

ಮುಂಬೈ: ಇತ್ತೀಚೆಗೆ ವನ್ಯಪ್ರಾಣಿಗಳು ನಾಡಿಗೆ ಬರುವ ಪ್ರಸಂಗಗಳು ಹೆಚ್ಚಿದ್ದು, ಎಷ್ಟೋ ಸಂದರ್ಭಗಳಲ್ಲಿ ಜನರ ಮೇಲೆರಗಿರುವುದೂ ಉಂಟು. ಇತ್ತೀಚೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಚಿರತೆಯೊಂದು ರಾತ್ರಿ ವೇಳೆ ಊರಿಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮುಂಬೈನ ಗೋರೆಗಾವ್ ಬಳಿಯ ಆರೇ ಪ್ರದೇಶದಲ್ಲಿರುವ ವಿಸವ ವರ್ಕರ್ಸ್ ಕಾಲೊನಿಯ ನಿವಾಸಿಯೊಬ್ಬರು ಮನೆಯ ಮುಂದೆ ತಮ್ಮ ವಾಕಿಂಗ್ ಸಪೋರ್ಟ್ ಹಿಡಿದುಕೊಂಡು ಬಂದು ಕೂತಿದ್ದಾರೆ. ಆಗ ಹಿಂದಿನಿಂದ ಬಂದ ಚಿರತೆ ಅವರ ಮೇಲೆರಗಿದೆ. ಸಮಯಪ್ರಜ್ಞೆ ತೋರಿರುವ ಮಹಿಳೆಯು ತಕ್ಷಣ ತಮ್ಮ ವಾಕಿಂಗ್ ಸಪೋರ್ಟಿನಿಂದ ಚಿರತೆಗೆ ಹೊಡೆದು ಅದನ್ನು ಹಿಮ್ಮೆಟ್ಟಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. ನೀವೂ ನೋಡಿ -
55 ವರ್ಷ ವಯಸ್ಸಿನ ಈ ಮಹಿಳೆ ಚಿರತೆಯ ಹಲ್ಲೆಯಿಂದಾಗಿ ಧೊಪ್ಪನೇ ನೆಲದ ಮೇಲೆ ಬಿದ್ದಿದ್ದಲ್ಲದೆ, ಚಿರತೆಯ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)