

ನಮ್ಮ ಸಂವಿಧಾನ ರಚನಾಕಾರರು ಸ್ವಾಭಿಮಾನಿ, ಸಮೃದ್ಧ ರಾಷ್ಟ್ರದ ಕನಸು ಕಂಡರು. ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ನಾವು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬುದನ್ನು ಗಣರಾಜ್ಯ ದಿನದ ಈ ಸಂದರ್ಭದಲ್ಲಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆಯಿಡಬೇಕಿದೆ.
ಭಾರತದ ಸಂವಿಧಾನ ದಿನಾಚರಣೆಗೆ ಸಂಬಂಧಪಟ್ಟಂತೆ ಕಳೆದ ವರ್ಷ ರಾಜ್ಯ ವಿಧಾನಮಂಡಲದಲ್ಲಿ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ವಿಧಾನಸಭೆಯಲ್ಲಿ ಸಂವಿಧಾನದ ಬಗ್ಗೆ ವಿಶೇಷ ಚರ್ಚೆ ನಡೆಸುವುದಕ್ಕೆ ಅವಕಾಶ ಸೃಷ್ಟಿಸಿದ್ದರು. ಆಗ ಸಂವಿಧಾನದ ಆಶಯಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಸಾಕಾರಗೊಂಡಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಅವಕಾಶ ನನಗೆ ಲಭಿಸಿತ್ತು. ಶಾಸನಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಗಣರಾಜ್ಯೋತ್ಸವದ ಹೊಸ್ತಿಲಲ್ಲಿ ಅಕ್ಷರರೂಪ ಕೊಡುವುದಕ್ಕೆ ನಾನಿಲ್ಲಿ ಪ್ರಯತ್ನಿಸುತ್ತಿದ್ದೇನಷ್ಟೆ.
ಸಂವಿಧಾನವೇ ಧರ್ಮಗ್ರಂಥ: ನನ್ನ ಪ್ರಕಾರ ಸಂವಿಧಾನವೆಂದರೆ ಈ ದೇಶದ ಧರ್ಮಗ್ರಂಥ. ಅದು ನಿರ್ದಿಷ್ಟ ಧಾರ್ವಿುಕ ಸ್ವರೂಪಕ್ಕೆ ಸೀಮಿತವಾಗಿಲ್ಲವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಯಾವುದು ಮಾನ್ಯ, ಯಾವುದು ಅಮಾನ್ಯ ಎಂಬೆಲ್ಲದರ ಕುರಿತಾದ ಮಾರ್ಗದರ್ಶಿ ಸೂತ್ರ. ಈ ರೀತಿಯ ಧಾರ್ವಿುಕ ಸಂವಿಧಾನಗಳು ಭಾರತದಲ್ಲಿ ಪುರಾತನ ಕಾಲದಿಂದಲೂ ಇದ್ದವು. ಜನರ ಬದುಕನ್ನು ನಿರ್ಧರಿಸುವ ಹಾಗೂ ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಕಟ್ಟಿಕೊಡುವ ಪ್ರಯತ್ನಗಳು ಅಲ್ಲಿದ್ದವು. ನಾರದ ಸ್ಮೃತಿ, ಪರಾಶರ ಸ್ಮೃತಿ, ಅದೇ ರೀತಿ ಈ ದೇಶದಲ್ಲಿ ಬಹುಚರ್ಚೆ ಹಾಗೂ ವಿಮರ್ಶೆಗೆ ಒಳಗಾದ ಮನುಸ್ಮೃತಿಗಳು ಆಯಾ ಕಾಲಘಟ್ಟಕ್ಕೆ ಸಂಬಂಧಪಟ್ಟ ಲಿಖಿತ ಸಂವಿಧಾನವೇ ಆಗಿದ್ದವು. ಇಂಥ ಧರ್ಮಗ್ರಂಥಗಳಿಗೆ ಬದಲಾವಣೆ ಬೇಕು ಎಂದೆನಿಸಿದಾಗ ಬುದ್ಧ, ಬಸವ, ಅಂಬೇಡ್ಕರ್ ಅವರಂಥ ಮಹಾಪುರುಷರು ಬಂದು ಸೂಕ್ತ ಬದಲಾವಣೆ ಹಾಗೂ ಹೊಸ ತತ್ತ್ವಗಳನ್ನು ದೇಶಕ್ಕೆ ಕೊಟ್ಟರು. ಬಸವಾದಿ ಶಿವಶರಣರ ಅನುಭವಮಂಟಪದಿಂದ ಸೃಷ್ಟಿಯಾದ ಸಂವಿಧಾನವೇ ವಚನಗಳು.
