

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ, ಶೀಘ್ರದಲ್ಲಿಯೇ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು, ಉಪಸಭಾಪತಿ ಸ್ಥಾನವನ್ನು ಇಟ್ಟುಕೊಳ್ಳಲು ನಿರ್ಧರಿಸಿರುವ ಬಿಜೆಪಿ ನಾಯಕರು, ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಬಗ್ಗೆ ತಡರಾತ್ರಿ ತನಕ ಚರ್ಚೆ ನಡೆದರೂ ಈ ಬಗ್ಗೆ ಯಾವುದೇ ಅಂತಿಮ ಅಭಿಪ್ರಾಯಕ್ಕೆ ಬರಲಾಗಲಿಲ್ಲ. ಕಾಂಗ್ರೆಸ್ ಪ್ರಭಾವಕ್ಕೆ ಸಭಾಪತಿ ಪೀಠವನ್ನು ಬಳಕೆ ಮಾಡುವುದು ಸರಿಯಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಪರಿಷತ್ನಲ್ಲಿಯೇ ಹರಿಹಾಯ್ದಿದ್ದರು. ಕಲಾಪ ಮುಗಿದ ಮೇಲೂ ಸಭಾಪತಿ ವಿಷಯದಲ್ಲಿ ಅಸಮಾಧಾನ ಮಡುಗಟ್ಟಿ ನಿಂತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಹಲವಾರು ವಿಷಯಗಳಲ್ಲಿ ಕಾರ್ಯ ನಿರ್ವಹಣೆಗೆ ಮುಂದೆ ಅಡ್ಡಿಯಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಈ ರಾಜಕೀಯ ಕಸರತ್ತು ನಡೆದಿದೆ ಎಂದು ಮೂಲಗಳು ತಿಳಿಸಿವೆ.