ಕಾಂಗ್ರೆಸ್ ಕಸಿವಿಸಿ ಬಿಜೆಪಿ ಬಿಗಿ; ಮೇಲ್ಮನೆ ಚುನಾವಣೆ, ಎರಡೂ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು

bjp-cong
Published on

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರದಿಂದ ಆರಂಭವಾಗಿದೆ. ಈ ನಡುವೆ ಅಭ್ಯರ್ಥಿ ಆಯ್ಕೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ಕೊನೇ ಹಂತದ ಕಸರತ್ತು ನಡೆಸಿದ್ದು, ಅಂತಿಮಗೊಳಿಸಲು ಹೆಣಗಾಡುತ್ತಿವೆ.

ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ 7 ಸ್ಥಾನಗಳಲ್ಲಿ ಬಿಜೆಪಿ ಕಳೆದ ಬಾರಿ ಗೆದ್ದಿತ್ತು. ಕಾಂಗ್ರೆಸ್ 14ರಲ್ಲಿ ವಿಜಯಿಯಾಗಿತ್ತು. ಈ ಬಾರಿ ಬಿಜೆಪಿ 15ರ ಗಡಿ ದಾಟುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಕಳೆದ ಬಾರಿಯ ಸಾಧನೆಯನ್ನು ವಿಸ್ತರಿಸುವ ಗುರಿ ಹಾಕಿಕೊಂಡಿದೆ. ಆದರೆ, ಸಮರ್ಥ ಅಭ್ಯರ್ಥಿಯನ್ನು ಹೆಕ್ಕಿ ತೆಗೆಯಲು ಎರಡೂ ಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಕೆಲವು ಬೆರಳೆಣಿಕೆ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಗೆ ಸಮಸ್ಯೆಯಾಗಿಲ್ಲ. ಉಳಿದಂತೆ ಬಹುಪಾಲು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಎರಡೂ ಪಕ್ಷಕ್ಕೆ ಕಗ್ಗಾಂಟಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ನ.18ರ ವೇಳೆಗೆ ಅಭ್ಯರ್ಥಿ ಅಂತಿಮ ಪಟ್ಟಿ ಸಿದ್ಧವಾಗಬೇಕಿತ್ತು. ಸದ್ಯದ ಲಕ್ಷಣ ನೋಡಿದರೆ, ನ.20 ಅಥವಾ 21ರಂದು ಪಟ್ಟಿ ದೆಹಲಿಯಲ್ಲಿ ಅಂತಿಮವಾಗಬಹುದು. ಹಾಲಿ ಆರು ಸದಸ್ಯರು ಕಣದಿಂದ ಹಿಂದೆ ಸರಿಯಲು ಬಯಸಿದ್ದು, ಈ ಬಾರಿ ಟಿಕೆಟ್​ಗೆ ಆಸಕ್ತಿ ತೋರಿಸಿಲ್ಲ. ಇನ್ನು ಬಿಜೆಪಿ ಹಂತಹಂತವಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಬಯಸಿದೆ. ಇಲ್ಲೂ ಒಂದಷ್ಟು ಪೈಪೋಟಿ ಕಾಣಿಸಿದೆ.

