ಸತ್ಯಮೇವ ಜಯತೆ

ವಿಜಯವಾಣಿ (13)
Published on

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು, ಬಲಿದಾನಗೈದವರನ್ನು ಗೌರವದಿಂದ ಸ್ಮರಿಸಬೇಕಾದ್ದು, ಅವರ ಮೌಲ್ಯಗಳನ್ನು ಅನುಸರಿಸಬೇಕಾದ್ದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಆದರೆ, ಈ ಪಾಠವನ್ನು ದೇಶದ ಸವೋಚ್ಚ ನ್ಯಾಯಾಲಯದಿಂದ ಹೇಳಿಸಿಕೊಳ್ಳುವಂಥ ಸ್ಥಿತಿಗೆ ತಲುಪಿರುವ ಕೆಲ ನಾಯಕರು ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಪೂರ್ವಗ್ರಹ ತೊರೆದು ಸತ್ಯವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ ಆತ್ಮಸ್ಥೈರ್ಯ ಪ್ರದರ್ಶಿಸಬೇಕು. ಏಕೆಂದರೆ, ಒಂದೇ ಸುಳ್ಳನ್ನು ಸಾವಿರ ಸಾರಿ ಹೇಳಿ ಅದನ್ನು ಸತ್ಯವಾಗಿಸಲು ಸಾಧ್ಯವಿಲ್ಲ. ಸತ್ಯಕ್ಕೆ ಸಾವಿಲ್ಲ, ಕೆಲ ಸಮಯ ಭ್ರಮೆಗಳ ಕಾಮೋಡ ಕವಿದರೂ ಸತ್ಯ ಒಂದಿಲ್ಲ ಒಂದು ದಿನ ಪ್ರಕಾಶಿಸುತ್ತದೆ. ಏಕೆಂದರೆ, ಇತಿಹಾಸಕ್ಕೆ ಅಪಚಾರ ಮಾಡಲು ಸಾಧ್ಯವಿಲ್ಲ.

ವಿನಾಯಕ ದಾಮೋದರ ಸಾವರ್ಕರ್!

ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕೊಚ್ಚಿಕೊಳ್ಳುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದ ಧೀರ. ದಿಟ್ಟ ಹೋರಾಟ, ಕರಿನೀರಿನ ಶಿಕ್ಷೆ (ಕಾಲಾಪಾನಿ), ಅಂಡಮಾನ್ ಜೈಲಿನಿಂದ ಬಿಡುಗಡೆಗೊಂಡರೂ ಮತ್ತೆ ಯರವಾಡ ಜೈಲುವಾಸ, ಆ ಬಳಿಕ ಗೃಹಬಂಧನ... ಹೀಗೆ ಸಾಲು-ಸಾಲು ಸಂಕಷ್ಟಗಳನ್ನು ಎದುರಿಸಿಯೂ, ಭಾರತಾಂಬೆಯ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡವರು. ಸ್ವಾತಂತ್ರ್ಯೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ 26 ವರ್ಷ ಕಾಲ ಸೆರೆವಾಸ ಅನುಭವಿಸಿದ ಸಾವರ್ಕರ್ ಸ್ವಾತಂತ್ರ್ಯ ಬಂದ ಬೆನ್ನಲ್ಲೇ ಒಂದು ವರ್ಷ ಕಾಲ ಮತ್ತೆ ಸೆರೆವಾಸ ಅನುಭವಿಸಬೇಕಾಯಿತು. ಬ್ರಿಟಿಷರು ಸಾವರ್ಕರ್ ಅವರನ್ನು ದ್ವೇಷಿಸುವುದಕ್ಕೆ ಕಾರಣವಿತ್ತು.

