

ಶಿವಮೊಗ್ಗ: ಜಿಲ್ಲೆಯಲ್ಲಿ ಗೋಹತ್ಯೆ ಅಥವಾ ಬಲಿ ಕೊಡುವುದನ್ನು ನಿಲ್ಲಿಸುವ ಸಂಬಂಧ ಕಠಿಣ ಕಾನೂನು ಮತ್ತು ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020 ಜಾರಿಯಲ್ಲಿದ್ದು ದನ, ಹೋರಿ, ಕರು ಕೊಲ್ಲುವುದನ್ನು ನಿಷೇಧಿಸಿದೆ. ಆದರೆ ಜೂನ್ ಮೊದಲ ವಾರದ ಬಕ್ರೀದ್ ಹಬ್ಬದ ಅಂಗವಾಗಿ ಜಾನುವಾರುಗಳನ್ನು ಬಲಿ ಕೊಡುವ ಸಾಧ್ಯತೆ ಇದ್ದು, ಅದನ್ನು ತಡೆಯುವಂತೆ ಮನವಿ ಮಾಡಿದರು.
ಗೋವುಗಳ ಕಳ್ಳಸಾಗಣೆ ಆಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ಕಾಯ್ದೆ ಮತ್ತು ನಿಯಮಾವಳಿ ಜಾರಿಗೆ ತರಲು ಆಯಕಟ್ಟಿನ ಸ್ಥಳಗಳಲ್ಲಿ 24 ಗಂಟೆ ನಾಕಾ ಬಂದಿ ಹಾಕಬೇಕು. ಈಗಾಗಲೇ ಅಕ್ರಮ ಕಸಾಯಿಖಾನೆಗಳ ವಿರುದ್ಧ ಪ್ರಕರಣ ದಾಖಲಾಗಿರುವ ಮತ್ತು ಬಲಿ ಕೊಡುವ ಸಂಭಾವ್ಯ ಸ್ಥಳಗಳ ಮೇಲೆ ಪೊಲೀಸ್ ನಿಗಾ ಇಡಬೇಕು ಎಂದು ಒತ್ತಾಯಿಸಿದರು.
ಬೀಟ್ ಪೊಲೀಸರ ಮೂಲಕ ಅಕ್ರಮ ಕಸಾಯಿಖಾನೆ ಗುರುತಿಸಿ ಅದನ್ನು ಬಂದ್ ಮಾಡಿಸಬೇಕು. ಮನೆ ಮುಂದೆ ಕಟ್ಟಿರುವ ಗೋವುಗಳ ಬಗ್ಗೆ ಮಾಲೀಕರ ಪ್ರಮಾಣಪತ್ರ ಪಡೆದು ಪರಿಶೀಲಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಮತ್ತು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಸಾಮರಸ್ಯ ಪ್ರಮುಖ್ ರಮೇಶ್ ಬಾಬು ಜಾಧವ್, ಕಾರ್ಯದರ್ಶಿ ಆನಂದರಾವ್ ಜಾಧವ್, ಧಾರ್ಮಿಕ ಧರ್ಮ ಪ್ರಸಾರಕ ಎಂ.ಎಸ್.ಜಿತೇಂದರ್, ನಗರ ಅಧ್ಯಕ್ಷ ವಿನೋದ್‌ಕುಮಾರ್ ಜೈನ್, ಬಜರಂಗ ದಳದ ಜಿಲ್ಲಾ ಸಂಚಾಲಕ್ ಸುರೇಶ್ ಬಾಬು, ಪ್ರಮುಖರಾದ ರಾಜೇಶ್ ಗೌಡ ಇತರರಿದ್ದರು.