ಭಾಷಣ ಮಾಡುತ್ತಲೇ ಕುಸಿದು ಬಿದ್ದ ಗುಜರಾತ್​ ಸಿಎಂ! ಆರೋಗ್ಯ ಸ್ಥಿರವಾಗಿದೆ ಎಂದ ವೈದ್ಯರು

ಚಮ
Published on

ಅಹಮದಾಬಾದ್​: ಗುಜರಾತ್​ನ ಮುಖ್ಯಮಂತ್ರಿ ವಿಜಯ ರೂಪಾಣಿಯವರು ಭಾನುವಾರದಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಹೆಲಿಕಾಫ್ಟರ್​ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇದೀಗ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಜಯ ರೂಪಾಣಿ ಅವರು ಅಹಮದಾಬಾದ್​ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಸರ್ಕಾರದ ಯೋಜನೆಗಳ ಕುರಿತಾಗಿ ಭಾಷಣ ಮಾಡುತ್ತಿದ್ದರು. ನಮ್ಮ ಸರ್ಕಾರವು ಲವ್​ ಜಿಹಾದ್​ ವಿರುದ್ಧ ಕಾನೂನು ತರಲು ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ಹೇಳುತ್ತಿದ್ದರು. ಹಾಗೆ ಹೇಳುತ್ತಲೇ ಮಾತು ನಿಲ್ಲಿಸಿ ಅವರು ಅಲ್ಲಿಯೇ ಕುಸಿಯಲಾರಂಭಿಸಿದ್ದಾರೆ. ಅವರ ಅಕ್ಕ ಪಕ್ಕದಲ್ಲಿದ್ದವರು ತಕ್ಷಣ ಅವರನ್ನು ಹಿಡಿದುಕೊಂಡಿದ್ದಾರೆ. ಅವರಿಗೆ ಬಿಪಿ ಮತ್ತು ಶುಗರ್​ ಲೆವೆಲ್​ ಕಡಿಮೆಯಾಗಿದ್ದರಿಂದಾಗಿ ಈ ರೀತಿ ಆಗಿರುವುದಾಗಿ ತಿಳಿಸಲಾಗಿದೆ.

ರೂಪಾಣಿ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. 24 ಗಂಟೆಗಳ ಕಾಲ ಅವಲೋಕನದಲ್ಲಿಡಲಾಗುವುದು ಎಂದು ಡಾಕ್ಟರ್​ ಆರ್.ಕೆ.ಪಟೇಲ್ ತಿಳಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಸೇರಿ ಅನೇಕ ನಾಯಕರು ರೂಪಾಣಿ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net