ಆದರೆ, ಈ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಸಾವರ್ಕರ್​ರನ್ನು ದ್ವೇಷಿಸಲು ಯಾವುದೇ ಕಾರಣ ಇರಲಿಲ್ಲ. ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಸಾರ್ವಕರ್ ಹೆಸರು ಮುನ್ನಲೆಗೆ ಬರದಂತೆ ಕಾಂಗ್ರೆಸ್ ನೋಡಿಕೊಂಡಿತು. ಸಾವರ್ಕರ್ ಅವರನ್ನು ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರು ಪದೇಪದೆ ಅವಮಾನಿಸುವ ಮೂಲಕ ಈ ದೇಶದ ಕ್ರಾಂತಿಕಾರಿ ಸ್ವಾತಂತ್ರ್ಯ ಆಂದೋಲನವನ್ನು, ಧೀರೋದಾತ್ತ ಹೋರಾಟವನ್ನು, ಸಾವರ್ಕರ್ ಹಾದಿಯಲ್ಲಿ ಸಾಗಿದ ಲಕ್ಷೋಪಲಕ್ಷ ದೇಶಭಕ್ತರನ್ನು ಅವಮಾನಿಸಿಕೊಂಡು ಬಂತು. ಇದು ದೇಶದ ದೊಡ್ಡ ದೌರ್ಭಾಗ್ಯ. ಕಾಂಗ್ರೆಸ್​ನಲ್ಲಿ ಸಾವರ್ಕರ್ ಬಗ್ಗೆ ಅವಹಳೇನಕಾರಿ ಮಾತುಗಳನ್ನು ಆಡಿದ್ದರಲ್ಲಿ ರಾಹುಲ್ ಗಾಂಧಿ ಮೊದಲಿಗರೇನಲ್ಲ. ಇದಕ್ಕೂ ಮೊದಲು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಪಿ.ಚಿದಂಬರಂ ಸೇರಿದಂತೆ ಹಲವರು ಸಾವರ್ಕರ್ ಹೋರಾಟವನ್ನು ಅವಮಾನಿಸುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ದೇಶದ ಸವೋಚ್ಚ ನ್ಯಾಯಾಲಯವೇ ’ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಸಹಿಸುವುದಿಲ್ಲ’ ಎಂದು ಖಡಕ್ ಆಗಿ ಹೇಳಿದೆ.

ರಾಹುಲ್​ಗೆ ಕೋರ್ಟ್ ಸಮನ್ಸ್

ಪುಣೆ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಬಗೆಗಿನ ಅವಹೇಳನಕಾರಿ ಹೇಳಿಕೆ ಸಂಬಂಧದ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಮೇ 9ರಂದು ಕೋರ್ಟ್​ಗೆ ಹಾಜರಾಗುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಇಲ್ಲಿನ ನ್ಯಾಯಾಲಯವೊಂದು ಸಮನ್ಸ್ ಜಾರಿ ಮಾಡಿದೆ. ಸ್ವಲ್ಪ ಸಮಯದ ಹಿಂದೆ ಲಂಡನ್​ನಲ್ಲಿ ಸಾವರ್ಕರ್ ಬಗ್ಗೆ ನೀಡಿದ್ದ ಹೇಳಿಕೆಯೊಂದರ ಹಿನ್ನೆಲೆಯಲ್ಲಿ ಸಾವರ್ಕರ್ ಸಂಬಂಧಿಕರೊಬ್ಬರು ಗಾಂಧಿ ವಿರುದ್ಧ ಮೊಕದ್ದಮೆ ಹೂಡಿದ್ದರು. ‘ಸಾವರ್ಕರ್ ಮತ್ತು ಅವರ ಮಿತ್ರರು ಒಬ್ಬ ಮುಸ್ಲಿಮನನ್ನು ಹೊಡೆದು ಸಂತೋಷ ಪಡುತ್ತಾರೆ. ಐದು ಜನರು ಸೇರಿ ಒಬ್ಬನನ್ನು ಥಳಿಸಿ ಖುಷಿ ಪಟ್ಟರೆ ಅದು ಹೇಡಿತನವಾಗುತ್ತದೆ. ಸಾವರ್ಕರ್​ಜಿ ಅವರೊಂದಿಗೆ 15 ಜನರು ಒಬ್ಬ ವ್ಯಕ್ತಿಯನ್ನು ಹೊಡೆಯುತ್ತಾರೆ. ಇದು ಅವರ ಸಿದ್ಧಾಂತವಾಗಿದೆ’ ಎಂದು ಲಂಡನ್​ನಲ್ಲಿ ಭಾಷಣವೊಂದರಲ್ಲಿ ಗಾಂಧಿ ಟೀಕಿಸಿದ್ದರು.

ಏನಿದು ಪ್ರಕರಣ?