ಮೊಗಲ್ ಹಾಗೂ ಬ್ರಿಟಿಷರ ಪರಕೀಯ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ದೇಶದ ಮೇಲೆ ಅನೇಕ ಸಂಗತಿಗಳು ಹೇರಲ್ಪಟ್ಟವು. ಬ್ರಿಟಿಷ್ ಆಡಳಿತದ ನಂತರ ಅಂಬೇಡ್ಕರ್ ತತ್ತ್ವದ ಸಂವಿಧಾನ ಅಸ್ತಿತ್ವಕ್ಕೆ ಬಂತು. ಅಂಬೇಡ್ಕರ್ ನೇತೃತ್ವದಲ್ಲಿ ನಮ್ಮ ಸಂವಿಧಾನ ರಚನಾಕಾರರು ಸ್ವಾಭಿಮಾನಿ, ಸಮೃದ್ಧ ರಾಷ್ಟ್ರದ ಕನಸು ಕಂಡರು. ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆದು ಆ ಬಳಿಕವೇ ಒಪ್ಪಿಕೊಳ್ಳಲಾಯಿತು. ನಮ್ಮ ಸಂವಿಧಾನದ ಆಶಯ ಎಷ್ಟೊಂದು ಶ್ರೀಮಂತ ಹಾಗೂ ಜನಪರ ಎಂಬುದಕ್ಕೆ ಅದರ ಪೂರ್ವಪೀಠಿಕೆಯೇ ಸಾಕ್ಷಿ. 1950 ಜನವರಿ 26ರಂದು ನಾವೆಲ್ಲರೂ ಸೇರಿ ಸಂವಿಧಾನವನ್ನು ಒಪ್ಪಿಕೊಂಡ ದಿನದಿಂದ ಅದರ ಆಶಯಗಳನ್ನು ಯಾವ ರೀತಿ ಈಡೇರಿಸಬೇಕೆಂಬುದನ್ನು ಈ ಪೂರ್ವಪೀಠಿಕೆಯಲ್ಲೇ ಅಡಕಗೊಳಿಸಲಾಗಿದೆ. ಆದರೆ ಅನುಷ್ಠಾನದಲ್ಲಿ ನಾವು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ?
