

ಮುಂಬೈ: ಶೂಟಿಂಗ್ ಸೆಟ್ಗೆ ಭೇಟಿ ನೀಡಿದಾಗ ಹೀರೋಗೆ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಸಹ ನಟನನ್ನು ಚಿತ್ರದಿಂದ ತೆಗೆದು ಹಾಕಿರುವ ಘಟನೆ ಬಾಲಿವುಡ್ನಲ್ಲಿ ನಡೆದಿದ. ಅಜಯ್ ದೇವಗನ್ ನಟನೆಯ ಸನ್ ಆಫ್ ಸರ್ದಾರ್-2 ಚಿತ್ರದ ಸೆಟ್ನಲ್ಲಿ ಈ ಘಟನೆ ನಡೆದಿದ್ದು, ಬಾಲಿವುಡ್ನ ಹಿರಿಯ ನಟ ವಿಜಯ್ ರಾಝ್ರನ್ನು ಸಿನಿಮಾದಿಂದ ತೆಗೆದುಹಾಕಲಾಗಿದೆ. ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ಅವರಿಗೆ ಗೇಟ್ ಪಾಸ್ ನೀಡಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
2011ರಲ್ಲಿ ಬಿಡುಗಡೆಯಾಗಿದ್ದ ಸನ್ ಆಫ್ ಸರ್ದಾರ್ ಚಿತ್ರದ ಮುಂದುಬರೆದ ಭಾಗ ಇದಾಗಿದ್ದು, ಬಹುನಿರೀಕ್ಷಿತ ಚಿತ್ರದಲ್ಲಿ ಅಜಯ್ ದೇವಗನ್ ನಾಯಕನಾಗಿ ನಟಿಸುತ್ತಿದ್ದಾರೆ. ಯುನೈಟೆಡ್ ಕಿಂಗ್ಡಮ್ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಸೆಟ್ನಲ್ಲಿ ಆದ ಒಂದು ಸಣ್ಣ ಭಿನ್ನಾಭಿಪ್ರಾದಿಂದ ಹಿರಿಯ ನಟನನ್ನು ತೆಗೆದು ಹಾಕಲಾಗಿದೆ. ಈ ಬಗ್ಗೆ ನಟ ವಿಜಯ್ ರಾಝ್ ಒಂದು ರೀತಿಯ ಹೇಳಿಕೆ ನೀಡಿದರೆ, ನಿರ್ಮಾಪಕ ಕುಮಾರ್ ಪಾಠಕ್ ಮತ್ತೊಂದು ರೀತಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ನಟ ವಿಜಯ್ ರಾಝ್, ನಾನು ವ್ಯಾನಿಟಿ ವ್ಯಾನ್ನಿಂದ ಹೊರಬಂದು ನೋಡಿದಾಗ ಅಜಯ್ ದೇವಗನ್ ಅವರು 25 ಮೀಟರ್ ದೂರದಲ್ಲಿ ನಿಂತಿದ್ದರು. ಅವರು ಬ್ಯುಸಿ ಇದ್ದರು ಎಂಬ ಕಾರಣಕ್ಕಾಗಿ ನಾನು ಅವರನ್ನು ಮಾತನಾಡಿಸಿಲ್ಲ. 30 ನಿಮಿಷಗಳ ಬಳಿಕ ನಿರ್ಮಾಪಕರು ಬಂದು ನಿಮ್ಮನ್ನು ಸಿನಿಮಾದಿಂದ ತೆಗೆದುಹಾಕಿದ್ದೇವೆ ಅಂತ ತಿಳಿಸಿದರು.
ನನ್ನಿಂದ ಆದ ಏಕೈಕ ತಪ್ಪು ಎಂದರೆ ಅಜಯ್ ದೇವಗನ್ ಅವರನ್ನು ಮಾತನಾಡಿಸಿ ನಮಸ್ಕಾರ ಮಾಡದೇ ಇರುವುದು. ಚಿತ್ರತಂಡದ ಬೇರೆ ಯಾರನ್ನೂ ನಾನು ಭೇಟಿ ಮಾಡಿಲ್ಲ. ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲದ ಕಾರಣ, ಶೂಟಿಂಗ್ ಸೆಟ್ಗೆ ಬಂದು 30 ನಿಮಿಷಗಳ ಬಳಿಕ ನನ್ನನ್ನು ತೆಗೆದುಹಾಕಿದರು. ಇವರೆಲ್ಲ ತುಂಬ ಪ್ರಭಾವಿ ವ್ಯಕ್ತಿಗಳು ಎಂದು ನಟ ವಿಜಯ್ ರಾಝ್ ಹೇಳಿದ್ದಾರೆ.
ನಟ ವಿಜಯ್ ರಾಝ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕುಮಾರ್ ಪಾಠಕ್, ಶೂಟಿಂಗ್ ಸೆಟ್ನಲ್ಲಿ ನಟ ವಿಜಯ್ ರಾಝ್ ದುರ್ವತನೆ ತೋರಿದ್ದು, ಅವರ ಸಹಾಯಕ ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಅವರನ್ನು ನಮ್ಮ ಸಿನಿಮಾದಿಂದ ತೆಗೆದು ಹಾಕಲಾಗಿದೆ. ಇದಲ್ಲದೆ ಅವರು ಶೂಟಿಂಗ್ ಸೆಟ್ನಲ್ಲಿ ಬೇಡಿಕೆಗಳನ್ನು ಇಡುತ್ತಿದ್ದರು. ಈ ಕಾರಣಕ್ಕಾಗಿಯೇ ನಾಬು ಅವರನ್ನು ಸಿನಿಮಾದಿಂದ ತೆಗೆದುಹಾಕಿದ್ದೇವೆ ಎಂದು ನಿರ್ಮಾಪಕ ಕುಮಾರ್ ಪಾಠಕ್ ತಿಳಿಸಿದ್ದಾರೆ.