ಸಂಪಾದಕೀಯ: ಸೈನಿಕರಿಗೆ ಜಮೀನು ಮಂಜೂರಾತಿ ಸಮಸ್ಯೆ ಬಗೆಹರಿಸಲು ಸೂಕ್ತ ನಿರ್ಣಯ ಅಗತ್ಯ

789456
Published on

ಸೇವೆಯಲ್ಲಿರುವ ಮತ್ತು ನಿವೃತ್ತ ಸೈನಿಕರಿಗೆ ಅವರ ಸ್ವಂತ ತಾಲೂಕುಗಳಲ್ಲದೆ ಇತರೆಡೆಯೂ ಜಮೀನು ಮಂಜೂರಾತಿ ನೀಡುವುದನ್ನು ಪರಿಗಣಿಸುವ ಮೂಲಕ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರವು ನಿರ್ದೇಶನ ನೀಡಿರುವುದು ಸಮಂಜಸ ಕ್ರಮವಾಗಿದೆ. ರಾಜ್ಯದಲ್ಲಿ ಸೈನಿಕರಿಗೆ ಮಂಜೂರು ಮಾಡಲು ಸರ್ಕಾರಿ ಜಮೀನುಗಳ ಕೊರತೆಯ ಹಿನ್ನೆಲೆಯಲ್ಲಿ, ಇಂಥ ಅರ್ಜಿಗಳು ವಿಲೇವಾರಿಯಾಗದೆ ಕಡತಗಳು ಬೆಳೆಯುತ್ತಿರುವ ವಾಸ್ತವಾಂಶವನ್ನು ಪರಿಗಣಿಸಿ ಸರ್ಕಾರ ಈ ಆದೇಶ ನೀಡಿದೆ.

ಐದು ವರ್ಷಗಳಿಗೂ ಹೆಚ್ಚು ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ಸೈನಿಕರು ಮತ್ತು ಮಾಜಿ ಸೈನಿಕರು ತವರು ತಾಲೂಕುಗಳಲ್ಲಿ ರಾಜ್ಯ ಸರ್ಕಾರದಿಂದ ಜಮೀನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಅರ್ಜಿದಾರರು ಬೆಂಗಳೂರು ನಗರ ಜಿಲ್ಲೆಯವರಾಗಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಭಾಗದಲ್ಲಿ ಅವರಿಗೆ ಭೂಮಿ ನೀಡಲಾಗುತ್ತದೆ. ಆದರೆ, ಕರ್ನಾಟಕದಾದ್ಯಂತ ಸರ್ಕಾರಿ ಭೂಮಿ ಕೊರತೆಯ ಹಿನ್ನೆಲೆಯಲ್ಲಿ ಜಮೀನು ಕೋರಿ ಸಲ್ಲಿಸಿದ ಅರ್ಜಿಗಳ ಸಂಗ್ರಹವು ಹೆಚ್ಚಾಗುತ್ತಲೇ ಬಂದಿದೆ. ಭೂಮಿ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳ ತ್ವರಿತ ವಿಲೇವಾರಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾಜಿ ಸೈನಿಕರು ಇತ್ತೀಚೆಗೆ ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನಿಯಮಾವಳಿಯಲ್ಲಿ ಬದಲಾವಣೆ ಮಾಡಿದೆ. ಸೈನಿಕರ ಸ್ವಂತ ತಾಲೂಕುಗಳಲ್ಲಿ ಭೂಮಿ ಲಭ್ಯವಿಲ್ಲದಿದ್ದರೆ ಆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಲಭ್ಯವಿರುವ ಭೂಮಿಯನ್ನು ಮಂಜೂರು ಮಾಡುವ ಅವಕಾಶವನ್ನು ಈ ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ.

ಆದರೆ, ಎಲ್ಲೆಡೆ ಜಮೀನಿನ ಕೊರತೆ ಇರುವಾಗ ಸೈನಿಕರ ಸ್ವಂತ ತಾಲೂಕುಗಳಲ್ಲದೆ, ಸುತ್ತಮುತ್ತಲ ತಾಲೂಕುಗಳಲ್ಲಿ ಕೂಡ ಸರ್ಕಾರಿ ಜಮೀನು ಲಭಿಸುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಇದಕ್ಕೂ ರಾಜ್ಯ ಸರ್ಕಾರವು ಪರಿಹಾರವನ್ನು ಸೂಚಿಸಿ, ನಿಯಮಾವಳಿಯಲ್ಲಿ ಮತ್ತೊಂದು ಬದಲಾವಣೆ ಮಾಡಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಕೂಡ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಅದಕ್ಕೆ ಪರ್ಯಾಯವಾಗಿ ನಿವೇಶನವನ್ನು ಉಚಿತವಾಗಿ ನೀಡಬಹುದಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 2,400 ಚದರ ಅಡಿ ಅಳತೆಯ ಅಥವಾ ನಗರ ಪ್ರದೇಶದಲ್ಲಿ 1,200 ಅಳತೆಯ ನಿವೇಶನಗಳನ್ನು ಅರ್ಜಿದಾರರ ತವರು ತಾಲೂಕಿನಲ್ಲಿ ನೀಡಬಹುದಾಗಿದೆ. ಒಂದು ವೇಳೆ ಅರ್ಜಿದಾರರ ಸ್ವಂತ ತಾಲೂಕಿನಲ್ಲಿ ನಿವೇಶನಗಳು ಲಭ್ಯವಿಲ್ಲದಿದ್ದರೆ, ಆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ನಿವೇಶನ ಒದಗಿಸಬಹುದು ಎಂದು ಸುತ್ತೋಲೆಯಲ್ಲಿ ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕರು ನಿವೃತ್ತರಾದ ನಂತರ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟುವ ನಿಟ್ಟಿನಲ್ಲಿ ಉಚಿತವಾಗಿ ಸರ್ಕಾರದ ವತಿಯಿಂದ ಜಮೀನು ನೀಡಲಾಗುತ್ತದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ಪ್ರಕಾರ 10 ಎಕರೆವರೆಗೆ ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಅರ್ಜಿ ಸಲ್ಲಿಸಿ 15 ವರ್ಷಗಳಿಗೂ ಅಧಿಕ ಕಾಲ ಕಾದರೂ ಜಮೀನು ಲಭ್ಯವಾಗದಿರುವ ಪ್ರಕರಣ ಸಂಖ್ಯೆ ಸಾಕಷ್ಟಿಸಿದೆ. ಸರ್ಕಾರಿ ಭೂಮಿ ಕೊರತೆಯಿಂದ ಸೃಷ್ಟಿಯಾಗಿರುವ ಈ ಸಮಸ್ಯೆಗೆ ಸರ್ಕಾರ ಈಗ ಪರ್ಯಾಯ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ಸೂಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net