ಬಿಜೆಪಿ ಮೊದಲ ಪಟ್ಟಿ ಇಂದು?: ಪ್ರತಿಯೊಂದು ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೂ ಹೆಚ್ಚಿನ ಮಹತ್ವ ನೀಡಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ನಾಯಕರು ಅಂತಿಮಗೊಳಿಸಿ, ಪಕ್ಷದ ವರಿಷ್ಠರಿಗೆ ಸೋಮವಾರ ರಾತ್ರಿಯೇ ಕಳುಹಿಸಿದ್ದು, ತಮ್ಮ ಜವಾಬ್ದಾರಿ ಮುಗಿಸಿದ್ದಾರೆ. ಸಂಸದೀಯ ಮಂಡಳಿಯು ಮಂಗಳವಾರ ರಾತ್ರಿ ಇಲ್ಲವೇ ಬುಧವಾರ ಸಭೆ ಸೇರಲಿದ್ದು, ಎರಡು ಹಂತಗಳಲ್ಲಿ ಬಿಡುಗಡೆ ಮಾಡುವ ಚಿಂತನೆ ನಡೆದಿದೆ. ಮೊದಲ ಅಧಿಕೃತ ಪಟ್ಟಿ ಬುಧವಾರವೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯ ಕಚೇರಿಗೆ ಸೋಮವಾರ ರಾತ್ರಿ ಧಾವಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ರ್ಚಚಿಸಿ, ಅಳೆದು-ತೂಗಿ ಉಮೇದುವಾರರ ಪಟ್ಟಿ ಸಿದ್ಧಪಡಿಸಿದರು. ಆಕಾಂಕ್ಷಿಗಳ ತೀವ್ರ ಪೈಪೋಟಿ, ವಲಸಿಗರಿಗೆ ಮಣೆ ಹಾಕಿದರೆ ಪಕ್ಷ ಕಟ್ಟಿ ಬೆಳೆಯಲು ದುಡಿದವರ ಸಿಟ್ಟು, ಪ್ರಭಾವಿಗಳ ಒತ್ತಡದಿಂದಾಗಿ ರಾಜ್ಯ ಪ್ರಮುಖರಿಗೆ ತಲೆಬಿಸಿಯಾಗಿತ್ತು. ಸಮರ್ಥ ಅಭ್ಯರ್ಥಿಗಳ ಕೊರತೆ ಹಾಗೂ ಜಾತಿವಾರು ಪ್ರಾತಿನಿಧ್ಯದ ಲೆಕ್ಕಾಚಾರ ಸರಿದೂಗಿಸುವ ಸವಾಲಿತ್ತು. ನಿರಂತರ ಚರ್ಚೆ, ಸಿಎಂ ಮತ್ತು ರಾಜ್ಯ ನಾಯಕರ ಪರಸ್ಪರ ಸಂವಹನದ ಮೂಲಕ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಸಡಿಲಿಸಿ, ಆದಷ್ಟು ಬೇಗ ಅಧಿಕೃತ ಅಭ್ಯಥಿಗಳ ಪಟ್ಟಿ ಪ್ರಕಟಣೆಗೆ ವೇದಿಕೆ ಸಜ್ಜುಗೊಳಿಸಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರದಿಂದ ಆರಂಭವಾಗಿದ್ದು, ನ.23 ಕೊನೆಯ ದಿನವಾಗಿದೆ. ಡಿ.10ಕ್ಕೆ ಮತದಾನ ನಡೆಯಲಿದ್ದು, ಮೇಲ್ಮನೆಯಲ್ಲೂ ನಿಚ್ಚಳ ಬಹುಮತ ಸಾಧಿಸಲು ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಒಟ್ಟು 25 ಸ್ಥಾನಗಳ ಪೈಕಿ 12-18ರಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಸಿದ್ಧತೆ ನಡೆಸಿದ್ದು, ಪಕ್ಷದ ಎಲ್ಲ ಕಾರ್ಯಕರ್ತರನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಬೇಕೆಂದು ವರಿಷ್ಠರೂ ಸೂಚಿಸಿದ್ದಾರೆ.

ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್​ನ ಒಳಾಂಗಣದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ಯಾವುದೇ ಗೊಂದಲ ಮೂಡಬಾರದೆಂಬ ಕಾರಣಕ್ಕೆ ಪಕ್ಷದ ರಾಜ್ಯ ಉಸ್ತುವಾರಿಯೇ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ದೆಹಲಿಗೆ ಕಳಿಸುವಂತೆ ಸೂಚನೆ ನೀಡಿ ತೆರಳಿದ್ದರು. ಈ ನಡುವೆ, ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳನ್ನು ಅಂತಿಮಗೊಳಿಸಲು ಸಾಧ್ಯ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಚುನಾವಣೆ ನಡೆಯುತ್ತಿರುವ 25 ಕ್ಷೇತ್ರಗಳ ಪೈಕಿ 14 ಮಂದಿ ಕಾಂಗ್ರೆಸ್​ನಿಂದಲೇ ಆರಿಸಿಬಂದಿದ್ದರು. ಇವರ ಪೈಕಿ ಆರು ಮಂದಿ ಈ ಬಾರಿ ಸ್ಪರ್ಧಿಸದೇ ಇರುವ ತೀರ್ವನಕ್ಕೆ ಬಂದಿದ್ದಾರೆ. ಮುಖ್ಯವಾಗಿ ನಾರಾಯಣಸ್ವಾಮಿ, ರಘು ಆಚಾರ್, ಬಸವರಾಜ ಪಾಟೀಲ್ ಇಟಗಿ ಕಣಕ್ಕಿಳಿಯುವುದು ಬಹುತೇಕ ಅನುಮಾನ. ಇವರೆಲ್ಲ ವಿಧಾನಸಭೆ ಪ್ರವೇಶಿಸಲು ಬಯಸಿದ್ದಾರೆ. ಇದೇ ಕಾರಣಕ್ಕೆ ಈಗ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇನ್ನು ವಿಜಯ್ ಸಿಂಗ್, ಗೋಪಾಲಸ್ವಾಮಿ ಟಿಕೆಟ್ ಬೇಕೆಂದು ಅರ್ಜಿಯನ್ನೇ ಹಾಕಿಲ್ಲ. ಆದರೆ ಅವರಿಬ್ಬರನ್ನು ಕಣಕ್ಕಿಳಿಸಬೇಕೆಂಬ ಒತ್ತಡ ಪಕ್ಷದ ಕಡೆಯಿಂದಲೇ ಇದೆ.