‘ಭಾರತ್ ಜೋಡೋ’ ಯಾತ್ರೆ 2022ರ ನವೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾಕ್ಕೆ ಬಂದ ಸಂದರ್ಭ. ಈ ವೇಳೆ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಧ್ಯಮದವರಿಗೆ ಸಾವರ್ಕರ್ ಬ್ರಿಟಿಷರಿಗೆ ಇಂಗ್ಲಿಷಿನಲ್ಲಿ ಪತ್ರವೊಂದನ್ನು ತೋರಿಸುತ್ತ, ‘ಇದರಲ್ಲಿ ಸಾವರ್ಕರ್ ತಮ್ಮನ್ನು ತಾವು ಬ್ರಿಟಿಷರ ಸೇವಕ/ನೌಕರ ಎಂದು ಕರೆದುಕೊಂಡಿದ್ದಾರೆ’ ಎಂದು ಆಕ್ಷೇಪಾರ್ಹ ಮಾತುಗಳನ್ನು ಹೇಳಿದ್ದರು.

ಸಾಗಿಬಂದ ಹಾದಿ

ವಕೀಲ ನೃಪೇಂದ್ರ ಪಾಂಡೆ ಅಲಹಾಬಾದ್ ಹೈಕೋರ್ಟ್​ಗೆ ರಾಹುಲ್ ವಿರುದ್ಧ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿತ್ತು ಮತ್ತು ಈ ಸಮನ್ಸ್ ರದ್ದು ಮಾಡಲು ನಿರಾಕರಿಸಿತ್ತು. ವಿಚಾರಣೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದ್ದರಿಂದ ರಾಹುಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಕೋರ್ಟ್ ಏ.25ರಂದು ಹೇಳಿದ್ದು

ನ್ಯಾಯಮೂರ್ತಿಗಳಾದ ದೀಪಾಂಕರ ದತ್ತ ಹಾಗೂ ಮನಮೋಹನ್ ಅವರಿದ್ದ ಪೀಠವು ರಾಹುಲ್ ಗಾಂಧಿ ವಿರುದ್ಧದ ಸಮನ್ಸ್ ರದ್ದು ಮಾಡಲು ನಿರಾಕರಿಸಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ತಡೆ ನೀಡಿದೆ. ಈ ವೇಳೆ ನ್ಯಾಯಮೂರ್ತಿಗಳು ಹೇಳಿದ್ದು.

  • ಗಾಂಧೀಜಿ ಬ್ರಿಟಿಷ್ ವೈಸರಾಯರಿಗೆ ಬರೆದ ಪತ್ರಗಳಲ್ಲಿ ‘ನಿಮ್ಮ ಆಜ್ಞಾಧಾರಕ ಸೇವಕ’ ಎಂಬ ಪದಗಳನ್ನು ಬಳಸಿದ್ದರು. ಇಂತಹ ಪದಗಳನ್ನು ಬಳಸಿದ್ದಾರೆ ಎಂದ ಮಾತ್ರಕ್ಕೆ ಗಾಂಧೀಜಿ ಅವರನ್ನು ಬ್ರಿಟಿಷರ ಸೇವಕ ಎಂದು ಕರೆಯಲು ಸಾಧ್ಯವೆ?
  • ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಬರೆದ ಪತ್ರಗಳಲ್ಲಿ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ‘ನಿಮ್ಮ ಸೇವಕ’ ಎಂದ ಪದಗಳನ್ನು ಬಳಸುತ್ತಿದ್ದುದನ್ನು ನಾವು ನೋಡಿದ್ದೇವೆ.
  • ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಲ್ಲ. ನಿಮಗೆ (ರಾಹುಲ್ ಗಾಂಧಿ) ಇತಿಹಾಸ ಮತ್ತು ಭೂಗೋಳ ಗೊತ್ತಿಲ್ಲದಿದ್ದಾಗ ಇಂತಹ ಹೇಳಿಕೆಗಳನ್ನು ನೀಡಬಾರದು. ರಾಜಕೀಯ ಪಕ್ಷವೊಂದರ ನಾಯಕರಾಗಿ ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ಯಾಕೆ ನೀಡಬೇಕು? ಮಹಾರಾಷ್ಟ್ರಕ್ಕೆ ಹೋಗಿ ನೋಡಿ, ಅಲ್ಲಿನ ಜನರು ಸಾವರ್ಕರ್ ಅವರನ್ನು ಪೂಜಿಸುತ್ತಾರೆ. ಇಂತಹ ಕೆಲಸ ಮಾಡಬೇಡಿ.
  • ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತೆ ಇಂತಹ ಹೇಳಿಕೆಗಳು ಬೇಡ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಅವರಿಂದ ಏನಾದರೂ ಇಂತಹ ಹೇಳಿಕೆಗಳು ಹೊರಬಿದ್ದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗುವುದು. ಅವರು (ಸಾವರ್ಕರ್) ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ಕುರಿತು ನಾವು ಹೀಗೆ ನಡೆದುಕೊಳ್ಳುವುದು ಸರಿಯೇ?

