

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ, ಪ್ರಜಾಪ್ರಭುತ್ವದ ಸಂಕೇತ ಎನಿಸಿರುವ ವಿಧಾನಸೌಧದವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಐತಿಹಾಸಿಕ ಕಟ್ಟಡದ ಮಹತ್ವ, ಶಿಲ್ಪಕಲೆ ವೈಭವ ಮತ್ತು ಮಹತ್ವ ಪರಿಚಯಿಸುವ ‘ವಿಧಾನಸೌಧ ಮಾರ್ಗದರ್ಶಿ ನಡಿಗೆ’ ಪ್ರವಾಸಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು, ವಿದೇಶಿಗರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಯಿತು.
ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ವಿಧಾನಸಭೆಯ ಸಚಿವಾಲಯದ ಸಹಭಾಗಿತ್ವದೊಂದಿಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಸಮಾರಂಭಕ್ಕೆ ಚಾಲನೆ ನೀಡಿದರು.
ಮಾರ್ಗದರ್ಶಿ ನಡಿಗೆ ಪ್ರವಾಸ ಹೆಸರಿನಲ್ಲಿ ವಿಧಾನಸೌಧ ವೀಕ್ಷಕರಿಗೆ ಪ್ರತಿ 2ನೇ ಮತ್ತು 4ನೇ ಶನಿವಾರ ಮತ್ತು ಎಲ್ಲ ಭಾನುವಾರ ಬೆಳಗ್ಗೆ 8ರಿಂದ ಸಂಜೆ 5ವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 16 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದ್ದು, ಇದಕ್ಕೆ ಮೇಲ್ಪಟ್ಟವರಿಗೆ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪ್ರತಿದಿನ ಗುಂಪಿನಲ್ಲಿ 30 ಜನ ಇರಲಿದ್ದು, ದಿನಕ್ಕೆ 300 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಅವಕಾಶವಿರಲಿದೆ.
90 ನಿಮಿಷಗಳ ನಡಿಗೆ ಪ್ರವಾಸ ಇದಾಗಿರಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನಿಡಲಾಗುತ್ತದೆ. ವಿಧಾನಸೌಧದ ಪ್ರವೇಶ ದ್ವಾರ ಗೇಟ್ 3ರಿಂದ ಆರಂಭವಾಗಿ 1.5 ಕಿ.ಮೀ. ನಡಿಗೆ ಆಗಿದೆ. ಪ್ರಮುಖವಾಗಿ ವಿಧಾನಸೌಧಕ್ಕೆ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ ಶಿಲಾಸ್ತಂಭ, ವಿಧಾನಸಭಾ ಮತ್ತು ವಿಧಾನಪರಿಷತ್ ಸಭಾಂಗಣ, ವಿಧಾನಸೌಧ ಮಹಾದ್ವಾರ, ಭೋಜನಗೃಹ, ಚಂದನದ ಮಾದರಿಗಳನ್ನು ತೋರಿಸಲಾಗುತ್ತದೆ. ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ವಚನ ಕ್ರಾಂತಿಗೆ ಕಾರಣರಾದ ಬಸವಣ್ಣ, ನಾಡಪ್ರಭು ಕೆಂಪೇಗೌಡ ಮತ್ತು ಭುವನೇಶ್ವರಿ ದೇವಿಯ ಪ್ರತಿಮೆಗಳನ್ನು ವೀಕ್ಷಿಸಬಹುದು.
