ಮಾಜಿ ಪ್ರಧಾನಿ ದೇವೆಗೌಡರ ನಿವಾಸಕ್ಕೆ ಉಪ ರಾಷ್ಟ್ರಪತಿ ಭೇಟಿ

dha
Published on

ಬೆಂಗಳೂರು: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪತ್ನಿ ಸುದೇಶ್ ಧನಕರ್ ಅವರೊಂದಿಗೆ ಶನಿವಾರ ಬೆಳಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ನಿವಾಸಕ್ಕೆ ಭೇಟಿ ನೀಡಿದರು.

ಒಂದು ಗಂಟೆಗೂ ಹೆಚ್ಚು ಕಾಲ ಇದ್ದು, ಚನ್ನಮ್ಮಅವರ ಆರೋಗ್ಯದ ಬಗ್ಗೆ ದೇವೇಗೌಡರಲ್ಲಿ ವಿಚಾರಿಸಿದರು.

ಚನ್ನಮ್ಮ ಅವರು ಆದಷ್ಟು ಬೇಗ ಗುಣಮಖರಾಗಲಿ, ಆ ನಂತರ ಅವರನ್ನು ತಾವು ದೆಹಲಿಗೆ ಕರೆದುಕೊಂಡು ಬನ್ನಿ ಎಂದು ತಿಳಿಸಿದರು. ಇದಕ್ಕೆ ಮಾಜಿ ಪ್ರಧಾನಿಗಳು ಸಮ್ಮತಿಸಿ, ತಮ್ಮ ಮೇಲೆ ತಾವು ಇರಿಸಿರುವ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ನನ್ನ ಹೃದಯ ತುಂಬಿ ಬಂದಿದೆ. ತಮ್ಮ ಆಗಮನ ನಮ್ಮ ಇಡೀ ಕುಟುಂಬಕ್ಕೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಧನಕರ್ ಹಾಗೂ ಅವರ ಪತ್ನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜತೆಯಲ್ಲಿಯೇ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಅವರೆಲ್ಲರೂ ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಕುಟುಂಬದ ಎಲ್ಲ ಸದಸ್ಯರ ಕುಶಲೋಪರಿ ವಿಚಾರಿಸಿದರು. ವಿಶೇಷವಾಗಿ ಪುಟ್ಟ ಮಕ್ಕಳ ಜತೆ ಉಪ ರಾಷ್ಟ್ರಪತಿಗಳು ಕೆಲ ಕಾಲ ಕಳೆದರು.

ಧನಕರ್ ಅವರನ್ನು ಕುಮಾರಸ್ವಾಮಿ ಅವರು ಬರಮಾಡಿಕೊಂಡರು.

ಉಪ ರಾಷ್ಟ್ರಪತಿಗಳನ್ನು ಬೀಳ್ಕೊಟ್ಟ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ಉಪ ರಾಷ್ಟ್ರಪತಿಗಳು ಹಾಗೂ ಮಾಜಿ ಪ್ರಧಾನಿಗಳ ನಡುವೆ ಸ್ನೇಹಪೂರ್ವಕ ಬಾಂಧವ್ಯ ಇದೆ. ಇಬ್ಬರೂ ಪರಸ್ಪರ ಗೌರವಭಾವ ಇರಿಸಿಕೊಂಡಿದ್ದಾರೆ. ವಿಶೇಷವಾಗಿ ಉಪ ರಾಷ್ಟ್ರಪತಿಗಳು ದೇವೇಗೌಡರ ಬಗ್ಗೆ ಅತ್ಯಂತ ಗೌರವ ಇರಿಸಿಕೊಂಡಿದ್ದನ್ನು ನಾನು ಆನೇಕ ಸಲ ಕಣ್ಣಾರೆ ಕಂಡಿದ್ದೇನೆ ಎಂದರು.

ಇಬ್ಬರೂ ನಾಯಕರು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಅವರಿಬ್ಬರ ಚರ್ಚೆ ಬಹುತೇಕ ಕೃಷಿ ಕೇಂದ್ರಿತವಾಗಿತ್ತು. ರೈತರ ಅಭಿವೃದ್ಧಿಯ ಬಗ್ಗೆ ಅವರು ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಕುಮಾರಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net