನ್ನ ಅರೆನಿದ್ರೆಯಿಂದಲೂ ಕಂಡ ಪೋಲಿ ಕನಸಿನ ಗುಂಗಿನಿಂದಲೂ ಆಚೆಬಂದು ಅಲ್ಲೇ ನಲ್ಲಿ ತಿರುಗಿಸಿ ಮುಖಕ್ಕೆ ನೀರು ಎರಚಿಕೊಂಡ. ಅವಳ ಕೆಂಪಾದ ತುಂಬಿಕೊಂಡ ಕೆನ್ನೆಗಳು ಇಳಿಸೂರ್ಯನ ಕಿರಣಗಳಿಗೆ ಹೊಳೆಯುತ್ತಿದ್ದವು. ಹುಡುಗನ ವ್ಯಕ್ತಿತ್ವಕ್ಕೆ ಹೊಸತೊಂದು ಹುರುಪು ಬಂದಿರುವುದನ್ನು ಕಿರುಗಣ್ಣಿನಲ್ಲೇ ಗಮನಿಸಿದ ಟ್ಯಾಕ್ಸಿಯವ.
'ಅಬ್ ಕಹಾ ಮೇಮ್ ಸಾಬ್' ಅಂದ. ಪರವೂರಿನ ಪ್ರವಾಸಿಗರ ಎದುರಿಗೆ ಹರುಕುಮುರುಕು ಹೊಸ ಭಾಷೆಯಲ್ಲಿ ಮಾತಾಡುವುದು ಅವನಿಗೆ ಖುಷಿ. 'ಹಸಿವಾಗ್ತಿದೆ.ಎಲ್ಲದರೂ ತಳ್ಳುಗಾಡಿಯವ ಸಿಕ್ಕಿದ್ರೂ ಸಾಕು' ಅವಳೆಂದಳು. ಸತ್ಯದೇವ ತುಳುಕಿದವನಂತಾಗಿ ಅವಳ ಕಡೆಗೆ ನೋಡಿದ. 'ನನ್ನ ಹೆಣ್ಣು' ಅನಿಸಿತು. ತಕ್ಷಣವೇ ಉಹು.ಇದು ನಾನಲ್ಲ. ನನ್ನ ಗುರಿ ಹೀಗೆ ಕಾಮಮೋಹದಲ್ಲಿ ಮುಳುಗುವುದಲ್ಲ. ಅಧ್ಯಾತ್ಮದೆಡೆಗೆ ತಿರುಗಿದ್ದ ,ಬದುಕಿನಲ್ಲಿ ಮತ್ತೇನೋ ಸಾಧಿಸ ಬೇಕೆಂದುಕೊಂಡಿದ್ದ ಮನಸ್ಸು ನನ್ನದು. ಅದನ್ನು ಹಾಗೇ ಉಳಿಸಿಕೊಳ್ಳಬೇಕು. ಅವಳಿಂದಲೂ ಮಾತು ಪಡೆದಿದ್ದೇನೆ. ಬಿಡುಗಡೆ ಬೇಕೆಂದ ಕೂಡಲೇ ಹೊರಡುವುದಕ್ಕೆ ಅನುಮತಿಸಬೇಕೆಂದು. 'ಇದು ಕೇವಲ ಸದ್ಯದ ಸಂಬಂಧ' ಮತ್ತೆಮತ್ತೆ ಹೇಳಿಕೊಂಡ ಸತ್ಯದೇವ. ಗಿರಿಗಳೇ ಇರುವ ಆ ಊರಿನಲ್ಲಿ ರಸ್ತೆಗಳೂ ತಿರುವುಮುರುವು. ಇನ್ನೇನು ಪೇಟೆ ಸಮೀಪಿಸಿತು ಎನ್ನುವಲ್ಲಿ ಇಡ್ಲಿ ಮತ್ತು ಮೊಟ್ಟೆಯ ಚಿತ್ರವಿದ್ದ ಗಾಡಿಯವನನ್ನ ಕಂಡ ಡ್ರೈವರ್ 'ಹೋಗಾ ಮೇಮ್ ಸಾಬ್' ಅನ್ನುತ್ತಾ ಕನ್ನಡಿಯಲ್ಲಿ ಅವರಿಬ್ಬರನ್ನು ನೋಡಿದ.
