

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು(Video Viral) ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ವ್ಯಕ್ತಿಯು ವಿಮಾನ ನಿಲ್ದಾಣದ ಒಳಗೆ ಇರುವ ಕೆಫೆಯನ್ನು ತೋರಿಸುತ್ತಾ, ಇಲ್ಲಿಂದ ಖರೀದಿಸಿದ 200 ರೂಪಾಯಿ ಮೌಲ್ಯದ ಒಂದೇ ಒಂದು ಬ್ರೆಡ್ ಪಕೋಡದಲ್ಲಿ ಜಿರಳೆ ಇದೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ನಾನು ಈ ಬ್ರೆಡ್ ಪಕೋಡವನ್ನು ಖರೀದಿಸಿದ್ದೇನೆ. ಅದರಲ್ಲಿ ಒಂದು ಬೈಟ್ ತಿಂದಿದ್ದೇನೆ. ಆದರೆ ಅದರೊಳಗೆ ಈ ಹುಳು ಕಂಡುಬಂದಿದೆ ಎಂದು ಹೇಳುತ್ತಾರೆ. ಇದರಿಂದಾಗಿ ನನಗೆ ವಾಕರಿಕೆ ಉಂಟಾಗುತ್ತಿದೆ. ಇದು ಕೆಫೆ (ಕೆಫೆ 2.0), ಈ ಕೀಟವನ್ನು ನೋಡಿ.. ಮತ್ತಷ್ಟು ಪ್ರಯಾಣಿಕರು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತಾರೆ. 24 ಸೆಕೆಂಡ್ ಇರುವ ಈ ಕ್ಲಿಪ್ನಲ್ಲಿ ಬ್ರೆಡ್ ಪಕೋಡಾದಲ್ಲಿ ಜಿರಲೆ ಇರುವುದನ್ನು ನೋಡಬಹುದು.
ವ್ಯಕ್ತಿಯ ಹೆಸರು ಡಿಪಿ ಗುರ್ಜರ್ ಎಂದು ಹೇಳಲಾಗಿದೆ. ಈ ಘಟನೆ ಬಗ್ಗೆ ಆತ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರ ಈ ವಿಡಿಯೋ ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಆಹಾರದ ನೈರ್ಮಲ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆ ವ್ಯಕ್ತಿಯ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಜೈಪುರ ವಿಮಾನ ನಿಲ್ದಾಣವು, ಆತ್ಮೀಯ ಶ್ರೀ ಗುರ್ಜರ್, ನಮಗೆ ಪತ್ರ ಬರೆದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಸಂಪರ್ಕ ಸಂಖ್ಯೆಯನ್ನು ಬಿಲ್ ರಶೀದಿಯೊಂದಿಗೆ ನೇರ ಸಂದೇಶದ ಮೂಲಕ ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ. ಇದರಿಂದ ಸಂಬಂಧಪಟ್ಟ ತಂಡವು ನಿಮ್ಮೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಪ್ರತಿಕ್ರಿಯಿಸಿದೆ.(ಏಜೆನ್ಸೀಸ್)