ಬೆಂಗಳೂರಿಗೆ ಬಿಗಿ ಲಾಕ್; ಮಧ್ಯಾಹ್ನ 12ರವರೆಗಷ್ಟೇ ದಿನಸಿ, ತರಕಾರಿ ಮಾರಾಟಕ್ಕೆ ಅವಕಾಶ

front-1
Published on

ಬೆಂಗಳೂರು: ಹೆಚ್ಚುತ್ತಿರುವ ಕರೊನಾ ವೈರಸ್ ಸೋಂಕು ನಿಯಂತ್ರಿಸುವುದಕ್ಕಾಗಿ ರಾಜ್ಯಾದ್ಯಂತ ನಿರ್ಬಂಧಿತ ವಲಯಗಳಿಗೂ (ಕಂಟೇನ್ಮೆಂಟ್ ಜೋನ್) ಲಾಕ್​ಡೌನ್ ವಿಸ್ತರಿಸಲಾಗಿದೆ. ಈಗಾಗಲೇ ಘೊಷಿಸಿರುವ ಪ್ರಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14 ರಿಂದ ಒಂದು ವಾರ ಲಾಕ್​ಡೌನ್ ಜತೆಗೆ, ಬೆಂಗಳೂರು ನಗರ ಪ್ರದೇಶ ಸೀಮಿತವಾಗಿ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆದರೆ, ಮಾರಕ ಪಿಡುಗಿಗೆ ರಾಜ್ಯವ್ಯಾಪಿ ಲಾಕ್​ಡೌನ್ ಪರಿಹಾರವಲ್ಲವೆಂಬ ನಿಲುವಿಗೆ ಅಂಟಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಇದನ್ನು ದೃಢಪಡಿಸಿದರು. ಕರೊನಾ ಕಟ್ಟಿಹಾಕುವುದಕ್ಕೆ ತಳಮಟ್ಟದ ಕಾರ್ಯತಂತ್ರವೇ ಪರಿಣಾಮಕಾರಿ ಕ್ರಮವೆಂದು ಮನಗಂಡಿರುವ ಸಿಎಂ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟರು. ಈ ಸಂವಾದದಲ್ಲಿ ಬಹಳಷ್ಟು ಕಡೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡಿದ್ದರು. ಕರೊನಾ ನಿಯಂತ್ರಿಸುವ ಕ್ರಮಗಳಿಗೆ ಬಹುತೇಕ ಜಿಲ್ಲಾಧಿಕಾರಿಗಳು ಉತ್ಸಾಹ ತೋರಿಸಿ, ಲಾಕ್​ಡೌನ್​ಗೆ ನಿರುತ್ಸಾಹ ವ್ಯಕ್ತಪಡಿಸಿದರು. 2 ಹಂತದ ಸುದೀರ್ಘ ಸಮಾಲೋಚನೆಯಲ್ಲಿ ಸಂಗ್ರಹಿಸಿದ ಅಭಿಪ್ರಾಯ ಸಂಗ್ರಹಿಸಿ ಸಿಎಂ ಸಲಹೆಯಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಮಾರ್ಗಸೂಚಿ ಪ್ರಕಾರ ರಾಜ್ಯಾದ್ಯಂತ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಲಾಕ್​ಡೌನ್ ವಿಸ್ತರಣೆಯಾಗಿದ್ದು, ಉಳಿದೆಡೆ ನಿಷೇಧಿತ ಕಾರ್ಯಚಟುವಟಿಕೆಗಳನ್ನು ಕ್ರಮೇಣ ಪುನರಾರಂಭಿಸಲು ಅನುಮತಿ ನೀಡಲಾಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರ ರಾತ್ರಿ 8 ರಿಂದ ಜು.22ರ ಬೆಳಗ್ಗೆ 5ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದ್ದರೆ, ಬೆಂಗಳೂರು ನಗರಕ್ಕೆ ಸೀಮಿತವಾಗಿ ಒಂದು ವಾರ ಕಾಲ ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ದಿನಸಿ, ಪಡಿತರ ಅಂಗಡಿಗಳು ತೆರೆದಿರಲಿವೆ. ಇದೂ ಸೇರಿದಂತೆ ಇನ್ನೂ ಹಲವು ಕಠಿಣ ಕ್ರಮಗಳನ್ನು ವಿಧಿಸಲಾಗಿದೆ.

ಪಾಸ್ ಕಟ್ಟುನಿಟ್ಟು: ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬೆಂಗಳೂರು ಪ್ರವೇಶಿಸುವವರು ಅಥವಾ ಬೆಂಗಳೂರಿನಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಪಾಸ್ ಪಡೆಯುವುದು ಕಡ್ಡಾಯವಾಗಿದೆ.

