ದಾಸೋಹ ನೀತಿಯಂತೆ ಹಂಚಿಕೊಂಡು ಬದುಕುವ ಅಗತ್ಯವಿದೆ

27-RNR-03
Published on

ಹಾವೇರಿ: ನಮ್ಮ ನಮ್ಮ ಸೈದ್ಧಾಂತಿಕ ಬದ್ಧತೆಗಳನ್ನು ಒಮ್ಮೊಮ್ಮೆ ಮೀರಿ ಮನುಷ್ಯ ಪ್ರೀತಿಗಾಗಿ ಹಳೆಯದನ್ನು ಮುರಿದು, ಹೊಸದನ್ನು ಕಟ್ಟಬೇಕು. ಇಂದಿನ ಹರಿದು ತಿನ್ನುವ ದಿನಮಾನಗಳಲ್ಲಿ ಶರಣರ ದಾಸೋಹ ನೀತಿಯಂತೆ ಹಂಚಿಕೊಂಡು ಬದುಕುವ ಕಲೆ ಅಗತ್ಯವಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.

ಇಲ್ಲಿಯ ಹಂಚಿನಮನಿ ಆರ್ಟಗ್ಯಾಲರಿಯಲ್ಲಿ ಸಾಹಿತಿ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಿರಿಗನ್ನಡ ಪ್ರಶಸ್ತಿ ಪುರಸತ ಗೆಳೆಯರ ಬಳಗದ ಸಂಸ್ಥೆಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರು ದಶಕಕ್ಕೂ ಹೆಚ್ಚು ಕಾಲ ನಾಡು ನುಡಿಗಾಗಿ ಯಾವ ಸದ್ದು ಗದ್ದಲಗಳಿಲ್ಲದೆ ಮೌನವಾಗಿ ಕೊಡುಗೆ ನೀಡಿದ, ಗೆಳೆಯರ ಬಳಗ ಅದರ ಸಾಧನೆಯ ಅರ್ಹತೆಯ ಮೇಲೆ ಈ ಪ್ರಶಸ್ತಿ ಬಂದಿದ್ದು, ಅದನ್ನು ಕಟ್ಟಿದ ಹಿರಿಯರನ್ನು ಸದಾಕಾಲ ಸ್ಮರಿಸುವಂತಾಗಬೇಕು ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ವೃತ್ತಿ ಒತ್ತಡಗಳ ನಡುವೆ ಚಿತ್ರಕಲೆ, ಸಾಹಿತ್ಯ ಕಲೆಯಂತಹ ಯಾವುದಾದರೂ ಹವ್ಯಾಸ ಇರಬೇಕು. ಆಗ ಮಾತ್ರ ಚೈತನ್ಯಶಿಲರಾಗಿ ಜೀವನ ಸಾಗಿಸಬಹುದು. ನನಗೂ ಚಿತ್ರ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಓಟದಲ್ಲಿ ಬದಿಗೆ ಸರಿಸಬೇಕಾಯಿತು ಎಂದರು.

ಗೆಳೆಯರ ಬಳಗದ ಅಧ್ಯಕ್ಷ ಡಾ. ಸುದೀಪ ಪಂಡಿತರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಸುದೀಪ ಪಂಡಿತ ಮಾತನಾಡಿ, ಈ ಪ್ರಶಸ್ತಿ ಹಾವೇರಿ ಜಿಲ್ಲೆಗೆ ಸಲ್ಲುವ ಗೌರವವಾಗಿದೆ. ಈ ಕಾರಣದಿಂದ ಗೆಳೆಯರ ಬಳಗದ ಘನತೆ ಹೆಚ್ಚಿದ್ದು ನಾವೆಲ್ಲ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.

ಜ್ಞಾನಗಂಗಾ ಶಿಕ್ಷಣ ಸಮಿತಿಯ ಚೇರ್ಮನ್​ ಡಾ. ಶ್ರವಣ ಪಂಡಿತ, ಬಳಗದ ಕಾರ್ಯದಶಿರ್ ಡಾ. ಗೌತಮ ಲೋಡಾಯಾ, ಶಿಕ್ಷಣ ಸಮಿತಿಯ ಕಾರ್ಯದಶಿರ್ ಡಾ. ಗುಹೇಶ್ವರ ಪಾಟೀಲ, ಕೋಶಾಧ್ಯಕ್ಷ ಸಂಜೀವಕುಮಾರ ಬಂಕಾಪುರ, ರೇಖಾ ಹಂಚಿನಮನಿ ಮತ್ತಿತರರು ಉಪಸ್ಥಿತರಿದ್ದರು.

ಆರ್​.ಸಿ. ನಂದಿಹಳ್ಳಿ ಪ್ರಾಥಿರ್ಸಿದರು. ಕಲಾವಿದ ಕರಿಯಪ್ಪ ಹಂಚಿನಮನಿ ಸ್ವಾಗತಿಸಿದರು. ಪೃಥಿರಾಜ ಬೆಟಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net