ಪ್ರೀತಿ, ಜಗಳದ ನಡುವಿನ ಖುಷಿ: ಸಿನಿಮಾ ವಿಮರ್ಶೆ

Khushi
Published on
  • ಚಿತ್ರ: ಖುಷಿ
  • ನಿರ್ದೇಶನ: ಶಿವ ನಿರ್ವಾಣ.
  • ನಿರ್ಮಾಣ: ನವೀನ್​ ಎರ್ನೇನಿ, ರವಿಶಂಕರ್​.
  • ತಾರಾಗಣ: ವಿಜಯ್​ ದೇವರಕೊಂಡ, ಸಮಂತಾ, ಸಚಿನ್​ ಖೆಡಕರ್​ ಮುಂತಾದವರು

| ಪ್ರಮೋದ ಮೋಹನ ಹೆಗಡೆ ಬೆಂಗಳೂರು 
ಒಬ್ಬ ಹುಡುಗ. ಒಂದು ಹುಡುಗಿ. ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಆದರೆ, ಮನೆಯವರು ವಿರೋಧಿಸುತ್ತಾರೆ. ಅದನ್ನೂ ಮೀರಿ ಅವರಿಬ್ಬರು ಮದುವೆ ಆಗುತ್ತಾರೆ. ಬಳಿಕ ಇಬ್ಬರ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪ ಉಂಟಾಗಿ ಜಗಳವಾಗುತ್ತದೆ. ಇವೆಲ್ಲ ಎಲ್ಲೋ ಕೇಳಿದ ಕಥೆಯೋ ಅಥವಾ ಈಗಾಗಲೇ ನೋಡಿದ ಸಿನಿಮಾವೋ ಅನ್ನಿಸಬಹುದು ಅಲ್ಲವೇ? ಹೌದು, ಇಂತಹದೇ ಒಂದು ಸರಳ ಪ್ರೇಮ ಕಥೆ ‘ಖುಷಿ’.

ಶಿವ ನಿರ್ವಾಣ ನಿರ್ದೇಶನದ ಹಿಂದಿನ ಸಿನಿಮಾಗಳಾದ ‘ನಿನ್ನು ಕೋರಿ’, ‘ಮಜಿಲಿ’ ಸಿನಿಮಾಗಳಲ್ಲಿಯೂ ಪ್ರೇಮಕಥಾ ಹಂದರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದನ್ನು ಗಮನಿಸಬಹುದು. ಎಲ್ಲದರಲ್ಲೂ ಒಂದೊಳ್ಳೆ ಫೀಲ್ ಅಡಗಿಸಿಡುವ ಪ್ರಯತ್ನ ಶಿವ ನಿರ್ವಾಣ ಮಾಡಿದ್ದಾರೆ. ಅದೇ ಪ್ರಯತ್ನ ‘ಖುಷಿ’ ಚಿತ್ರದಲ್ಲೂ ಮುಂದುವರಿದಿದೆ.

ನಾಸ್ತಿಕ ಕುಟುಂಬದ ವಿಪ್ಲವ್ (ವಿಜಯ್), ದೇವರ ಆರಾಧಿಸುವ ಕುಟುಂಬದ ಆರಾಧ್ಯ (ಸಮಂತಾ) ನಡುವೆ ಪ್ರೀತಿ ಹುಟ್ಟುತ್ತದೆ. ಸಹಜವಾಗಿ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗುತ್ತದೆ. ಆದರೆ, ಮನೆಯವರ ಮಾತನ್ನು ವಿರೋಧಿಸಿ ಇಬ್ಬರೂ ಮದುವೆ ಆಗುತ್ತಾರೆ. ಆರಂಭದಲ್ಲಿ ಚೆನ್ನಾಗಿದ್ದು, ನಂತರ ಇಬ್ಬರ ನಡುವೆಯೂ ಮನಸ್ತಾಪ ಉಂಟಾಗುತ್ತದೆ. ಪ್ರೀತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗ ವಿರೋಧಿಸಿದ ಪಾಲಕರೇ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎನ್ನುವುದೇ ಕಥೆ.

ಈ ಪ್ರೇಮ ಕಥೆಯ ಜತೆಗೆ ಪಾಲಕರ ವ್ಯಕ್ತಿತ್ವದ ಬದಲಾವಣೆ ಇದೆ. ಅದೆಷ್ಟೇ ಪ್ರೇಮ ಕಥೆಗಳ ಸಿನಿಮಾ ಬಂದರೂ ಏನಾದರೊಂದು ಮ್ಯಾಜಿಕ್ ಇದ್ದರೆ ಆ ಸಿನಿಮಾ ಗೆದ್ದುಬಿಡುತ್ತದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ನಡುವಿನ ಕೆಮಿಸ್ಟ್ರಿ ಹೈಲೈಟ್. ಸುದೀರ್ಘ ಎನಿಸುವ ಸಿನಿಮಾ ವಿಜಯ್, ಸಮಂತಾ ಅಭಿನಯ, ವೆನ್ನೆಲ ಕಿಶೋರ್ ಹಾಗೂ ಅಲಿ ಹಾಸ್ಯದಿಂದ ನೋಡಿಸಿಕೊಳ್ಳುತ್ತದೆ. ಸಚಿನ್, ಮುರಳಿ, ರೋಹಿಣಿ, ಲಕ್ಷ್ಮೀ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ನೀಡಿದ್ದಾರೆ. ಸಮಂತಾ ಮುಖದಲ್ಲಿ ಮುಂಚೆ ಇದ್ದ ಮುಗ್ಧತೆ, ಹೊಳಪು ಮರೆಯಾದಂತೆ ಕಾಣುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕತ್ತರಿ ಹಾಕಬಹುದಿತ್ತು. ಪ್ರೇಮ ಕಥೆಯನ್ನು ಇಚ್ಛಿಸುವವರು ನೋಡಬಹುದಾದ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net