ಕೋಲಾರದಲ್ಲಿ ತಿಕ್ಕಾಟ: ಪ್ರಮುಖ ನಾಯಕರು, ಶಾಸಕರು ತಮ್ಮ ಆಪ್ತರಿಗೆ ಅಥವಾ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಪಟ್ಟು ಸಿಡಿಲಿಸಿಲ್ಲ. ಜತೆಗೆ ಜಾತಿ ಲೆಕ್ಕಾಚಾರ ಮುಂದಿಟ್ಟು ಟಿಕೆಟ್ ಹಂಚಿಕೆ ಮಾಡುವ ಪ್ರಯತ್ನದಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎನ್ನಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸಂಬಂಧಪಟ್ಟಂತೆ ಅಭ್ಯರ್ಥಿ ಆಯ್ಕೆಗಾಗಿ ನಡೆದ ಸಭೆ ಮೊಟಕಾಗಿದೆ. ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ಕೆ.ಆರ್.ರಮೇಶ್​ಕುಮಾರ್ ತಿಕ್ಕಾಟ ನಡೆದಿದೆ. ಪೈಪೋಟಿ ಹೆಚ್ಚಿರುವುದರಿಂದ ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ನಡೆದ ಪ್ರಯತ್ನ ಫಲಕೊಟ್ಟಿಲ್ಲ. ಏಕವಚನದಲ್ಲಿ ಬೈದಾಟ ಸಹ ನಡೆದಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಹಾಸನಕ್ಕೆ ಡಾ.ಸೂರಜ್ ಜೆಡಿಎಸ್ ಅಭ್ಯರ್ಥಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಮತ್ತೊಂದು ಕುಡಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಡಾ.ಸೂರಜ್ ರಾಜಕೀಯದ ಮುಖ್ಯವಾಹಿನಿ ಪ್ರವೇಶಿಸಲು ವೇದಿಕೆ ಸಜ್ಜಾಗಿದ್ದು, ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ನ.19ರಂದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ರೇವಣ್ಣ ಪತ್ನಿ ಭವಾನಿ ಹೆಸರು ಸ್ಪರ್ಧಾಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿತ್ತಾದರೂ ಕುಟುಂಬ ಸದಸ್ಯರು ಸೂರಜ್​ಗೆ ನೆಲೆ ಕಲ್ಪಿಸುವ ಸಂಬಂಧ ಸಾಕಷ್ಟು ರ್ಚಚಿಸಿ, ಹೆಚ್ಚು ಸುರಕ್ಷಿತವಾಗಿರುವ ಪರಿಷತ್ ಚುನಾವಣೆ ಮೂಲಕ ಅವರಿಗೆ ಅಖಾಡ ಸಜ್ಜುಗೊಳಿಸಲು ತೀರ್ವನಿಸಿದ್ದಾರೆ. ಮೂಳೆ, ಸ್ನಾಯು ವೈದ್ಯರಾಗಿರುವ ಸೂರಜ್, ಈಚೆಗೆ ಎಚ್​ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಾರ್ವಜನಿಕ ಬದುಕಿಗೆ ಕಾಲಿರಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಿಂದಲೂ ದೇವೇಗೌಡ, ಎಚ್.ಡಿ.ರೇವಣ್ಣ, ಕಿರಿಯ ಸಹೋದರ ಪ್ರಜ್ವಲ್ ಸ್ಪರ್ಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಖಡಕ್ ನಿರ್ಧಾರಗಳ ಮೂಲಕ ಪಕ್ಷದ ಜಿಲ್ಲಾ ಘಟಕದಲ್ಲಿ ಜನಪ್ರಿಯರೂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net