

ಮುಜಾಫರ್‌ಪುರ: ಮದುವೆಯ ವಿಡಿಯೋ ಚಿತ್ರೀಕರಣಕ್ಕೆಂದು ಬಂದಿದ್ದ ಯುವಕನೊಬ್ಬ ವರನ ಸಹೋದರಿಯೊಂದಿಗೆ ಓಡಿಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.
ಅಹಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದವಾರ ಘಾಟ್ ದಾಮೋದರಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಕುಟುಂಬ ಪೊಲೀಸರ ಮೊರೆ ಹೋಗಿದೆ.
ನಡೆದಿದ್ದೇನು?: ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಮದುವೆ ದೃಶ್ಯ ಸೆರೆ ಹಿಡಿಯಲು ಬಂದಿದ್ದ ವೀಡಿಯೊಗ್ರಾಫರ್, ವರನ ಅಪ್ರಾಪ್ತ ತಂಗಿಯ ಜತೆ ಮಾತಾಡಿದ್ದಾನೆ. ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇತ್ತ ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೀಡಿಯೋಗ್ರಾಫರ್ ಜತೆ ವರನ ತಂಗಿ ಓಡಿಹೋಗಿದ್ದಾಳೆ.
ವಿವಾಹ ಮುಗಿಯುತ್ತಿದ್ದಂತೆ ವರನ ಸಹೋದರಿ ಎಲ್ಲೂ ಕಾಣದೇ ಇರುವ ಕಾರಣ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ವಿಡಿಯೋಗ್ರಾಫರ್ ಕೂಡ ನಾಪತ್ತೆಯಾಗಿರುವುದು ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ವೀಡಿಯೊಗ್ರಾಫರ್ ಯುವಕ ವರನ ಅಪ್ರಾಪ್ತ ಸಹೋದರಿಯೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ. ನಂತರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.