

ಪಟನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳೆ ಅವರಿದ್ದ ವೇದಿಕೆ ಕುಸಿದಿದ್ದು, ಸ್ವಲ್ಪರದರಲ್ಲಿಯೇ ಕಾಂಗ್ರೆಸ್ ನಾಯಕ ಪಾರಾಗಿದ್ದಾರೆ.
ಈ ವೇಳೆ ಪಕ್ಷ ನಾಯಕರು ಹಾಗೂ ಪಾಟ್ಲಿಪುತ್ರ ಲೋಕಸಭೆ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಮಿಸಾ ಭಾರತಿ ಧಾವಿಸಿದ್ದಾರೆ. ಈ ಘಟನೆಯಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ. ರಾಹುಲ್ ಗಾಂಧಿ ಅವರನ್ನು ಭದ್ರತಾ ಸಿಬ್ಬಂದಿ ವೇದಿಕೆಯಿಂದ ಕೆಳಗಿಸಿದ್ದಾರೆ. ವೇದಿಕೆ ಸರಿಗೊಂಡ ನಂತರ ರಾಹುಲ್ ಗಾಂಧಿ ತಮ್ಮ ಭಾಷಣ ಮುಂದುವರಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ನಾಯಕರು ವೇದಿಕೆ ಮೇಲೆ ನಿಂತು, ಜನರತ್ತ ಕೈಬೀಸಿ ಬಲ ಪ್ರದರ್ಶನ ಮಾಡುವಾಗಲೇ ವೇದಿಕೆ ಕುಸಿದಿದೆ. ಕೆಲ ಸೆಕೆಂಡ್‌ಗಳವರೆಗೆ ಗಾಬರಿಯಾದ ರಾಹುಲ್ ಗಾಂಧಿ ಅವರು ಕೂಡಲೇ ಮೀಸಾ ಭಾರ್ತಿ ಅವರು ಸರಿಯಾಗಿ ನಿಲ್ಲಲು ನೆರವು ನೀಡಿದರು.
ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ. ಇಂಡಿಯಾ ಬಣಕ್ಕೆ ರಾಷ್ಟ್ರವ್ಯಾಪಿ ಬೆಂಬಲದ ಬಲವಾದ ಅಲೆ ಹೆಚ್ಚಾಗಿದೆ ಎಂದರು. ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಅಗ್ನಿಪಥ್ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದು ಪುನರುಚ್ಚರಿಸಿದರು.