ತೆಂಗಿನ ಕಡ್ಡಿಯಲ್ಲಿ ಹೊಲೆದ ಒಣಗಿದ ಮುತ್ತುಗದ ಎಲೆಯ ಮೇಲೆ ಬಿಸಿ ಇಡ್ಲಿ ಚಟ್ನಿ ಮತ್ತು ಬದಿಗೆ ಬೆಂದ ಮೊಟ್ಟೆ ಮೇಲೆ ಉಪ್ಪು ಮೆಣಸು. ಅವಳು ಎರಡೆರಡು ಸರ್ತಿ ಹಾಕಿಸಿಕೊಂಡು ಬೆರಳ ತುದಿಯ ಚಟ್ನಿ ನೆಕ್ಕಿ ಹಿಂದೆಂದೂ ಇಂತಹ ಅಪರೂಪದ ತಿನಿಸು ತಿಂದೇ ಇಲ್ಲವೆಂಬಂತೆ ಚಪ್ಪರಿಸಿದಳು. ಅವನು ಅವಳು ತಿನ್ನುವ ಚಂದ ನೋಡುತ್ತಾ ಮೊಟ್ಟೆಯ ಮೇಲೆ ತುಸು ಉಪ್ಪು ಮೆಣಸು ಹೆಚ್ಚಾಗಿ ಹಾಕಿಸಿಕೊಂಡ. ಸ್ಟೀರಿಂಗ್ ಹಿಡಿದು ಸೈಡ್ ಮಿರರಿನಲ್ಲಿ ಇವರನ್ನೇ ಮುಗಿಯದ ಕುತೂಹಲದಿಂದ ನೋಡುತ್ತಿದ್ದ ಡ್ರೈವರ್ ಗೆ ಇಡ್ಲಿ ಕಳಿಸಿಕೊಟ್ಟಳು ಹುಡುಗನ ಹತ್ತಿರ. ಜಿಗುಟು ಫ್ಲಾಸ್ಕಿನಲ್ಲಿ ಇರುವುದು ಏನಂತ ವಿಚಾರಿಸಿ ಉಳಿದಿದ್ದ ಕೊನೆಯ ಕಾಫಿಯನ್ನು ಒಂದು ಬಸಿಗೆ ಹಾಕಿಸಿಕೊಂಡು ಎರಡೂ ಕೈಯಲ್ಲಿ ಹಿಡಿದು ತಾನೊಂದು ಗುಟುಕು ಕುಡಿದು ಅವನಿಗೆ ಕುಡಿಸಿದಳು. ತನ್ನ ಎಂಜಲು ಕೈಯನ್ನು ಉಳಿದಿದ್ದ ತುಸುವೇ ನೀರಿನಲ್ಲಿ ತೊಳೆದರೂ ಜಿಡ್ಡು ಹೋಗದಿದ್ದಾಗ ಪರ್ಸ್ ಓಪನ್ ಮಾಡಲು ಸತ್ಯದೇವನಿಗೆ ಹೇಳಿ ಒಳಗಿದ್ದ ಹೊಸ ನೋಟನ್ನು ಇಡ್ಲಿ ಹುಡುಗನಿಗೆ ನೀಡಿ ಚಿಲ್ಲರೆ ಇಟ್ಟುಕೊ ಎಂದಳು. ಟ್ಯಾಕ್ಸಿಯವನ ಬಳಿ ಬಂದು ಇಲ್ಲಿಂದ ಹೊಟೇಲಿನವರೆಗೆ ನಡೆದೇ ಹೋಗುವೆವೆಂದು ಹೇಳಿ ಅವನಿಗೂ ದೊಡ್ಡ ನೋಟನ್ನೇ ನೀಡಿ ಚಿಲ್ಲರೆ ಇಟ್ಕೊ ಅಂದಳು. ಇಲ್ಲಿಯವರೆಗೂ ಗಂಡಷ್ಟೇ ಹಣ ಕೊಡುತ್ತಿದ್ದ, ಗಂಡಷ್ಟೇ ಸಂಗತಿಗಳನ್ನು ನಿರ್ಧರಿಸುತ್ತಿದ್ದ ಮತ್ತು ಉಳಿದ ಚಿಲ್ಲರೆಗಾಗಿ ಜೊತೆಯಲ್ಲಿದ್ದ ಹೆಂಗಸರು ಮಾತು ಬೆಳೆಸುತ್ತಿದ್ದ ದೃಶ್ಯವನ್ನೇ ನೋಡಿದ ಟ್ಯಾಕ್ಸಿಯವನಿಗೆ ಇದೆಲ್ಲವೂ ಪರಮಾಶ್ಚರ್ಯ ಎನಿಸಿ ಎಷ್ಟು ಹೊತ್ತಿಗೆ ಇದನ್ನೆಲ್ಲ ತನ್ನ ಗೆಳೆಯರಿಗೂ ಮನೆಯವರಿಗೂ ಹೇಳುತ್ತೀನೋ ಎನ್ನುವ ಅವಸರ ಹತ್ತಿತು.