ಪ್ರತಿಯೊಂದು ತಂಡದೊಂದಿಗೆ ತರಬೇತಿ ಪಡೆದ ಪ್ರವಾಸಿ ಮಾರ್ಗದರ್ಶಕರು (ಟೂರ್ ಗೈಡ್) ಪ್ರವಾಸಿ ಮಿತ್ರ ಮತ್ತು ವಿಧಾನಸೌಧದ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಈ ಕಥನವು ಇತಿಹಾಸ ಮತ್ತು ಪ್ರವಾಸೋದ್ಯಮ ತಜ್ಞರು ಸಂಶೋಧಿಸಿದ ಸ್ಕ್ರಿಪ್ಟ್ ಆಧರಿಸಿದೆ. ದ್ರಾವಿಡ ಶೈಲಿಯ ಶಿಲ್ಪಕಲೆ, ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ೋಷವಾಕ್ಯ ಮತ್ತು ‘ಜನರ ಅರಮನೆ’ ಎಂಬ ದೃಷ್ಟಿಕೋನವು ಈ ಪ್ರವಾಸದ ಭಾಗವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಿಕೆಟ್ ಬುಕಿಂಗ್, ಷರತ್ತುಗಳು
ಅಧಿಕೃತ ಕೆಎಸ್‌ಟಿಡಿಸಿ ವೆಬ್‌ಸೈಟ್ ಅಥವಾ ದೃಢೀಕೃತ ಟಿಕೆಟ್ ಸೇವಾ ಪೂರೈಕೆದಾರರ ವೇದಿಕೆಯಲ್ಲಿ ಟಿಕೆಟ್ ಬುಕಿಂಗ್ ಕಡ್ಡಾಯ. ಸ್ಥಳದಲ್ಲಿ ಬುಕಿಂಗ್ ಬಯಸುವರು ಗೇಟ್-3ರಲ್ಲಿರುವ ಕೆಎಸ್‌ಟಿಡಿಸಿ ಕೌಂಟರ್‌ನಲ್ಲಿ ಟಿಕೆಟ್ ಲಭ್ಯತೆ ಇದ್ದರೆ ಪ್ರವೇಶಕ್ಕೆ ಅವಕಾಶ. ಭದ್ರತೆ ಸಲುವಾಗಿ ಗುರುತಿನ ಚೀಟಿ, ಮೊಬೈಲ್ ನಂಬರ್, ಇ-ಮೇಲ್, ವಿದೇಶಿಗರಿಗೆ ಪಾಸ್‌ಪೋರ್ಟ್, ಶಾಲಾ ಐಡಿ ಕಾರ್ಡ್ ಕಡ್ಡಾಯವಾಗಿ ಇರಬೇಕು. ನಿಗದಿತ ಸಮಯಕ್ಕೂ 20 ನಿಮಿಷ ಮೊದಲು ಬರಬೇಕು. ಸೇವಾ ಶುಲ್ಕ ರಿಂಡ್ ಮಾಡುವುದಿಲ್ಲ.
ಪ್ರವಾಸಿಗರು ಪಾಲಿಸಬೇಕಾದ ಕ್ರಮಗಳು
* 18್ಡ12 ಇಂಚ್‌ಗಿಂತ ಕಡಿಮೆ ಗಾತ್ರದ ಬ್ಯಾಗ್
* ಸೆಕ್ಯೂರಿಟಿ ಸಂಬಂಧ ವಿಧಾನಸೌಧ ಭದ್ರತಾ ಸಿಬ್ಬಂದಿಗೆ ಪೂರ್ಣ ಅಧಿಕಾರ
* ಸೂಚನೆ ಉಲ್ಲಂಸಿದರೆ ಎಚ್ಚರಿಕೆ, ದಂಡ ಅಥವಾ ಹೊರಹಾಕಲಾಗುವುದು
* ವಿಧಾನಮಂಡಲ ಆವರಣದಲ್ಲಿ ಏರುಧ್ವನಿ, ನಗುವುದು, ಕೂಗುವುದು ನಿಷಿದ್ಧ
* ಆಹಾರ ಪದಾರ್ಥ, ಪಾನೀಯ, ತಂಬಾಕು, ಮದ್ಯ, ಚೂಯಿಂಗ್ ಗಮ್ ನಿರ್ಬಂಧ
* ಶಸಾಸ, ಸ್ಫೋಟಕ, ದೊಡ್ಡ ಎಲೆಕ್ಟ್ರಾನಿಕ್ಸ್ ಸಾಧನ, ಪ್ರತಿಭಟನಾ ವಸ್ತುಗಳಿಗೆ ನಿರ್ಬಂಧ