ಬಡತನದಲ್ಲಿ ಅರಳಿದ ಪ್ರತಿಭೆ: ವಿಜಯಪುರ ವಿದ್ಯಾರ್ಥಿ ರಾಹುಲ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​ ​

PU Student Rahul
Published on

ವಿಜಯಪುರ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಬಡತನದಲ್ಲಿ ಅರಳಿದ ಪ್ರತಿಭೆಯೊಂದು ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಕಲಾ ವಿಭಾಗದಲ್ಲಿ 592 ಅಂಕ ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ರಾಹುಲ್ ರಾಠೋಡ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ರಾಠೋಡ್​ ಅವರ ತಂದೆ-ತಾಯಿ ಮಹಾರಾಷ್ಟ್ರಕ್ಕೆ ಗುಳೆಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ತಂದೆ-ತಾಯಿ ತಗಡಿನ ಶೆಡ್​ನಲ್ಲಿ ವಾಸವಿದ್ದು, ಮಗನ ಸಾಧನೆಗೆ ಹರ್ಷಗೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಕೂಲಿ ಕೆಲಸಕ್ಕೆಂದು ರಾಠೋಡ್​ ಅವರ ತಂದೆ ಮೋತಿಲಾಲ್ ಹಾಗೂ ತಾಯಿ ಸವಿತಾ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದಾರೆ. ಮೋತಿಲಾಲ್​​ಗೆ ಮೂವರು ಮಕ್ಕಳು. ಅದರಲ್ಲಿ ಓರ್ವ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಬಡತನ ಹಿನ್ನೆಲೆಯಲ್ಲಿ ಜೀವನಕ್ಕಾಗಿ ಮೋತಿಲಾಲ್ ಕುಟುಂಬ ಮಹಾರಾಷ್ಟ್ರಕ್ಕೆ ಗುಳೆಹೋಗಿದೆ.

ರಾಹುಲ್ ರಾಠೋಡ್ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿ. ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿರುವ ಎಸ್.ಕೆ ಪಿಯು ಕಾಲೇಜಿಲ್ಲಿ ಪಿಯುಸಿ ಅಧ್ಯಯನ ಮಾಡಿದ್ದಾರೆ. ಹಾಸ್ಟೆಲ್​ನಲ್ಲಿದ್ದುಕೊಂಡೆ ಉತ್ತಮ ಸಾಧನೆ ಮಾಡಿರುವ ರಾಠೋಡ್​, ತನ್ನ ಈ ಸಾಧನೆಗೆ ತಂದೆ ತಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ಉಪನ್ಯಾಸಕಿ ಬಸಮ್ಮ ಪ್ರೇರಣೆ ಎಂದಿದ್ದಾರೆ.

ಕಲಾವಿಭಾಗದ ಶಿಕ್ಷಣ ವಿಷಯದಲ್ಲಿ ಪಿಯುಸಿ ಕಲಿತಿರುವ ರಾಠೋಡ್​, ಮುಂದೆ ಕಲಾ ವಿಭಾಗದಲ್ಲಿ ಬಿಎ ಮಾಡಿ ಎಲ್ಎಲ್​​​ಬಿ ಕಲಿಯುವ ಆಸೆ ಹೊಂದಿದ್ದಾರೆ. ರಾಠೋಡ್​ ಅವರ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net