ಯಾವುದಕ್ಕೆಲ್ಲ ವಿನಾಯಿತಿ:

  • ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಬಿಬಿಎಂಪಿ
  • ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಎಲ್ಲ ಕಚೇರಿಗಳು
  • ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಶೇ.50 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆ
  • ಕೋರ್ಟ್ ಹಾಗೂ ಸಂಬಂಧಿತ ಕಚೇರಿಗಳಿಗೆ ಹೈಕೋರ್ಟ್ ಮಾರ್ಗಸೂಚಿಗಳು ಅನ್ವಯ
  • ರಾಜ್ಯ ಖಜಾನೆ ಹಾಗೂ ಜಿಲ್ಲಾ ಖಜಾನೆಗಳು
  • ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ/ ಗ್ರಾಮಾಂತರ ಜಿಲ್ಲಾಧಿಕಾರಿ ಕರೊನಾ ಕೆಲಸಕ್ಕೆ ನಿಯೋಜಿಸಿದ ಸರ್ಕಾರೇತರ ಸಂಸ್ಥೆಗಳ ಕಚೇರಿಗಳು, ಸ್ವಯಂ ಸೇವಕರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವುದಕ್ಕೆ ಪೋ›ತ್ಸಾಹ
  • ವಿದ್ಯುತ್ ಉತ್ಪಾದನೆ, ಪ್ರಸರಣ ಘಟಕಗಳು, ಅಂಚೆ ಕಚೇರಿಗಳು, ವಿಪತ್ತು ನಿರ್ವಹಣೆ ಹಾಗೂ ಮುನ್ಸೂಚನಾ ಏಜೆನ್ಸಿಗಳು (ಪೆಟ್ರೋಲ್, ಅಡುಗೆ ಅನಿಲ, ಸಿಎನ್​ಜಿ, ಪಿಎನ್​ಜಿ ಸೇರಿ)
  • ಮಾಧ್ಯಮ ಸಂಸ್ಥೆಗಳು, ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳು
  • ಎಲ್ಲ ಆರೋಗ್ಯ ಸೇವೆಗಳು
  • ಎಲ್ಲ ಆಸ್ಪತ್ರೆ, ನರ್ಸಿಂಗ್ ಹೋಂಗಳು, ಕ್ಲಿನಿಕ್​ಗಳು, ಲ್ಯಾಬ್ ಗಳು, ಔಷಧಿ ಅಂಗಡಿಗಳು, ವೈದ್ಯಕೀಯ ಸಾಧನ ಅಂಗಡಿಗಳು ಮತ್ತು ತಯಾರಿಕಾ ಘಟಕಗಳು
  • ಅಂತಾರಾಜ್ಯ, ರಾಜ್ಯ, ಜಿಲ್ಲೆಯೊಳಗೆ ಎಲ್ಲ ವೈದ್ಯಕೀಯ ಅರೆ ವೈದ್ಯಕೀಯ, ಶುಶ್ರೂಷಕರು, ವಿಜ್ಞಾನಿಗಳು, ಇತರೆ ಆಸ್ಪತ್ರೆ ಪೂರಕ ಸೇವೆಗಳು
  • ಸಂಯೋಜಿತ ಕೊಯ್ಲು ಹಾಗೂ ಇತರ ಕೃಷಿ, ತೋಟಗಾರಿಕೆ ಯಂತ್ರಗಳನ್ನು ರಾಜ್ಯದ ಒಳಗೆ, ಹೊರಗೆ ಮುಕ್ತ ಸಾಗಣೆ
  • ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಹೈನುಗಾರಿಕೆಗೆ ಸಂಬಂಧಿಸಿದ ಎಲ್ಲ ಕಾರ್ಯ ಚಟುವಟಿಕೆಗಳು, ವ್ಯಾಪಾರ-ವಹಿವಾಟು, ಯಂತ್ರೋಪಕರಣಗಳು ಹಾಗೂ ದುರಸ್ತಿ ಮಳಿಗೆಗಳು
  • ರಸಗೊಬ್ಬರ ಕ್ರಿಮಿನಾಶಕ, ಬೀಜಗಳ ತಯಾರಿಕೆ, ವಿತರಣೆ ಹಾಗೂ ಚಿಲ್ಲರೆ ಮಾರಾಟ
  • ಕರೊನಾ ಷರತ್ತುಬದ್ಧವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಮಗಾರಿ ನಿರ್ವಹಣೆ
  • ಮಕ್ಕಳು/ ಅಂಗವಿಕಲರು/ ಅನಾಥರು/ ಮಾನಸಿಕ ಅಸ್ವಸ್ಥರು/ ಹಿರಿಯ ನಾಗರಿಕರು/ ವಿಧವೆಯರು ಮುಂತಾದ ಸಂಸ್ಥೆಗಳ ಕಾರ್ಯನಿರ್ವಹಣೆ.
  • ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನಗಳ ವಿತರಣೆ
  • ಅಂಗನವಾಡಿ ಫಲಾನುಭವಿಗಳ ಮನೆ ಬಾಗಿಲಿಗೆ 15 ದಿನಗಳಿಗೊಮ್ಮೆ ಆಹಾರ ಮತ್ತು ಪೌಷ್ಟಿಕ ಸಾಮಗ್ರಿ ಪೂರೈಕೆ. ಅಂಗನವಾಡಿಗಳಿಗೆ ಫಲಾನುಭವಿಗಳು ಬರುವಂತಿಲ್ಲ.
  • ಇ-ಕಾಮರ್ಸ್ ಮುಖಾಂತರ ಆಹಾರ, ಔಷಧಿಗಳು, ಔಷಧ ವಸ್ತುಗಳು, ವೈದ್ಯಕೀಯ ಸಲಕರಣೆಗಳಂತ ಅಗತ್ಯ ವಸ್ತುಗಳ ಸರಬರಾಜು.
  • ಶೀತಲಿಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು.
  • ಖಾಸಗಿ ಭದ್ರತಾ ಸೇವೆಗಳು. ಸಾಧ್ಯವಾದರೆ ಇತರ ಎಲ್ಲ ಸಂಸ್ಥೆಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲು ಪೋ›ತ್ಸಾಹಿಸಬೇಕು.