ಇಲ್ಲಿಯವರೆಗೂ ತಾನು ಮೊಟ್ಟೆ ತಿಂದಿರಲಿಲ್ಲವೆಂಬ ಸತ್ಯ ಅಚಾನಕ್ಕು ಅರಿವಾದ ಸತ್ಯದೇವನಿಗೆ ಬೆರಗು. ಆದಷ್ಟೂ ಸಾತ್ವಿಕವಾಗಿ ಉಣ್ಣುವ ತಾನು ಅಷ್ಟೊಂದು ಉಪ್ಪು ಮೆಣಸು ಹಾಕಿಸಿಕೊಂಡಿದ್ದು ಯಾಕೆಂತ ಯೋಚಿಸಿದ. ಅಷ್ಟರಲ್ಲಾಗಲೇ ಆ ಊರಿನಲ್ಲಿ ಕತ್ತಲು. 'ದೇವ್ ಎಷ್ಟು ಗಟ್ಟಿಯಾಗಿ ತಬ್ಬಿಕೊಂಡರೂ ಈಗ ಯಾರಿಗೂ ಕಾಣಲ್ಲ ನೋಡು' ಎನ್ನುತ್ತಾ ಅವಳು ಮತ್ತೊಮ್ಮೆ ಅವನನ್ನು ಬಲವಾಗಿ ತಬ್ಬಿದಳು. ಅವಳ ದೇಹದ ತಿರುವುಗಳಲ್ಲಿ ಹೊಮ್ಮುತ್ತಿದ್ದ ಶಾಖ ಅವನಿಗೆ ತಾಗಿ ಒಮ್ಮೆಗೆ ಉನ್ಮತ್ತನಾದ ಸತ್ಯದೇವ. 'ಸೋನು.. ನಿನ್ನ ಅಮ್ಮ ಅಪ್ಪನಿಗೆ ಈ ವಿಷಯ ಹೇಳಿದ್ದೀಯಾ?' ಅವಳ ಹೆಸರು ಚಂದ್ರನಂದಿನಿ ಎನ್ನುವುದು ಗೊತ್ತಿದ್ದರೂ ಭೆಟ್ಟಿಯಾದ ನಾಲ್ಕಾರು ದಿನಗಳಲ್ಲೇ ಅವನು ಅವಳನ್ನು ಸೋನು ಅನ್ನಲಾರಂಬಿಸಿದ್ದ. 'ಚಂದ್ರಾ' ಅನ್ನು ಅಂತ ಅವಳು ಕೋರಿದ ಮೇಲೂ ಅವನು ಸೋನು ಎನ್ನುವುದನ್ನು ನಿಲ್ಲಿಸಲಿಲ್ಲ. ಅವಳೂ ಮತ್ತೆ ಒತ್ತಾಯಿಸಿರಲಿಲ್ಲ. ಹಿಂದಿನ ರಾತ್ರಿ ದೇವಸ್ಥಾನಕ್ಕೆ ಹೋಗುವೆನೆಂದು ಹೇಳಿ ತನ್ನ ದೂರದ ಊರಿನಿಂದ ಬಂದಿದ್ದಳು ಅವಳು. ಕೆಲಸದ ನಿಮಿತ್ತ ಪರವೂರಿಗೆ ಹೋಗುವೆನೆಂದು ಮನೆಯಲ್ಲಿ ಹೇಳಿದ್ದ ಇವನು. ಉಳಿಯಲು ಮೊದಲೇ ನಿಗದಿ ಮಾಡಿದ್ದ ಆ ಜಾಗಕ್ಕೆ ಬಂದಾಗ ಎಳೆಯ ಅಮ್ಮಂದಿರು ತಮ್ಮ ಕೂಸುಗಳಿಂದ ಮೊಲೆ ಬಿಡಿಸಿ ತಮ್ಮತಮ್ಮ ಗಂಡಂದಿರ ತುಟಿಗಿಡುವ ಹೊತ್ತು.