ಸೇನೆ ಮುಂದು: ನಾವೆಲ್ಲರೂ ತಿಳಿದಿರುವಂತೆ, ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಸಂವಿಧಾನದ ಮೂರು ಆಧಾರ ಸ್ತಂಭಗಳು. ಈ ದೊಡ್ಡ ಕಂಬಗಳಿಗೆ ಆಧಾರವಾಗಿ ಅನೇಕ ಸಣ್ಣ ಸಣ್ಣ ಶಾಖೆಗಳಿವೆ. ಸಿಎಜಿ, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು, ಸೇನೆ, ಚುನಾವಣಾ ಆಯೋಗ, ಇನ್ನಿತರ ಸ್ವಾಯತ್ತ ಸಂಸ್ಥೆಗಳು ಈ ಪಟ್ಟಿಯಲ್ಲಿ ಬರುತ್ತವೆ. ನನ್ನ ಅಭಿಪ್ರಾಯದ ಪ್ರಕಾರ, ನಿಯೋಜಿತವಾದ ಕಾರ್ಯವನ್ನು ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಅನುಷ್ಠಾನಗೊಳಿಸಿರುವುದರಲ್ಲಿ ಭಾರತೀಯ ಸೇನೆ ಎಲ್ಲರಿಗಿಂತ ಮುಂದಿದೆ. ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವ ಜತೆಗೆ ಆಗಾಗ ನಡೆದ ಆಂತರಿಕ ದಂಗೆಗಳನ್ನೂ ಮೆಟ್ಟಿ ನಿಂತು ಶೇಕಡ 99 ರಷ್ಟು ಕರ್ತವ್ಯಪ್ರಜ್ಞೆ ಮೆರೆದಿದೆ. ಅದೇ ರೀತಿ ಅನೇಕ ಲೋಪಗಳ ಮಧ್ಯೆಯೂ ಪಾರ್ಲಿಮೆಂಟ್ನಿಂದ ಪಂಚಾಯಿತಿವರೆಗಿನ ಚುನಾವಣೆಗಳನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಚುನಾವಣಾ ಆಯೋಗವೂ ಸೈ ಎನಿಸಿಕೊಂಡಿದೆ. ಭ್ರಷ್ಟಾಚಾರ, ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದ್ದರೂ ಇಂದು ನಾವು, ನೀವೆಲ್ಲ ನೆಮ್ಮದಿಯಿಂದ ನಿದ್ದೆಮಾಡುತ್ತೇವೆ, ಜನಸಾಮಾನ್ಯರು ಆತ್ಮರಕ್ಷಣೆಗೆ ಪಿಸ್ತೂಲ್ ಕಿಸೆಯಲ್ಲಿಟ್ಟುಕೊಳ್ಳದೇ ಓಡಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಪೊಲೀಸ್ ಇಲಾಖೆ ಶೇಕಡ 60ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವುದೇ ಕಾರಣ. ಸಂವಿಧಾನದ ಉಪ ಅಂಗಗಳ ಕಾರ್ಯವೈಖರಿಯನ್ನು ನಿಕಷಕ್ಕೆ ಒಡ್ಡುವ ನಾವು ಪ್ರಧಾನ ಸ್ತಂಭಗಳ ಬಗ್ಗೆಯೂ ವಿವೇಚಿಸಬೇಕಲ್ಲವೇ? ಆ ದಿಶೆಯಲ್ಲಿ ಮುಂದುವರಿದರೆ ನಮಗೆ ವಿಷಾದಗಳೇ ಎದುರಾಗುತ್ತವೆ.
ಕಾರ್ಯಾಂಗದ ವೈಫಲ್ಯ: ಸಂವಿಧಾನದ ಪ್ರಕಾರ, ಜನಹಿತಕ್ಕೆ ಬೇಕಾದ ಶಾಸನ ರೂಪಿಸುವುದು ಹಾಗೂ ಅದರ ಮೇಲ್ವಿಚಾರಣೆ ನಡೆಸುವುದು ಶಾಸಕಾಂಗದ ಕರ್ತವ್ಯ. ಆದರೆ ಕಳೆದ ಕೆಲ ದಶಕಗಳಿಂದ ಶಾಸಕಾಂಗದ ಸದಸ್ಯರು ಕಾರ್ಯಾಂಗದ ಕೆಲಸ ಮಾಡುವ ಸ್ಥಿತಿ ನಿರ್ವಣವಾಗಿದೆ. ರಸ್ತೆರಿಪೇರಿ, ಚರಂಡಿ ನಿರ್ವಣದಿಂದ ಹಿಡಿದು ಪ್ರತಿಯೊಂದಕ್ಕೂ ಜನರೀಗ ಶಾಸಕರತ್ತ ನೋಡುವಂತಾಗಿದೆ. ನಾಲೆ ಒಡೆದಾಗ ಪರಿಶೀಲನೆ ನಡೆಸುವುದಕ್ಕೂ ಶಾಸಕ ಬೇಕು, ಶಾಸನ ರಚನೆಗೂ ಆತನೇ ಬೇಕು. ಕಾರ್ಯಾಂಗ ನಿರ್ವಹಿಸಬೇಕಿದ್ದ ಈ ಜವಾಬ್ದಾರಿಗಳು ಶಾಸಕಾಂಗದತ್ತ ತಳ್ಳಲ್ಪಟ್ಟಿದೆ. ಹೀಗಾಗಿ ಕಾರ್ಯಾಂಗ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ವಿಮಶಿಸುವುದಕ್ಕೆ ಇದು ಸಕಾಲ.
