

ಬೆಂಗಳೂರು:
ಇಡೀ ಸರ್ಕಾರವನ್ನು ಭ್ರಷ್ಟತೆಯಲ್ಲಿ ಮುಳುಗಿ ಹೋಗಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಷ್ಟೆ ಅಲ್ಲ, ಕೂಡಲೆ ವಿಧಾನಸಭೆ ವಿಸರ್ಜನೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಮ್ಮ ಹಿಂದೆ ರಾಜ್ಯದ ಜನರಿದ್ದಾರೆ ಎಂದು ತೋರಿಸಿಕೊಟ್ಟರೆ ಬಿಜೆಪಿ ನಿಮ್ಮ ವಿರುದ್ಧ ಪ್ರತಿಭಟನೆಯನ್ನೇ ಮಾಡುವುದಿಲ್ಲ ಎಂದು ಹೇಳಿದರು.
ಸಿದ್ದರಾಮ್ಯನವರೇ ನೀವು ವಿಧಾನಸಭೆ ವಿಸರ್ಜನೆಗೆ ಮುಂದಾದರೆ ಕಾಂಗ್ರೆಸ್ಸಿನ 136 ಶಾಸಕರ ಪೈಕಿ 135 ಜನ ಶಾಸಕರೂ ನಿಮ್ಮ ಜೊತೆ ಇರುವುದಿಲ್ಲ. ಜಮೀರ್, ಮಹದೇವಪ್ಪ, ಕಾಕಾ ಪಾಟೀಲ್ ಕೂಡ ಇರುವುದಿಲ್ಲ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ಲೂಟಿ, ಭ್ರಷ್ಟಾಚಾರ ಮಿತಿ ಮೀರಿದೆ. ಈ ಸರಕಾರಕ್ಕೆ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಮಾಡಲು ಅಧಿಕಾರ, ಯೋಗ್ಯತೆ ಇಲ್ಲ ಎಂದ ಅವರು, ರಾಜೀನಾಮೆ ಕೊಡುವುದೊಂದೇ ನಿಮ್ಮ ಮುಂದಿನ ದಾರಿ ಎಂದರು.
ಹೈಕೋರ್ಟ್ ಆದೇಶ, ಜನಪ್ರತಿನಿಧಿಗಳ ಕೋರ್ಟಿನ ಆದೇಶವೂ ಬಂದಿದೆ. ರಾಜೀನಾಮೆ ಬಿಟ್ಟು ಬೇರೇನು ಮಾಡಲೂ ಸಾಧ್ಯವಿಲ್ಲ. ನಿಮ್ಮ ಮೇಲೆ ಎ್ಐಆರ್ ಕೂಡ ಆಗಲಿದೆ. ಆದರೂ, ಇನ್ಯಾತಕ್ಕೆ ಕಾಯುತ್ತಿದ್ದೀರಿ? ಎಂದು ಕೇಳಿದರು.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು ತನಿಖೆ ಮೇಲೆ ಪ್ರಭಾವ ಬೀರುತ್ತಾರೆಂದು ನೀವೇ ಹೇಳಿದ್ದಿರಲ್ಲವೇ? ನಿಮ್ಮ ಹೇಳಿಕೆಗೆ ಯಾಕೆ ತದ್ವಿರುದ್ದ ನಡೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ದುರ್ಬಲ: ಛಲವಾದಿ
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ಸಿಗರು ಮತ್ತು ಸಿದ್ದರಾಮಯ್ಯನವರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಮೂಲಕ ರಾಷ್ಟ್ರದಲ್ಲಿ ರಾಜ್ಯ ಮಾನವನ್ನು ಹರಾಜು ಹಾಕುತ್ತಿದೆ.
ರಾಜೀನಾಮೆ ಕೊಡುವ ಮೂಲಕ ಅಲ್ಪ ಸ್ವಲ್ವ ಗೌರವವನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿಮ್ಮ ರಾಜೀನಾಮೆ ಪಡೆದು ಪಕ್ಷದಿಂದ ಉಚ್ಚಾಟಿಸಬೇಕಿತ್ತು. ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ದುರ್ಬಲವಾಗಿದೆ ಎಂದರು.
*ದಿನಕ್ಕೊಂದು ಹಗರಣಕ್ಕೆ ಈ ಸರ್ಕಾರ ಸಾಕ್ಷಿಯಂತಿದೆ. ವಾಲ್ಮೀಕಿ ನಿಗಮದ ಹಗರಣ, ಪ್ರವಾಸೋದ್ಯಮ ಇಲಾಖೆಯಲ್ಲಿ ಹಗರಣ, ಕಾರ್ಮಿಕರ ಇಲಾಖೆಯಲ್ಲಿ 5 ಸಾವಿರ ಕೋಟಿ ರೂಪಾಯಿಯ ಮುಡಾ ಹಗರಣಗಳು ನಡೆದಿವೆ. ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರು.
-ಅರವಿಂದ ಬೆಲ್ಲದ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ
*ಅರ್ಕಾವತಿ ಹಗರಣ ತಾವು ಬಿಳಿ ಬಟ್ಟೆಯಂತಿಲ್ಲ ಎಂಬುದನ್ನು ತೋರಿಸುತ್ತದೆ. ರೀಡೂ ಹೆಸರಿನಲ್ಲಿ ಸಿಎಂ, 880 ಎಕರೆಯನ್ನು ರಿಯಲ್ ಎಸ್ಟೇಟ್ ಬ್ರೋಕರ್‌ಗಳಿಗೆ ಡೀನೋಟಿಫಿಕೇಶನ್ ಮಾಡಿದ್ದಾರೆ.
*ಕಾಂಗ್ರೆಸ್ ಪಕ್ಷದ್ದು ದೇಶದೆಲ್ಲೆಡೆ ಹಗರಣಗಳ ಸರ್ಕಾರ. ನಿವೇಶನಗಳನ್ನು ಕಬಳಿಸಿರುವ ಮತ್ತು ಎಸ್‌ಐಟಿ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕುವ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು.
-ಅರಗ ಜ್ಞಾನೇಂದ್ರ, ಮಾಜಿ ಸಚಿವ
*ಮಾನ ಮರ್ಯಾದೆ ಇಲ್ಲದವರು, ಲಜ್ಜೆಗೆಟ್ಟವರು, ಲೂಟಿಕೋರರು ಎಂದು ಮಾತನಾಡುವ ಸಿದ್ದರಾಮಯ್ಯನವರು ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರಗಳ ಮೂಲಕ ಇಡೀ ಭಾರತದಲ್ಲೇ ಕನ್ನಡಿಗರು ತಲೆ ತಗ್ಗಿಸುವಂಥ ಭ್ರಷ್ಟಾಚಾರ ಮಾಡಿದ್ದಾರೆ.
-ಜನಾರ್ದನ ರೆಡ್ಡಿ, ಮಾಜಿ ಸಚಿವ