

ಹೊಳೆಹೊನ್ನೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಗಣವೇಷಧಾರಿಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಭಾನುವಾರ ವಿಜಯದಶಮಿ ಪಥಸಂಚಲನ ನಡೆಸಿದರು. ಈ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪಟ್ಟಣವನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು.
ಹೊಳೆಹೊನ್ನೂರಿನ ಭಗೀರಥ ವೃತ್ತ, ನೃಪತುಂಗ ವೃತ್ತ ಹಾಗೂ ಪೇಟೆ ಬೀದಿಗಳು ಕೇಸರಿಮಯವಾಗಿದ್ದವು. ರಾಷ್ಟ್ರೋತ್ಥಾನ ಶಾಲೆಯಿಂದ ಆರಂಭವಾದ ಪಥಸಂಚಲನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅಂಬೇಡ್ಕರ್ ನಗರ, ಕುಂಬಾರ ಬೀದಿ, ಕೊಟ್ಟಣಿಗರ ಬೀದಿ, ಉಪ್ಪಾರಬೀದಿ, ಭಗೀರಥ ವೃತ್ತ, ಬ್ರಾಹ್ಮಣರ ಬೀದಿ, ಮಹಾತ್ಮ ಗಾಂಧಿ ವೃತ್ತ, ಪೇಟೆಬೀದಿ ಮೂಲಕ ಸಂಚರಿಸಿ ರಾಷ್ಟ್ರೋತ್ಥಾನ ವಿದ್ಯಾಲಯದ ಆವರಣದಲ್ಲಿ ಸಮಾವೇಶಗೊಂಡಿತು.
1000ಕ್ಕೂ ಹೆಚ್ಚು ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ತಾಯಂದಿರು ಪುಟಾಣಿ ಮಕ್ಕಳಿಗೆ ಗಣವೇಷಧಾರಿಗಳ ಪೋಷಾಕು ಹಾಕಿಸಿ ಶಾಲೆ ಆವರಣಕ್ಕೆ ಕರೆತಂದರು. ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಲಾಗಿತ್ತು. ಮಹಿಳೆಯರು, ಮಕ್ಕಳು ಪಥಸಂಚಲನದ ಮೇಲೆ ಪುಷ್ಪಗಳನ್ನು ಎರಚಿ ಸಂಭ್ರಮಿಸಿದರು.
ಪಥ ಸಂಚಲನ ವೇಳೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು, ಗಣವೇಷಧಾರಿಗಳು ಭಗವಾಧ್ವಜ, ಭಾರತ ಮಾತೆ, ಡಾ. ಗುರೂಜೀ, ಡಾ. ಹೆಡ್ಗೆವಾರ್ ಅವರ ಭಾವಚಿತ್ರಗಳ ಮೇಲೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ರಸ್ತೆ ಬದಿ ಅಲ್ಲಲ್ಲಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾಪುರುಷರ ಪೋಷಾಕು ಧರಿಸಿ ಗಮನಸೆಳೆದರು.
ಆರ್‌ಎಸ್‌ಎಸ್ ಶಿವಮೊಗ್ಗ ನಗರ ವಾಹಕ್ ಚೇತನ್, ರಾಷ್ಟ್ರೋತ್ಥಾನ ವಿದ್ಯಾಲಯದ ಕಾರ್ಯದರ್ಶಿ ರಾಜಾರಾಮ್, ಮುಖಂಡರಾದ ಗಿರೀಶ್ ಪಟೇಲ್, ಎಂ.ಮಲ್ಲೇಶಪ್ಪ, ಎಸ್.ಬಿ.ಸಿದ್ದಪ್ಪ, ಎಚ್.ಜಿ.ಲೋಕೇಶ್, ಮೋಹನ್‌ಕುಮಾರ್, ಮಂಜುನಾಥ, ಯು.ಕೆ.ರಮೇಶ್, ಜಗದೀಶ್ ಪಾಟೀಲ್, ಎಸ್.ಸಿದ್ದಲಿಂಗಪ್ಪ, ಚಂದ್ರಶೇಖರ್ ಮತ್ತಿತರರಿದ್ದರು.