

ಇನ್ನು 25 ವರ್ಷಗಳಲ್ಲಿ, 2047ರ ಹೊತ್ತಿಗೆ ಭಾರತದ ಆರ್ಥಿಕತೆ 20 ಟ್ರಿಲಿಯನ್ ಡಾಲರ್ ತಲುಪಲಿದೆ. ಅಂದರೆ, ಸ್ವಾತಂತ್ರ್ಯ ಶತಮಾನೋತ್ಸವ ಸಂದರ್ಭದಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) 1600 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ಮುನ್ನೋಟ ವರದಿಯನ್ನು ನೀಡಿದೆ. ಆ ವೇಳೆಗೆ ದೇಶದ ವಾರ್ಷಿಕ ತಲಾದಾಯವು 10 ಸಾವಿರ ಡಾಲರ್ (8 ಲಕ್ಷ ರೂಪಾಯಿ)ಆಗಲಿದೆ ಎಂದು ಸಮಿತಿಯು ನಿರೀಸಿದೆ. ಈ ಸಮಿತಿಯು ಅನೇಕ ಆಧಾರಗಳನ್ನಿಟ್ಟು ಮುನ್ನೋಟವನ್ನು ಪ್ರಸ್ತುತಪಡಿಸಿದೆ. ಮುಂದಿನ 25 ವರ್ಷಗಳಲ್ಲಿ ಜಿಡಿಪಿ ವಾರ್ಷಿಕವಾಗಿ ಶೇ. 7ರಿಂದ 7.5ರಷ್ಟು ಪ್ರಗತಿ ಸಾಧಿಸಿದರೆ, ಭಾರತದ ಆರ್ಥಿಕತೆ ಈ ಹಂತಕ್ಕೆ ತಲುಪಲು ಸಾಧ್ಯ ಎಂದು ಅದು ಹೇಳಿದೆ. ಭಾರತದ ಜಿಡಿಪಿ 2014-15ರಲ್ಲಿ 124 ಲಕ್ಷ ಕೋಟಿ ರೂಪಾಯಿ ಇತ್ತು.
2021-22ರಲ್ಲಿ ಇದು 236.65 ಲಕ್ಷ ಕೋಟಿ ರೂ. ತಲುಪಿದೆ. ಅಂದರೆ, ಏಳು ವರ್ಷಗಳಲ್ಲಿ ಬಹುತೇಕ ದುಪ್ಪಟ್ಟು ಆಗಿದೆ. ಇದೇ ವೇಗದಲ್ಲಿ ಪ್ರಗತಿ ಸಾಧಿಸಿದರೆ, ಇನ್ನು 20 ವರ್ಷಗಳಲ್ಲಿ ಭಾರತದ ಜಿಡಿಪಿ 1600 ಲಕ್ಷ ಕೋಟಿ ರೂಪಾಯಿ ದಾಟಬಹುದಾಗಿದೆ. ಆ ಲೆಕ್ಕದಲ್ಲಿ, ಸಲಹಾ ಸಮಿತಿಯು ಪ್ರಸ್ತುತ ಬೆಳವಣಿಗೆ ದರವನ್ನು ಆಧರಿಸಿದ ವಾಸ್ತವಿಕ ಮುನ್ನೋಟವನ್ನೇ ತೆರೆದಿಟ್ಟಿದೆ ಎಂದು ಹೇಳಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು 2025ರ ಹೊತ್ತಿಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ (400 ಲಕ್ಷ ಕೋಟಿ ರೂಪಾಯಿ) ಹೆಚ್ಚಿಸುವ ಗುರಿ ಹೊಂದಿದ್ದಾರೆ. ಇದಲ್ಲದೆ, 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಕನಸನ್ನು ಕಾಣುತ್ತಿದ್ದಾರೆ. ಪ್ರಗತಿಪರ ರಾಷ್ಟ್ರವೆಂದರೆ ಬಹುಮುಖ್ಯವಾಗಿ ಆ ದೇಶದ ಜನರ ಆರ್ಥಿಕ ಸ್ಥಿತಿ ಉನ್ನತ ಮಟ್ಟದಲ್ಲಿರಬೇಕು. ಭಾರತೀಯರ ವಾರ್ಷಿಕ ತಲಾದಾಯ 2021-22ರಲ್ಲಿ 1,28,829 ರೂಪಾಯಿ ಇದೆ. ಒಟ್ಟಾರೆ ಆರ್ಥಿಕತೆಯಲ್ಲಿ ಭಾರತವು ವಿಶ್ವದಲ್ಲೇ 5 ಸ್ಥಾನದಲ್ಲಿದ್ದರೂ ತಲಾದಾಯದಲ್ಲಿ ಭಾರತೀಯರ ಸ್ಥಾನ 126 ಇದೆ. 1951ರ ಜನಗಣತಿ ಪ್ರಕಾರ 36 ಕೋಟಿ ಇದ್ದ ಜನಸಂಖ್ಯೆ ಈಗ 140 ಕೋಟಿ ತಲುಪಿರುವುದು ತಲಾದಾಯದಲ್ಲಿ ಹಿಂದುಳಿದಿರುವಿಕೆಗೆ ಮುಖ್ಯ ಕಾರಣವಾಗಿದೆ. ಇದರ ಜತೆಗೆ, ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಪಿಡುಗಿಗೆ ಪರಿಣಾಮಕಾರಿ ಮದ್ದರೆಯದಿದ್ದರೆ ಉದ್ದೇಶಿತ ಪ್ರಗತಿ ಕೈಗೆಟುಕದೆ ಇರಬಹುದು. ಈ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಸಮಾಜದ ಜಂಟಿ ಹೊಣೆಗಾರಿಕೆ ಇದೆ.