

ಮೂಡಿಗೆರೆ: ಮನುಷ್ಯನ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಪರಿವರ್ತಿಸಲು ಸಂಘಸಂಸ್ಥೆಗಳ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಏಕಾಂಗಿಯಾಗಿದ್ದವರಿಗೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗದು ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಸೋಮವಾರ ಜೆಸಿಐನಿಂದ ಏರ್ಪಡಿಸಿದ್ದ ಪ್ರೇರಣ ಜೇಸಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದ ಕಡೆಗೆ ಜಗತ್ತು ತೆರಳುತ್ತಿದೆ. ಮನುಷ್ಯ ಮೊಬೈಲ್‌ಗೆ ಮಾತ್ರ ಸೀಮಿತವಾಗಿ ಜಗತ್ತಿನ ಆಗುಹೋಗುಗಳತ್ತ ಗಮನಹರಿಸುತ್ತಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬಲ್ಲ ಗುಣವನ್ನು ಮೈಗೂಡಿಸಿಕೊಳ್ಳಬೇಕಾದರೆ ಸಂಘ-ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು ಎಂದರು.
ಮಕ್ಕಳು ಶಾಲೆಯ ಪಠ್ಯ ಕಲಿಕೆಗಿಂತ ಹೆಚ್ಚಾಗಿ ಮೊಬೈಲ್ ಬಳಕೆಯಲ್ಲಿ ನಿರತರಾಗಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.
ಜೇಸಿ ಅಲ್ಯೂಮಿನಿ ಕ್ಲಬ್ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಎಸ್.ಕುಮಾರ್ ಮಾತನಾಡಿ, ಜೆಸಿಐ ವರ್ಷಪೂರ್ತಿ ಜನರ ಸೇವೆಯಲ್ಲಿ ತೊಡಗಿಕೊಳ್ಳುತ್ತದೆ. ಪ್ರತಿವರ್ಷ ಒಂದು ವಾರ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸಲು ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜೆಸಿಐ ಅಧ್ಯಕ್ಷ ಸುಪ್ರೀತ್ ಕಾರ್ಬೈಲ್, ಮೂಡಿಗೆರೆ ಜೆಸಿಐ ಸ್ಥಾಪಕ ಅಧ್ಯಕ್ಷ ಎನ್.ಎಲ್.ಸುಂದರೇಶ್ವರ್, ಪಪಂ ಸದಸ್ಯ ಪಿ.ಜಿ.ಅನುಕುಮಾರ್, ಶ್ರಾವ್ಯ ಉದಯ್, ಸುದೀಪ್ ತ್ರಿಪುರ, ದಿವ್ಯಾ ಸುಪ್ರೀತ್ ಇತರರಿದ್ದರು.