ವಿಳಂಬ ನ್ಯಾಯದಾನ: ಇನ್ನು ನ್ಯಾಯಾಂಗದತ್ತ ಹೊರಳೋಣ. ಕಾರ್ಯಾಂಗ, ಶಾಸಕಾಂಗದಿಂದ ಆದ ಲೋಪಗಳಿಗೆ ಪರಿಹಾರ ಪಡೆಯುವುದಕ್ಕಾಗಿಯೇ ಸಂವಿಧಾನ ರಚನಾಕಾರರು ನ್ಯಾಯಾಂಗವನ್ನು ಸೃಷ್ಟಿಸಿದರು. ಸಾಮಾನ್ಯ ಜನರು ತಮ್ಮ ರಕ್ಷಣೆಗಾಗಿ ನ್ಯಾಯಾಂಗದತ್ತ ಲಕ್ಷ್ಯ ಹರಿಸಬೇಕೆಂಬುದು ಇದರ ಉದ್ದೇಶವಾಗಿತ್ತು. ಆದರೆ ದೇಶದಲ್ಲಿ ಆ ರೀತಿ ನಡೆಯುತ್ತಿದೆಯೇ? 20 ವರ್ಷ ಕಳೆದರೂ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಜನ ಅತ್ತ ಸುಳಿಯುವುದಕ್ಕೆ ಅಂಜುವಂತಾಗಿದೆ. ದೇಶದ ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸುವ ವಿಚಾರವಾಗಿರಲಿ, ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿರಲಿ ಜನ ನಿರೀಕ್ಷೆ ಮಾಡಿದಷ್ಟು ವೇಗದಲ್ಲಿ ನ್ಯಾಯದಾನವಾಗಿಲ್ಲ. ಇಬ್ಬರ ನಡುವೆ ಜಗಳವಾದಾಗ ‘ನೀನು ಬೇಕಾದರೆ ಕೋರ್ಟಿಗೆ ಹೋಗು’ ಎಂದು ಸವಾಲು ಹಾಕುವ ಸ್ಥಿತಿ ನಿರ್ವಣವಾಗುವುದಕ್ಕೆ ನ್ಯಾಯದಾನ ವಿಳಂಬವೇ ಕಾರಣ. ಹತ್ತಾರು ದಿನದಲ್ಲಿ ಇತ್ಯರ್ಥವಾಗಬೇಕಾದ ವಿಚಾರಗಳಿಗೆ ಹತ್ತಾರು ವರ್ಷಗಳೇ ಹಿಡಿದರೆ ಜನ ಆ ವ್ಯವಸ್ಥೆಯಲ್ಲಿ ನಂಬಿಕೆ ಇಡಲು ಸಾಧ್ಯವೇ? ಹೀಗಾಗಿ ಕಾರ್ಯಾಂಗ, ಶಾಸಕಾಂಗದ ರೀತಿ ನ್ಯಾಯಾಂಗದ ವೈಫಲ್ಯದ ಬಗ್ಗೆ ಚರ್ಚೆ ನಡೆಸುವುದಕ್ಕೂ ಇದು ಸಕಾಲವಾಗಿದ್ದು, ಅದು ನಮ್ಮ ಸಂಸತ್ತು ಹಾಗೂ ಶಾಸನಸಭೆಯಿಂದಲೇ ಆರಂಭವಾಗಬೇಕು.
