

ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಶರತ್ ಬಾಬು(71) ಇಂದು ಹೈದರಾಬಾದ್ನ ಎಐಜಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ನಟ ಶರತ್ ಬಾಬು ಅವರಿಗೆ ಹೈದರಾಬಾದ್ನ ಎಐಜಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗ್ತಿತ್ತು. ಶರತ್ ಬಾಬು ಅವರು ಕಿಡ್ನಿ, ಲಂಗ್ಸ್, ಲಿವರ್ ಮತ್ತಿತರ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ವೆಂಟಿಲೇಟರ್ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದೆರಡು ದಿನಗಳಿಂದ ಶರತ್ ಬಾಬು ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗಮನ ಸೆಳೆದ ಪ್ರತಿಭಾನ್ವಿತ ನಟ. ಕನ್ನಡದ ಅಮೃತವರ್ಷಿಣಿ 'ನೀಲಾ', 'ತುಳಸಿದಳ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಸ್ವಾತಿ ಮುತ್ಯಂ, ಸಾಗರ ಸಂಗಮಂ ಸೇರಿದಂತೆ 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಮೃತವರ್ಷಿಣಿ ಸಿನಿಮಾದಲ್ಲಿ ಶರತ್ ಬಾಬು ಅವರ ಅಭಿನಯಕ್ಕೆ ಕನ್ನಡಿಗರು ಮನಸೋತಿದ್ದರು. ನಟನಾಗಿ ಮಾತ್ರವಲ್ಲದೇ ವಿಲನ್, ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಮನೆ ಮಾತಾಗಿದ್ರು ಶರತ್ ಬಾಬು.