ಗಾಂಧಿ ದ್ವಂದ್ವ ನಿಲುವು

‘ಭಾರತದಿಂದ ಆಂಗ್ಲ ಪ್ರಭುತ್ವದ ಉಚ್ಚಾಟನೆ ಯಾಗಲೇಬೇಕು ಎಂಬ ಸ್ಪಷ್ಟತೆಯನ್ನು ನನಗಿಂತ ಮುಂಚೆಯೇ ಪಡೆದುಕೊಂಡವರು ಸಾವರ್ಕರ್. ಭಾರತವನ್ನು ಪ್ರೀತಿಸಿದ ‘ತಪ್ಪಿ’ಗಾಗಿ ಅವರೀಗ ಅಂಡಮಾನಿನಲ್ಲಿ ಬಂಧನದಲ್ಲಿದ್ದಾರೆ. ನ್ಯಾಯಯುತ ಸರ್ಕಾರ ಇದ್ದಿದ್ದರೆ ಅವರಿಲ್ಲಿ ಅತ್ಯುನ್ನತ ಪದವಿಯಲ್ಲಿರುತ್ತಿದ್ದರು. ಸಾವ ರ್ಕರ್ ಸೋದರರ ದುರ್ಭರ ಸ್ಥಿತಿ ನನ್ನನ್ನು ಉದ್ವಿಗ್ನಗೊಳಿಸಿದೆ’- ಹೀಗೆ ‘ಯಂಗ್ ಇಂಡಿಯಾ’ ಪತ್ರಿಕೆ (18-05-1921)ಯಲ್ಲಿ ಬರೆದು ಕೊಂಡಿದ್ದರು ಗಾಂಧಿ. ಆದರೆ ಸಾವರ್ಕರರನ್ನು ವಿಮುಕ್ತಗೊಳಿಸಬೇಕೆಂಬ ಬೇಡಿಕೆಯಿರಿಸಿ ನಡೆದಿದ್ದ ಅಭಿಯಾನದಲ್ಲಿ ಮನವಿಗೆ ಗಾಂಧಿ ಸಹಿ ಮಾಡಿರಲಿಲ್ಲ! ಮತ್ತು ಲಂಡನ್ನಿನಲ್ಲಿದ್ದಾಗ, ‘ಕ್ರಾಂತಿಕಾರಿಗೆ ಪ್ರಚೋದನೆ ನೀಡುವವರು ದಂಡನಾರ್ಹರು’ ಎಂದಿದ್ದರು.

ಇಂದಿರಾ ಶ್ಲಾಘಿಸಿದ್ದರು!

ಮಾಜಿ ಪ್ರಧಾನಮಂತ್ರಿ ಹಾಗೂ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಸಾವರ್ಕರ್ ಅವರ ಧೈರ್ಯ, ಹೋರಾಟವನ್ನು ಕೊಂಡಾಡಿದ್ದರು. ಅಷ್ಟೇ ಅಲ್ಲ, 1970ರಲ್ಲಿ ಸಾವರ್ಕರ್ ಚಿತ್ರ ಹೊಂದಿದ ಅಂಚೇಚೀಟಿ ಬಿಡುಗಡೆ ಮಾಡಿಸಿದ್ದರು. ಸಾವರ್ಕರ್ ಟ್ರಸ್ಟ್​ಗೆ ತಮ್ಮ ಅಕೌಂಟಿನಿಂದ  11,000 ರೂ. ಜಮೆ ಮಾಡಿಸಿದ್ದರು. ಸಾವರ್ಕರ್​ರ ಕುರಿತಂತೆ ಸಿನಿಮಾ ಮಾಡಲು ಫಿಲ್ಮ್ ಡಿವಿಜನ್​ಗೆ ಅನುಮತಿ ಕೊಟ್ಟವರು ಸಹ ಇಂದಿರಾ ಗಾಂಧಿ.