'ಮೂರ್ಖ ನೀನು' ಅಂದಳು. ತನ್ನ ಪ್ರಶ್ನೆಗೆ ಇನ್ನೂ ಉತ್ತರ ಬಾರದಿದ್ದಾಗ ಅದು ನಿರ್ಲಕ್ಷಿಸಿಸಬೇಕಾದ ಪ್ರಶ್ನೆಯಿರಬೇಕು ಎಂದುಕೊಂಡವನಿಗೆ ಅವಳು ಹೀಗಂದಾಗ ಎಂಥದೊ ಸಮಾಧಾನ. 'ಅಮ್ಮ ಅಪ್ಪನಿಗೆ ಏನಂತ ಹೇಳಬಹುದು ಹೇಳು? ನೀವು ಆರಿಸಿದ ನಿಮ್ಮ ಅಳಿಯ ನನ್ನ ಹಸಿವು ನೀಗಿಸುತ್ತಿಲ್ಲ ಅಂತಲಾ? ಅಥವಾ ತವರಿಗೆ ಕಳಿಸಿ ಅಲ್ಲಿಯೇ ಇನ್ನೂ ಆರು ತಿಂಗಳು ಇರು, ಇನ್ನೂ ಇರು ಅನ್ನುತ್ತಾರೆ ಅಂತಲಾ? ಅಥವಾ ಹೀಗೊಂದು ಹೊರದಾರಿ ಹುಡುಕಿಕೊಂಡಿದ್ದೇನೆ ಅಂತಲಾ? ಯಾವುದನ್ನು ಹೇಳಲಿ? ಅವರು ಅಪ್ಪ ಅಮ್ಮ ಅಷ್ಟೇ ಸತ್ಯಾ. ಒಂದು ಹಂತದವರೆಗೆ ಮಾತ್ರ ಆ ಪಾತ್ರ. ಮೂರೂ ಕಾಲ ಮಕ್ಕಳ ಗೋಳೇ ಕೇಳುವುದಾದರೆ ಅವರ ಸ್ವಂತದ ಸಮಯ ಎಲ್ಲಿ ಉಳಿಯುತ್ತೆ? ಅವರೂ ಪ್ರೀತಿಸಿಕೊಳ್ಳಬೇಕಲ್ವಾ?' ಸತ್ಯದೇವನಿಗೆ ಉತ್ತರಿಸ ಬೇಕೆನಿಸಲಿಲ್ಲ.
