ಅಂತರಂಗ: ಯೇಸುಕ್ರಿಸ್ತನ ಪುನರಾಗಮನ

Untitled-1
Published on

ಯೇಸುಕ್ರಿಸ್ತ ಮಾನವಕುಲದ ರಕ್ಷಣಾಕಾರ್ಯಕ್ಕಾಗಿ ಮೊದಲ ಬಾರಿಗೆ ನರಮಾನವನಾಗಿ ಬಡವರಲ್ಲಿ ಬಡವನಂತೆ ಈ ಭೂಲೋಕಕ್ಕೆ ಆಗಮಿಸಿದ್ದ. ಆದರೆ ಆತ ತಾನು ಮತ್ತೆ ಒಬ್ಬ ಚಕ್ರವರ್ತಿಯಂತೆ ರಾಜವೈಭವದೊಂದಿಗೆ ಈ ಲೋಕಕ್ಕೆ ಪುನರಾಗಮಿಸಿ ದುಷ್ಟರಿಗೂ, ಶಿಷ್ಟರಿಗೂ ಅವರವರ ಕರ್ಮಗಳ ಅನುಸಾರ ನ್ಯಾಯತೀರ್ಪ ದಯಪಾಲಿಸುವನೆಂದು ಜಗತ್ತಿನ ಕ್ರೈಸ್ತರೆಲ್ಲರೂ ದೃಢವಾಗಿ ನಂಬಿರುತ್ತಾರೆ. ಅವರ ಈ ನಂಬಿಕೆಗೆ ಪೂರಕವಾಗಿಯೊ ಎಂಬಂತೆ, ಯೇಸು ತನ್ನ ಕಾಲಾವಧಿಯಲ್ಲಿಯೇ ಕೆಳಕಂಡಂತೆ ಭವಿಷ್ಯ ನುಡಿದಿದ್ದ:

‘ಆ ದಿನಗಳಲ್ಲಿ ಈ ಸಂಕಷ್ಟಗಳು ಮುಗಿದ ಬಳಿಕ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನವಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು; ಗ್ರಹ ಶಕ್ತಿಗಳು ಕಂಪಿಸುವುವು. ಆಗ ನರಪುತ್ರನು ಮಹಾಶಕ್ತಿ

ಯಿಂದಲೂ ಮಹಿಮೆಯಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಆತನು ದೇವದೂತರನ್ನು ಜಗತ್ತಿನ ನಾಲ್ಕು ದಕ್ಕುಗಳಿಗೂ ಕಳುಹಿಸಿ, ತಾನು ಆರಿಸಿಕೊಂಡವರನ್ನು ವಿಶ್ವದ ಅಷ್ಟದಿಕ್ಕುಗಳಿಂದಲೂ ಒಟ್ಟುಗೂಡಿಸುವನು.’

‘ಅಂಜೂರದ ಮರದಿಂದ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ನರಪುತ್ರ ಸಮೀಪಿಸಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ. ಇವೆಲ್ಲವೂ ಸಂಭವಿಸುವುದಕ್ಕೆ ಮುಂಚೆ ಈ ಪೀಳಿಗೆ ಗತಿಸಿಹೋಗದೆಂದು ಒತ್ತಿಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುವುವು. ಆದರೆ, ನನ್ನ ಮಾತುಗಳು ಶಾಶ್ವತವಾಗಿ ಉಳಿಯುವುವು.’

‘ಆ ದಿನವಾಗಲಿ, ಆ ಗಳಿಗೆಯಾಗಲಿ, ಯಾವಾಗ ಬರುವುದೆಂದು ಪಿತನ ಹೊರತು ಮತ್ತಾರೂ ಅರಿಯರು. ಸ್ವರ್ಗದಲ್ಲಿರುವ ದೂತರೇ ಆಗಲಿ, ಪುತ್ರನೇ ಆಗಲಿ ಅರಿಯರು. ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ. ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘‘ನೀನು ಎಚ್ಚರವಾಗಿರಬೇಕು’’ ಎಂದು ಅಪ್ಪಣೆ ಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ. ಯಜಮಾನನು ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿ ಕೂಗುವಾಗಲೋ ಬೆಳಕು ಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು. ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು! ನಿಮಗೆ ಹೇಳುವುದನ್ನೇ ಸರ್ವರಿಗೂ ಹೇಳುತ್ತೇನೆ; ಎಚ್ಚರಿಕೆಯಿಂದಿರಿ’ ಎಂದಿದ್ದಾರೆ.

ಮೇಲಿನ ಆತನ ನುಡಿಗಳ ಆಧಾರದ ಮೇಲೆ ಜಗತ್ತಿನ ಒಂದು ಪಂಥದ ಕ್ರೈಸ್ತರು ಯೇಸುಕ್ರಿಸ್ತ ಈಗಾಗಲೇ ಜಗತ್ತಿಗೆ ಎರಡನೆಯ ಬಾರಿ ಆಗಮಿಸಿದ್ದು, ಯಾವುದೇ ಘಳಿಗೆಯಲ್ಲಿ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳಲಿರುವನೆಂದು ಪ್ರಚಾರ ಕೈಗೊಂಡಿದ್ದಾರೆ.

ನಾಳಿನ ಅಂತರಂಗದಲ್ಲಿ: ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ, ಅಧ್ಯಾತ್ಮ ವಿದ್ಯಾಶ್ರಮ, ಆದಿಶಕ್ತಿ ನಗರ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net