

ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ವ್ಯಾಪ್ತಿಗೆ ಒಳಪಟ್ಟರೂ ನಷ್ಟದ ಸುಳಿಗೆ ಸಿಲುಕಿರುವ ಪಟ್ಟಣ ಸಹಕಾರ ಬ್ಯಾಂಕ್ಗಳ ಕುರಿತು ‘ವಿಜಯವಾಣಿ’ ಮುಖಪುಟದಲ್ಲಿ ಬುಧವಾರ (ಮಾ.30) ಪ್ರಕಟವಾದ ವಿಶೇಷ ವರದಿ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ವರದಿ ಬಳಿಕ ಎಚ್ಚೆತ್ತುಗೊಂಡಿರುವ ಸಾವಿರಾರು ಗ್ರಾಹಕರು ಸಹಕಾರ ಬ್ಯಾಂಕ್ಗಳ ಬಗ್ಗೆ ವಿಚಾರಣೆ ನಡೆಸುವ ಜತೆಗೆ ಅವರು ಇಟ್ಟಿರುವ ಲಕ್ಷಾಂತರ ರೂ. ಠೇವಣಿ ವಾಪಸ್ ಪಡೆಯುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ವಿಜಯವಾಣಿಗೆ ಸಾವಿರಾರು ಕರೆಗಳು ಬಂದಿವೆ. ಕರೆ ಮಾಡಿರುವ ಕೆಲ ಗ್ರಾಹಕರು ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಠೇವಣಿ ಇಟ್ಟಿರುವ ಬ್ಯಾಂಕಿನ ಆರ್ಥಿಕ ಸ್ಥಿತಿಗತಿ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ. ಕೆಲವರು ಬ್ಯಾಂಕಿಗೆ ತೆರಳಿ ಠೇವಣಿ ಇಟ್ಟಿರುವ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ.
ಭ್ರಷ್ಟಾಚಾರ, ಅಧಿಕಾರದ ಲಾಲಾಸೆ, ಸ್ವಜನಪಕ್ಷಪಾತ, ಖಾತೆದಾರರ ಹಣ ದುರ್ಬಳಕೆ, ಅಧಿಕ ಬಡ್ಡಿ ಆಸೆಗೆ ಬೇರೆ ಕಡೆ ಠೇವಣಿ ಇಡುವುದು, ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ಸಾಲ ನೀಡುವುದು, ನಕಲಿ ದಾಖಲೆ ಪಡೆದು ಸಾಲ ಕೊಡುವುದು, ಆಸ್ತಿ ಮೌಲ್ಯಕ್ಕಿಂತ ಹೆಚ್ಚು ಸಾಲ ಒದಗಿಸುವುದು, ಕಪ್ಪು ಹಣವನ್ನು ಬಿಳಿಯಾಗಿಸುವುದು, ಚುನಾವಣೆಗೆ ಹಣ ಬಳಸಿಕೊಳ್ಳುತ್ತಿರುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣ ಹೂಡಿಕೆಯಾಗುತ್ತಿರುವುದು ಸೇರಿ ವಿವಿಧ ಬಗೆಯ ಅಕ್ರಮಗಳ ಸರಮಾಲೆಗಳೇ ನಡೆಯುತ್ತಿವೆ. ಸಹಕಾರ ಬ್ಯಾಂಕ್ಗಳೂ ಇದಕ್ಕೆ ಹೊರತಾಗಿಲ್ಲ. ಆರ್ಬಿಐ ವ್ಯಾಪ್ತಿಗೆ ಒಳಪಟ್ಟರೂ ಒಂದಿಲ್ಲೊಂದು ಲೋಪದೋಷಗಳಿಂದ ಈ ಬ್ಯಾಂಕ್ಗಳು ವರ್ಷದಿಂದ ವರ್ಷಕ್ಕೆ ನಷ್ಟದ ಹಾದಿಯತ್ತ ಸಾಗುತ್ತಿವೆ. ನಿಶ್ಚಿತ ಠೇವಣಿ ಇಡಿಸಿಕೊಂಡಿರುವ ಸಹಕಾರ ಬ್ಯಾಂಕ್ಗಳು ಹಾಗೂ ಸೊಸೈಟಿಗಳ ಪೈಕಿ ಕೆಲವು ವರ್ಷದಿಂದ ವರ್ಷಕ್ಕೆ ನಷ್ಟದತ್ತ ಸಾಗಿವೆ. ಅಲ್ಲದೆ, ಸಾವಿರಾರು ಸೊಸೈಟಿಗಳು ದಿವಾಳಿಗೊಂಡಿವೆ. ಇದರಿಂದಾಗಿ ತಾವು ಇಟ್ಟಿರುವ ಠೇವಣಿ ಹಣ ಬಗ್ಗೆ ಗ್ರಾಹಕರಿಗೆ ಆತಂಕ ಶುರುವಾಗಿದೆ.