ಹಿಂದೆ ಎಷ್ಟೋ ಬಾರಿ ಕೂಡಿದ್ದರೂ ಆ ರಾತ್ರಿ ಆ ಕೋಣೆಯೊಳಗೆ ಮೊದಲ ಹೆಜ್ಜೆ ಇಡುವಾಗ ಸತ್ಯದೇವನ ಹೃದಯ ಮೆಲ್ಲಗೆ ತಲ್ಲಣಿಸಿತು. ಇಡೀ ದೇಹವನ್ನು ಬೆಳಕು ಹಾಯ್ದು ಹೋದಂತೆ . ಮನಸ್ಸು ಹಕ್ಕಿ ಹಗುರಾದಂತೆ ಹೂವಿನಷ್ಟು ಭಾರವಾದಂತೆ. ಆ ಕೋಣೆಯ ದೊಡ್ಡ ಮಂಚದ ತಲೆಯ ಮೇಲಿದ್ದ ಚಿತ್ರದಲ್ಲಿ ಹುಟ್ಟುಡುಗೆಯ ಹೆಣ್ಣೊಬ್ಬಳು ಎದುರಿಗಿರುವ ವಿಶಾಲ ಸಮುದ್ರವನ್ನು ನೋಡುತ್ತಿದ್ದಾಳೆ. ಸತ್ಯದೇವನ ಎದೆಯ ಏರಿಳಿತ ಹಿಡಿತ ಮೀರಿ ಅದನ್ನು ತಡೆಯಲೆಂಬಂತೆ ಅವನು ಮತ್ತೆಮತ್ತೆ ಆ ಬೆತ್ತಲು ಬೆನ್ನಿನ ಚಿತ್ರವನ್ನೇ ನೋಡಿದ. ಒಳಗೆ ಬಂದವನ ಪಾದ ನೋಯುವವೋ ಎಂಬಂತೆ ಮೆಲ್ಲಗೆ ತಬ್ಬಿ ತಿಳಿಗುಲಾಬಿ ಹಾಸು ಹಾಸಿದ್ದ ಮಂಚದ ಮೇಲೆ ಕೂರಿಸಿ ಅಂಗಿಯ ಮೊದಲ ಗುಂಡಿ ಬಿಡಿಸಿ ಅವನೆದೆಗೆ ತುಟಿ ತಾಕಿಸಿದವಳು ನಡೆದು ಕೋಣೆಯ ಅಗುಳಿ ಹಾಕಿದಳು. ಅವಳ ಚೂಡಿದಾರಿನಲ್ಲಿ ಗಿರಿಯ ಮೇಲಿಂದ ಬಂದಿದ್ದ ಎಂತದ್ದೋ ಪುಟ್ಟ ಮುಳ್ಳುಗಳು ಅಂಟಿಕೊಂಡಿದ್ದವು. 'ಎಲ್ಲಿಗೆ ಹೋಗ್ತಿವೋ ಅಲ್ಲಿಂದೆಲ್ಲ ಏನಾದರೂ ಹೊತ್ತು ತರ್ತದೆ ನೋಡು ಈ ಜೀವ' ಎನ್ನುತ್ತಾ ಚುಕ್ಕಿ ಉದುರಿದಂತೆ ನಕ್ಕಳು. ಅವಳ ಕಣ್ಣು ತುಂಬಿದ್ದನ್ನು ಇಲ್ಲಿಯವರೆಗೂ ನೋಡಿರಲಿಲ್ಲ ಅವನು.
ಅವಳನ್ನೇ ನೋಡಿದ ಸತ್ಯದೇವ. ಮತ್ತೆಮತ್ತೆ... 'ಅತ್ತುಬಿಡು ನನ್ನ ಹೆಣ್ಣೆ. ಹಗುರಾಗು. ಕರಗಿ ತಿಳಿಯಾಗು. ಬಾ ನನ್ನ ಮಡಿಲಿಗೆ. ನಿನ್ನ ಎದೆಯ ಸಂಕಟಗಳ ಚೆಲ್ಲು, ಕತ್ತಲನ್ನು ಸುಮ್ಮನೆ ಬೆಳಕೆನ್ನಬೇಡ, ಬಿಕ್ಕುವ ಹೊತ್ತಿನಲ್ಲಿ ನಕ್ಕು ಭಾರವಾಗಬೇಡ. ನಿನ್ನದು ದೇಹ ಮೋಹವಲ್ಲ ನನ್ನ ಗೆಳತಿ. ಹೊತ್ತಿ ಉರಿಯುವ ಕಾಮವಲ್ಲ ನಿನ್ನನ್ನು ಕಾಡುತ್ತಿರುವುದು. ಬಾ..ಬಾ ನನ್ನ ತೋಳಿಗೆ. ನೀನು ಬಯಸಿದಷ್ಟು ಹೊತ್ತು ತಬ್ಬಿ ಕೂರುತ್ತೇನೆ. ಬರುವ ಬೆಳಗನ್ನು ಒಟ್ಟಿಗೇ ನೋಡೋಣ. ಬೆಳಕು ಹರಿದ ಮೇಲೂ ತುಸು ಹೊತ್ತು ಮಲಗುವಿಯಂತೆ. ಬಾ ನನ್ನ ಒಲುಮೆಯ ಹೆಣ್ಣೆ' ಸತ್ಯದೇವನಿಗೆ ಮತ್ತೂ ಏನೇನೋ ಹೇಳ ಬೇಕೆನಿಸುತ್ತಿತ್ತು. ಆದರೆ ಎದೆಯ ಪದಗಳೊಂದು ಸ್ವರವಾಗಿ ಹೊರಬರಲಿಲ್ಲ. 'ಸತ್ಯಾ ' ಸುಖವನ್ನೇ ಉಸುರುತ್ತಿರುವವಳಂತೆ ಅವನ ಸನಿಹವೊಂದೇ ಅವಳೆಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಉರಿಬೇಸಿಗೆಯಲ್ಲಿ ಮಳೆ ಕುಡಿದ ಮಣ್ಣಿನ ಒಂದು ಅಗುಳಿನಂತೆ ಅವಳು ಅವನನ್ನು ತುಂಬಿಕೊಂಡ ದನಿಯಲ್ಲಿ ಕರೆದಳು.