ನಮ್ಮ ದೇಶದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಖರ್ಚುವೆಚ್ಚಗಳನ್ನು ಸರ್ಕಾರವೇ ನಿರ್ವಹಿಸುತ್ತದೆ. ಆದರೆ ಶಾಸಕಾಂಗದ ವಿಚಾರದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಅನ್ವಯವಾಗುತ್ತಿಲ್ಲ. ಹೀಗಾಗಿ ಶಾಸಕಾಂಗದ ವೇತನ, ಭತ್ಯೆ, ಚುನಾವಣಾ ಖರ್ಚುವೆಚ್ಚ ನಿರ್ಧರಿಸುವುದಕ್ಕೆ ಪೂರ್ಣಪ್ರಮಾಣದ ಆಯೋಗ ರಚನೆ ಮಾಡುವುದು ಅನಿವಾರ್ಯವಾಗಿದೆ. ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಬೇಕೆಂಬ ಜನಸಾಮಾನ್ಯರ ಆಶಯ ಇದರಿಂದ ಈಡೇರುವುದಕ್ಕೆ ಸಾಧ್ಯ. ಚುನಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ ಎಂದಾದರೆ ಆ ಚುನಾವಣಾ ವ್ಯವಸ್ಥೆಯನ್ನೇ ಮೊದಲು ಸುಧಾರಿಸಬೇಕಾಗುತ್ತದೆ. ಗುತ್ತಿಗೆ, ಮದ್ಯ, ರಿಯಲ್ ಎಸ್ಟೇಟ್ ಲಾಬಿದಾರರ ಬದಲಾಗಿ ಕರದಾತರೇ ತಮ್ಮ ತೆರಿಗೆಯ ಒಂದು ಭಾಗವನ್ನು ತಮ್ಮಿಷ್ಟದ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗೆ ಫಂಡಿಂಗ್ ಮಾಡುವ ವ್ಯವಸ್ಥೆ ಸೃಷ್ಟಿಯಾದಾಗ ಜನಪ್ರತಿನಿಧಿಗಳು ಯಾರ ಹಂಗಿನಲ್ಲೂ ಬೀಳುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಸಂವಿಧಾನದ ತಿದ್ದುಪಡಿಯೇ ಆಗಬೇಕಾದ ಅನಿವಾರ್ಯತೆ ಇದೆ.
ಏಕರೂಪ ನಾಗರಿಕ ಸಂಹಿತೆ: ಇದೆಲ್ಲದರ ಜತೆಗೆ ಇಂದಿಗೂ ಮರೀಚಿಕೆಯಾಗೇ ಉಳಿದ ಸಂವಿಧಾನದ ಆಶಯ ‘ಏಕರೂಪ ನಾಗರಿಕ ಸಂಹಿತೆ’. ಭಾರತದ ಪ್ರಜೆಗಳಾದ ನಾವೆಲ್ಲರೂ ಒಂದು. ನಮಗೆಲ್ಲರಿಗೂ ಸಮಾನ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಜತೆಗೆ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧಾರ್ವಿುಕ ಆಚರಣೆಗಳಲ್ಲಿ ಸಮಾನ ಅವಕಾಶ ಇರಬೇಕೆಂದು ಸಂವಿಧಾನದ ಪೂರ್ವಪೀಠಿಕೆಯಲ್ಲೇ ಹೇಳಲಾಗಿದೆ. ಆದರೆ ವಾಸ್ತವ ಬೇರೆಯದೇ ಇದೆ. ಹೀಗಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಈಗಲಾದರೂ ಪ್ರಯತ್ನ ಆರಂಭವಾಗಲಿ ಎಂಬುದು 72ನೇ ಗಣರಾಜ್ಯೋತ್ಸವದ ಪ್ರಧಾನ ಆಶಯವಾಗಲಿ.
(ಲೇಖಕರು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು)