Gubbi Veeranna Granddaughter: ಹಿರಿಯ ನಟಿ, ಗುಬ್ಬಿ ವೀರಣ್ಣನವರ ಮೊಮ್ಮಗಳು ಸುಂದರಶ್ರೀ ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಅವರು, ಇದೀಗ ಇನ್‌ಸ್ಟಾಗ್ರಾಮ್ ಮೂಲಕ ಸಾರ್ವಜನಿಕರಲ್ಲಿ ಧನಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸುಂದರಶ್ರೀ, ತಾವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಹಣಕಾಸಿನ ನೆರವು ಬೇಕಿದೆ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿರುವುದಾಗಿ ತಿಳಿಸಿರುವ ಅವರು, ಸಾಧ್ಯವಾದಷ್ಟು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುಂದರಶ್ರೀ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದ ಡಾ. ಗುಬ್ಬಿ ವೀರಣ್ಣನವರ ಮೊಮ್ಮಗಳು. ಕಲಾ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಅವರು, ರಂಗಕರ್ಮಿ ಹಾಗೂ ಗಾಯಕಿ ಬಿ. ಜಯಶ್ರೀ, ವೈಜಯಂತಿ ಕಾಶಿ ಮತ್ತು ಜಿ.ಎಸ್.ನಟರಾಜ್ ಅವರೊಂದಿಗೆ ಕುಟುಂಬ ಸಂಬಂಧ ಹೊಂದಿದ್ದಾರೆ.
ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸುಂದರಶ್ರೀ ಅವರು ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆ (NSD)ಯಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ. 1970ರಲ್ಲಿ ಡಾ. ರಾಜ್‌ಕುಮಾರ್ ಅಭಿನಯದ ‘ಪರೋಪಕಾರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಬಳಿಕ ಚಂದ್ರಶೇಖರ ಕಂಬಾರ ನಿರ್ದೇಶನದ ‘ಕಾಡು ಕುದುರೆ’ (1979) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ‘ಅದೇ ರಾಗ ಅದೇ ಹಾಡು’ (1989), ‘ಬಾಲ ಹೊಂಬಾಳೆ’ ಹಾಗೂ ‘ಟ್ರಂಕ್’ (2018) ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೆ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಸುಂದರಶ್ರೀ ಗುರುತಿಸಿಕೊಂಡಿದ್ದಾರೆ. ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ‘ಮಾಲ್ಗುಡಿ ಡೇಸ್’ ಸರಣಿಯಲ್ಲೂ ಅವರು ನಟಿಸಿದ್ದರು.
2003ರಲ್ಲಿ ಪ್ರಸಾರವಾದ ಕನ್ನಡ ಧಾರಾವಾಹಿ ‘ಗುಪ್ತಗಾಮಿನಿ’ಯಲ್ಲಿನ ಅಭಿನಯ ಅವರಿಗೆ ಕಿರುತೆರೆ ಪ್ರೇಕ್ಷಕರಲ್ಲಿ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ರಂಗಭೂಮಿಯ ನಾಟಕಗಳಲ್ಲೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.