'ದೇಹ ಈ ಜಗದ ಆದಿಮ ಸತ್ಯ ಸತ್ಯಾ. ಪ್ರೇಮ ಪ್ರೀತಿ ಅತ್ಮಸಾಂಗತ್ಯ ಇವೆಲ್ಲವೂ ಹೊಟ್ಟೆತುಂಬಿದ ಮಂದಿಯಾಡುವ ಮಾತು. ಗಿರಿಗಳೇ ತುಂಬಿರುವ ಈ ಊರಿನಲ್ಲಿ ನಾವಿಬ್ಬರೂ ಕೂಡಿ ನೋಡಿದ ಆ ಬೆಟ್ಟದ ತುಟ್ಟತುದಿಯಲ್ಲಿ ನಿಲ್ಲುವಂತ ಕೂಡಿಕೆ ಬೇಕು ಈ ರಾತ್ರಿ ನನಗೆ. ಕಣ್ಣ ಬೇಲಿಗಳ ಕಳಚಿ ಬಂದಿದ್ದೆವೆ ಈ ಎತ್ತರದ ಊರಿಗೆ. ನನ್ನ ದೇವರಂತಹ ಗಂಡು ನೀನು. ನನಗಾಗಿಯೇ ತಯಾರಾದ ಗಂಡು. ಹಸೀ ಆಸೆಗಳ ವಿಪರೀತ ಮೋಹಗಳ ಕಚ್ಚಾ ಬಯಕೆಯ ನನ್ನಂತವಳಿಗೆ ಅಲೌಕಿಕದ ಆಧ್ಯಾತ್ಮದ ಹಸಿವಿರುವ ಗಂಡು!! ಎರಡೂ ಬೆಳಕೇ ಸತ್ಯ. ಬೆಳಕು ಬೆಳಕು ಕೂಡಿದರೆ ಬೆಳಕೇ ಆಗುತ್ತದೆ. ಗಣಿತದಂತಲ್ಲ ನೋಡು ಈ ಕೂಟ. ಕಾಡುವ ಈ ಹಸಿವಿನಿಂದ ಶಾಶ್ವತ ಮುಕ್ತಗೊಳಿಸು. ಝಲ್ಲನೆ ಝರಿಯೊಂದು ಒಡಲು ಕೊರೆದು ಹರಿದು ಬರುವಂತೆ ಕೂಡು. ಮುಟ್ಟು ಮುಗಿದು ಏಳನೇ ದಿನವಿದು. ನಿಲ್ಲುವುದಿದ್ದರೆ ನಿಂತೇ ಬಿಡಲಿ ನೀರು' ಅವಳು ಏನು ಹೇಳಿದಳೆನ್ನುವುದು ಅವನಿಗೆ ತಿಳಿಯಿತೊ ಇಲ್ಲವೊ. ಈ ತನಕ ಮಾತಾಡಿದ್ದು ಸತ್ಯವೋ ಅಥವಾ ಭ್ರಮೆಯೊ ಅಂತ ಅವಳು ಯೋಚಿಸಿದಳು. ಚಿತ್ರದಲ್ಲಿದ್ದ ಬೆತ್ತಲು ಬೆನ್ನಿನ ಹುಡುಗಿ ಆ ಕೋಣೆಯಾವರಿಸಿದ್ದ ಪ್ರೇಮಕ್ಕೆ ತೋಯ್ದು ಹೊಸ ಚೆಲುವಲ್ಲಿ ಶೋಭಿಸಿದಳು. ಉಕ್ಕುವ ಒಲುಮೆಯಿಂದ ತನ್ನ ಒದ್ದೆ ತುಟಿಗಳನ್ನು ಅವನ ಬೆಚ್ಚನೆಯ ತುಟಿಗಳಿಗೆ ಒತ್ತಿದವಳನ್ನು ತಾವಿಬ್ಬರೂ ಒಬ್ಬರೇ ಎನ್ನುವಷ್ಟು ಹತ್ತಿರಾಗುವಂತೆ ತಬ್ಬಿಕೊಂಡ ಸತ್ಯದೇವ.
