

ನವದೆಹಲಿ: ಪರೀಕ್ಷೆಯಲ್ಲಿ ನಕಲು ಮಾಡಲು ಹೊಸ ತಂತ್ರವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ವಿಡಿಯೋ ನೋಡಿದವರು ಕೂಡ ಅರೆಕ್ಷಣ ಬೆರಗಾಗುವ ದೃಶ್ಯ ಅದರಲ್ಲಿದ್ದು, ಈ ರೀತಿಯು ಕಾಪಿ ಮಾಡಬಹುದಾ ಎಂದು ಹುಬ್ಬೇರಿಸುವಂತಿದೆ.
ವಿಡಿಯೋವನ್ನು ಲ್ಯಾನ್ಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, "ಇದು ತಜ್ಞರ ಮಟ್ಟದ ವಂಚನೆ" ಎಂದು ಅಡಿಬರಹ ನೀಡಲಾಗಿದೆ.
ಸಣ್ಣ ವಿಡಿಯೋ ತುಣುಕಿನಲ್ಲಿ ಓರ್ವ ವ್ಯಕ್ತಿ ಪೆನ್ನೊಂದಿಗೆ ಆಟವಾಡುವುದನ್ನು ನೋಡಬಹುದು. ಕೆಲವೇ ಕ್ಷಣಗಳಲ್ಲಿ ಕ್ಯಾಮೆರಾ, ಒಂದು ಪೌಚ್ ಕಡೆಗೆ ತಿರುಗುತ್ತದೆ. ಮೊದಲು ನೋಡಿದವರಿಗೆ ಅಲ್ಲಿರುವುದು ಬಹು ಬಣ್ಣದ ಪೆನ್ಸಿಲ್ ಮತ್ತು ಪೆನ್ಗಳು ಎಂದು ಭಾಸವಾಗುತ್ತದೆ. ಅಚ್ಚರಿಯೇನೆಂದರೆ, ಅದು ಪೆನ್ಸಿಲ್ ಅಥವಾ ಪೆನ್ ಅಲ್ಲ, ಬದಲಾಗಿ ಅದು ಮೊಬೈಲ್ ಫೋನ್. ಪೆನ್ಸಿಲ್ ಮತ್ತು ಪೆನ್ಗಳಿರುವ ವಾಲ್ಪೇಪರ್ ಅನ್ನು ಮೊಬೈಲ್ ಫೋನ್ನಲ್ಲಿ ಅಪ್ಲೈ ಮಾಡಲಾಗಿರುತ್ತದೆ. ವಿಡಿಯೋ ನೋಡಿದವರಿಗೆ ಅದು ನೈಜವಾಗಿಯೇ ಕಾಣುತ್ತದೆ. ಆದರೆ, ಅಲ್ಲಿರುವ ಮೊಬೈಲ್ ಫೋನ್ ಎನ್ನುವುದು ಮಾತ್ರ ಸತ್ಯ.
ಇನ್ನು ವ್ಯಕ್ತಿ ಮೊಬೈಲ್ ಸ್ಕ್ರೀನ್ ಸ್ಪರ್ಶಿಸುತ್ತಿದ್ದಂತೆ ಪೆನ್ಗಳ ಫೋಟೋ ಬದಲಾಗಿ ಗ್ಯಾಲರಿ ಕಾಣುತ್ತದೆ. ಅದರಲ್ಲಿ ಪ್ರಶ್ನೆಗಳಿಗೆ ಉತ್ತರ ಇರುವ ಫೋಟೋಗಳು ಗೋಚರಿಸುತ್ತದೆ. ಇದೀಗ ಈ ತಂತ್ರವು ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ವರೆಗೂ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಹಾಗೂ 10 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ವಿಡಿಯೋ ನೋಡಿದವರು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)