ಸಂಸತ್ತಿನಲ್ಲಿ ಗೌರವ

ಅದು 2003ರ ಫೆಬ್ರವರಿ. ಸ್ವಾತಂತ್ರ್ಯೕರ ಸಾವರ್ಕರ್​ರ ಭಾವಚಿತ್ರವನ್ನು ಸಂಸತ್ತಿನ ಸೆಂಟ್ರಲ್ ಹಾಲ್​ನಲ್ಲಿ ಮೊದಲ ಬಾರಿ ಅನಾವರಣಗೊಳಿಸಲಾಯಿತು. ಆಗ ಇದ್ದದ್ದು ಎನ್​ಡಿಎ ಸರ್ಕಾರ; ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದರೆ, ಮನೋಹರ್ ಜೋಷಿ ಲೋಕಸಭಾ ಸ್ಪೀಕರ್ ಆಗಿದ್ದರು. ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದ್ದು ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ. ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ, ಕಾಂಗ್ರೆಸ್ ಪಕ್ಷ ರಾಷ್ಟ್ರಪತಿಯವರು ಭಾಗವಹಿಸಿದ್ದ ಈ ಸಮಾರಂಭವನ್ನು ಬಹಿಷ್ಕರಿಸಿತು.ಅಲ್ಲಿಂದೀಚೆಗೆ, ಮೇ 28ರಂದು ಬರುವ ವೀರ ಸಾವರ್ಕರ್​ರ ಪ್ರತಿ ಜನ್ಮದಿನಾಚರಣೆಯಂದೂ ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಪುಷ್ಪಗುಚ್ಛದ ಗೌರವಾರ್ಪಣೆ ಸಲ್ಲಿಸಲು ಸಂಸದರು ಸೆಂಟ್ರಲ್ ಹಾಲ್​ಗೆ ಬರುವಾಗಲೆಲ್ಲ, ಕಾಂಗ್ರೆಸ್ ಸಂಸದರು ಸಮಾರಂಭ ಬಹಿಷ್ಕರಿಸುವುದು ವಾಡಿಕೆಯೇ ಆಗಿಬಿಟ್ಟಿದೆ.

ವಿಶಿಷ್ಟ ಲೇಖಕ

ಸಾವರ್ಕರರ ‘ನನ್ನ ಜೀವಾವಧಿಯ ಶಿಕ್ಷೆ’ಯಂತೂ ಅದ್ಭುತ ಕೃತಿ. ಕೈದಿಗಳು ಅನುಭವಿಸು ತ್ತಿದ್ದ ಯಮಯಾತನೆಗಳು, ತಾವು ಸ್ವತಃ ಅವುಗಳನ್ನು ಅನುಭವಿಸಿದ್ದು, ರಕ್ತದ ಕಣ್ಣೀರನ್ನು ಹರಿಸಿದ್ದು, ಮೊಳೆಯಿಂದ ಮಹಾಕಾವ್ಯವನ್ನು ಗೋಡೆಯ ಮೇಲೆ ಕೆತ್ತಿದ್ದು, ಇವೆಲ್ಲ ಮಹಾಕೃತಿಯ ಸುಧೆ! ಸಾವರ್ಕರ್ ಕಾದಂಬರಿಕಾರರೂ ಆಗಿದ್ದರು. ‘ಮೋಪ್ಲಾ ದಂಗೆ’ ಮತ್ತು ‘ಯಾತ್ರೆ’ ಎಂಬ ಎರಡು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಮೊದಲನೆಯದು ಮೋಪ್ಲಾಗಳ ದಂಗೆಯ ಎಳೆ-ಎಳೆಯನ್ನು ವಿವರಿಸಿದ್ದರೆ, ಎರಡನೆಯದು ಅಂಡಮಾನ್ ಯಾತ್ರೆಯ ಮೈನವಿರೇಳಿಸುವ ವಿವರಗಳನ್ನು ಒಳಗೊಂಡಿತ್ತು. ಸಾವರ್ಕರರ ಪ್ರಸಿದ್ಧ ‘ಕಮಲಾ’ ಕಾವ್ಯವನ್ನೊಳಗೊಂಡ ರಣಫೂಲ್-ಕಾಡಿನ ಹೂವುಗಳು-ಕವನ ಸಂಕಲನವೂ ಪ್ರಕಟವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net