ಆ ರಾತ್ರಿ ಅವರ ಮುಗಿಲಿನಲ್ಲಿ ನಕ್ಷತ್ರಗಳಿರದ ಒಂದಿಷ್ಟೂ ಜಾಗವಿರಲಿಲ್ಲ. ಆ ರಾತ್ರಿ ಆ ಊರಿನ ಮಕ್ಕಳು ನಿದ್ದೆಯಲ್ಲಿ ಎದ್ದು ರಚ್ಚೆ ತೆಗೆಯಲಿಲ್ಲ. ಆ ರಾತ್ರಿ ಆ ಊರ ಗಿರಿಯ ಸಮತಟ್ಟಿನ ಹಾದಿಗಳಲ್ಲಿ ಕಾಣದ ಬೆಳಕೆರಡು ಹರಿದಾಡಿದವು. ಆ ರಾತ್ರಿ ಮರಗಳ ಹರೆಹರೆಗೂ ನೆಲದ ನೀರು ಸರಸರನೆ ಹರಿಯಿತು. ನನ್ನ ಅಪ್ಪುಗೆಯಲ್ಲಿರುವ ಈ ನನ್ನ ಹೆಣ್ಣು ಬಯಸುವಂತೆ ಕೂಡುವುದಷ್ಟೆ ಈ ಕ್ಷಣದ ಗಮ್ಯ. ಸತ್ಯದೇವ ಕಟ್ಟಿದ್ದ ಅವಳ ಮುಡಿಯನ್ನು ಹರವಿ ನೆತ್ತಿಗೆ ಮುಖವೊತ್ತಿಕೊಂಡ. ಅವಳ ನಡುವಿಗೆ ತನ್ನ ಬಿಸುಪಿನ ಕೈಯಿಟ್ಟ. ತನ್ನ ದೇಹ ಹೊತ್ತಿರುವ ಹೊಸ ಭಾರವೆಲ್ಲವನ್ನೂ ಹೊರಬೇಕಾದ ಜೀವ ಇವಳೆಂಬಂತೆ ಮೆಲ್ಲಗೆ ಮೇಲೇರಿ ಬಂದ. ಅವನ ಕೊರಳ ಇಳಿಯಲ್ಲಿ ಮುಖವಿಟ್ಟು ಸುಖಿಸುತ್ತಿದ್ದವಳನ್ನು ಮತ್ತೂ ಒತ್ತಿಕೊಂಡು ಮೆಲ್ಲಗೆ 'ಚಂದ್ರಾ!' ಎಂದ. ಇನ್ನು ತಾಳೆವು ಎಂಬಂತೆ ಫಳಕ್ಕನೆ ಕಣ್ಣೀರು ಚೆಲ್ಲಿದವು ಅವಳ ತುಂಬಿಕೊಂಡ ಕಣ್ಣು.
