ಈ ವಿಡಿಯೋದಲ್ಲಿ ಕಾಣುವುದು ಸತ್ಯವಲ್ಲ.. ಘಟನೆ ನಡೆದದ್ದು ದೆಹಲಿ ನಿಜಾಮುದ್ದೀನ್​ ಮಸೀದಿಯಲ್ಲಲ್ಲ...ಇವರೆಲ್ಲ ಸೀನುತ್ತಿಲ್ಲ..!

Untitled
Published on

ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆ ಕರೊನಾ ವೈರಸ್​ನ ಸೂಪರ್​ ಸ್ಪ್ರೆಡ್ಡರ್​ ಆಗಿದೆ. ಅದರಲ್ಲಿ ಭಾಗವಹಿಸಿದ್ದ ಅನೇಕರಲ್ಲಿ ಸೋಂಕು ದೃಢಪಟ್ಟಿದೆ. ಸುಮಾರು 10 ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ.

ಸದ್ಯ ಸಭೆಯಲ್ಲಿ ಭಾಗವಹಿಸಿದ್ದವರನ್ನು ಟ್ರೇಸ್​ ಮಾಡುವ ಕೆಲಸವೂ ನಡೆಯುತ್ತಿದೆ. ದಿನದಿನಕ್ಕೂ ಭಾರತದಲ್ಲಿ ಸೋಂಕಿನ ಪ್ರಮಾಣ ಹೆಚ್ಚಲು ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ಮಾ.13-15ರವರೆಗೆ ನಡೆದ ಮುಸ್ಲಿಂ ಧಾರ್ಮಿಕ ಸಭೆ ಕಾರಣವಾಗಿದೆ.
ಈ ಮಧ್ಯೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅನೇಕರು ತಮ್ಮ ಮೊಳಕಾಲ ಮೇಲೆ ಕುಳಿತುಕೊಂಡು ಪ್ರಾರ್ಥನೆಯಲ್ಲಿ ತೊಡಗಿರುವ ವಿಡಿಯೋ ಇದಾಗಿದೆ.

ನಮಾಜ್​ ಮಾಡುವಂತೆ ಕುಳಿತುಕೊಂಡಿದ್ದಾರೆ. ಆದರೆ ಅವರ ಉಸಿರಾಟದ ಕ್ರಿಯೆ ವಿಭಿನ್ನವಾಗಿದೆ. ಅವರೆಲ್ಲ ಸೀನುತ್ತಿದ್ದಾರೋ ಎಂಬಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಪೋಸ್ಟ್ ಮಾಡಿಕೊಂಡಿದ್ದರು. ಇದು ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ನಡೆದಿದ್ದು. ಮುಸ್ಲಿಮರು ಪ್ರಾರ್ಥನೆಯ ನೆಪದಲ್ಲಿ ಹೀಗೆ ಗುಂಪಾಗಿ ಸೇರಿ ಬೇಕೆಂದೇ ಸೀನುತ್ತಿದ್ದಾರೆ. ಈ ಮೂಲಕ ಕರೊನಾ ವೈರಸ್​ನ್ನು ಜಾಸ್ತಿ ಹರಡುತ್ತಿದ್ದಾರೆ ಎಂದು ಟ್ವಿಟರ್​ ಬಳಕೆದಾರರೋರ್ವರು ಕ್ಯಾಪ್ಷನ್ ಬರೆದಿದ್ದರು. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಜನರೂ ಕೂಡ ಇದು ದೆಹಲಿ ಮಸೀದಿಯಲ್ಲಿ ನಡೆದಿದ್ದು ಎಂದು ನಂಬಿಕೊಂಡಿದ್ದಾರೆ.

ಆದರೆ ಇದು ವಾಸ್ತವ ಅಲ್ಲ. ಸುಳ್ಳು ಮತ್ತು ಹಳೇ ವಿಡಿಯೋ ಎಂಬುದು ಇಂಡಿಯಾ ಟುಡೆ ತಂಡದ ಫ್ಯಾಕ್ಟ್​ಚೆಕ್​ನಲ್ಲಿ ಬೆಳಕಿಗೆ ಬಂದಿದೆ.
ದೆಹಲಿಯ ನಿಜಾಮುದ್ದೀನ್​ ಜಮಾತ್​ ಮಸೀದಿಯಲ್ಲಿ ತಬ್ಲಿಘಿ ಜಮಾತ್​ ಸಮಾವೇಶ ನಡೆಯುವುದಕ್ಕೂ ಮೊದಲಿನಿಂದಲೇ ವಿಡಿಯೋ ವೈರಲ್​ ಆಗುತ್ತಿದೆ. ರಿಡೋವಾನ್ ಸೌಮಾ ಎಂಬುವರ ಫೇಸ್​ಬುಕ್​​ನಲ್ಲಿ 2020ರ ಜನವರಿ 29ರಂದು ಈ ವಿಡಿಯೋ ಪೋಸ್ಟ್ ಆಗಿದೆ.

ಹಾಗೇ ಇವರೆಲ್ಲ ಸೀನುತ್ತಿಲ್ಲ. ಬದಲಿಗೆ ಅದೂ ಕೂಡ ಪ್ರಾರ್ಥನೆಯ ಒಂದು ಕ್ರಮ. ಸೂಫಿ ಪಂಥಕ್ಕೆ ಸೇರಿದವರ ಈ ರೀತಿಯ ಪ್ರಾರ್ಥನಾ ಕ್ರಮಕ್ಕೆ ಜಿಕಿರ್​ ಎಂದು ಕರೆಯಲಾಗುತ್ತದೆ. ಜಿಕಿರ್​ ಆಚರಣೆಯಲ್ಲಿ ಹೀಗೆ ಎಷ್ಟೋ ಹೊತ್ತು ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ.

ಇದು ಎಲ್ಲಿಯ ವಿಡಿಯೋ ಎಂದು ಗೊತ್ತಿಲ್ಲ. ಆದರೆ ದೆಹಲಿಯ ನಿಜಾಮುದ್ದೀನ್​ ಮಸೀದಿಯ ಕರೊನಾ ಘಟನೆಗೂ, ಇದಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. (ಏಜೆನ್ಸೀಸ್​)

ತಪ್ಪು ಮಾಹಿತಿಯೊಂದಿಗೆ ವಿಡಿಯೋ ಪೋಸ್ಟ್​ ಮಾಡಿರುವುದು: 

ಜನವರಿಯಲ್ಲಿಯೇ ವೈರಲ್​ ಆಗಿರುವ ವಿಡಿಯೋ ಇದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net