'ಚಂದ್ರಾ... ನನ್ನ ಹೆಣ್ಣೇ..ನಿನ್ನ ಹಸಿವೆಯಿರುವುದು ದೇಹದ್ದಲ್ಲ. ಪ್ರೇಮದ್ದು. ನೀನು ಕಳೆದುಕೊಂಡಿರುವುದು ನಿನ್ನ ಹಕ್ಕಿನ ಪ್ರೀತಿ. ಹುಡುಕುತ್ತಿರುವುದು ಮುಗಿಯದ ಒಲುಮೆ. ಕಳಚಿದೆ ನನ್ನ ಹುಸಿ ಆಧ್ಯಾತ್ಮದ ಆಸೆ. ಎಲ್ಲೋ ಏನನ್ನೊ ಹುಡುಕುವ ಹುಚ್ಚು ಮುಗಿಯಿತು ಇನ್ನು ನನಗೆ. ಅಲೌಕಿಕವೆಂದರೇನೆಂದು ದರ್ಶನ ಮಾಡಿಸಿದವಳು ನೀನು. ನೀನಿನ್ನು ಆ ನರಕಕ್ಕೆ ಹೋಗಬೇಕಿಲ್ಲ ಚಂದ್ರಾ. ನನ್ನವಳು ನೀನು. ನಾನು ಬಾಳಿಸಿ ನನ್ನ ಬಾಳಿಸಬೇಕಾದವಳು ನೀನು. ಚಂದ್ರಾ..ನಾಳೆಯೇ ನಮ್ಮ ಉಹು ಈ ಕ್ಷಣದಿಂದ ನೀನು ನನ್ನ ಧರ್ಮಪತ್ನಿ. ಗಿರಿಗಳ ಸಾಕ್ಷಿಯಾಗಿ ಸಮತಟ್ಟು ಹಾದಿಗಳ ಸಾಕ್ಷಿಯಾಗಿ ಈ ಬೆತ್ತಲು ಬೆನ್ನಿನ ಹುಡುಗಿಯ ಸಾಕ್ಷಿಯಾಗಿ...' ಅವನು ಏನಾದರೂ ಹೇಳಿದನಾ??ಗೋಡೆಯಲ್ಲಿ ಚಿತ್ರವಾಗಿದ್ದ ಬೆತ್ತಲು ಬೆನ್ನಿನ ಹುಡುಗಿ ಕಿವಿಯಾನಿಸಿದಳು.
ರಾತ್ರಿ ಎಷ್ಟೋ ಹೊತ್ತು ಕಳೆದು ದಣಿವು ಮರೆಯಾದ ಸಮಯ. ಮಗುವಿನಂತೆ ತಬ್ಬಿ ಮಲಗಿದ್ದ ಅವಳ ಗಿಣಿ ಹಸಿರು ಬಣ್ಣದ ಚೂಡಿದಾರದ ಆ ನಾಜೂಕು ದುಪ್ಪಟ್ಟಾವನ್ನು ಬದಿಗೆ ಸರಿಸಿದ ಸತ್ಯದೇವನಿಗೆ ತನ್ನ ಬಲತೋಳಿನ ಮೇಲೆ ಹೂವಿನಂತೆ ಮಲಗಿರುವವಳ ನಿದ್ದೆ ಈ ಲೋಕದ್ದಲ್ಲ ಎನಿಸಿತು. ಅವಳ ಹಣೆಗೆ ಮೃದುವಾಗಿ ಮುತ್ತಿಟ್ಟು ನಾಳೆ ಇದೆಲ್ಲವನ್ನೂ ಹೇಳಬೇಕು ಚಂದ್ರಾಳಿಗೆ. ಅವಳ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂದುಕೊಳ್ಳುವಾಗಲೇ ಒತ್ತಿಕೊಂಡು ಬಂದಿತ್ತು ನಿದ್ದೆ. ಮಾರನೆಯ ಬೆಳಗು. ಅವನು ಮಲಗಿದಲ್ಲೇ ಕರಾಗ್ರೆ ವಸತೆ ಹೇಳಿ ಮುಕ್ಕೋಟಿ ದೇವರುಗಳಲ್ಲಿ ನಮ್ಮಿಬ್ಬರ ಹೊಸ ಬಂಧಕ್ಕಾಗಿ ಮನಸಲ್ಲೇ ಮುಡುಪಿಟ್ಟು 'ಚಂದ್ರಾ' ಎನ್ನುತ್ತಾ ಕಣ್ಣು ತೆರೆದ. ಮಗ್ಗುಲಿನಲ್ಲಿ ಅವಳ ಬಟ್ಟೆಗೆ ಹತ್ತಿದ್ದ ಬೆಟ್ಟದ ಮುಳ್ಳುಗಳ ಜೊತೆಗೆ ಪುಟ್ಟದೊಂದು ಚೀಟಿ ಇತ್ತು.