ಮಾರಾಟಕ್ಕೆ ಸಮಯಮಿತಿ ನಿಗದಿ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 12.00 ಗಂಟೆವರೆಗೆ ಪಡಿತರ ಅಂಗಡಿ, ದಿನಸಿ ಅಂಗಡಿಗಳೀಗೆ ಆಹಾರ, ದವಸ ಧಾನ್ಯ, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಮುನ್ನ ದಿನ ಇಡೀ ಅವಕಾಶವಿತ್ತು. ರಾಜಧಾನಿಯಲ್ಲಿ ಮಧ್ಯಾಹ್ನ 12ರ ನಂತರ ಓಡಾಟವನ್ನು ಸಂಪೂರ್ಣ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಇಂದು ಜಿಲ್ಲೆಗಳ ನಿರ್ಧಾರ: ಸೋಂಕು ನಿಯಂತ್ರಣಕ್ಕೆ ಸಿಗದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಗಳೇ ಲಾಕ್​ಡೌನ್ ನಿರ್ಧಾರ ತೆಗೆದುಕೊಳ್ಳಬೇಕೆಂದು ಸರ್ಕಾರ ಸೂಚಿಸಿರುವುದರಿಂದ ಮಂಗಳವಾರ ಹಾಸನ, ಉಡುಪಿ, ಬೀದರ್ ಜಿಲ್ಲೆಗಳಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಹೊರಬೀಳಲಿದೆ.

ಎಲ್ಲೆಲ್ಲಿ ದಿಗ್ಬಂಧನ?: ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಯ ರಾಯಚೂರು ನಗರ ಮತ್ತು ಸಿಂಧನೂರು ಪಟ್ಟಣ, ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಕಾಗವಾಡ, ಅಥಣಿ, ನಿಪ್ಪಾಣಿ ತಾಲೂಕುಗಳು, ಮೈಸೂರು ಜಿಲ್ಲೆಯಲ್ಲಿ ನರಸಿಂಹರಾಜ ಕ್ಷೇತ್ರದ ಕೆಲವು ಭಾಗಗಳನ್ನು ಮಾತ್ರ ಲಾಕ್​ಡೌನ್ ಮಾಡಲಾಗುತ್ತಿದೆ.

ಟ್ರಕ್ ಓಡಾಟಕ್ಕಿಲ್ಲ ತಡೆ: ಕಂಟೈನ್​ವೆುಂಟ್ ವಲಯ ಹೊರತುಪಡಿಸಿ ಉಳಿದ ಕಡೆ ಟ್ರಕ್​ಗಳ ಮೂಲಕ (ಖಾಲಿ ಟ್ರಕ್​ಗಳು) ಸರಕು ವಾಹನಗಳು ಸೇರಿದಂತೆ ರೈಲು ಮತ್ತು ವಿಮಾನದ ಮೂಲಕ ಎಲ್ಲ ಬಗೆಯ ಸರಕುಗಳ ಸಾಗಾಟಕ್ಕೂ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಸೇವೆ ನೀಡುವ ಲಾರಿ ಓಡಾಟ ಹೊರತು ಉಳಿದವಕ್ಕೆ ಅವಕಾಶ ಇರುವುದಿಲ್ಲ.

ಸಾರ್ವಜನಿಕ ಸಾರಿಗೆಗೆ ಬ್ರೇಕ್: ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು ಲಾಕ್​ಡೌನ್ ಅವಧಿಯಲ್ಲೂ ಸಂಚರಿಸಲಿವೆ. ವಿಮಾನ ಮತ್ತು ರೈಲು ಟಿಕೆಟ್​ಗಳನ್ನೇ ಪ್ರಯಾಣಿಕರ ಪಾಸುಗಳೆಂದು ಪರಿಗಣಿಸಲಾಗುವುದು. ಅಲ್ಲದ ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಲಾಗಿದೆ ಆದರೆ ಯಾವುದೇ ಹೊಸ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿಲ್ಲ.

ಪೊಲೀಸರಿಗೆ ಹೊಣೆ: ಈ ಆದೇಶದ ಅನುಬಂಧದಲ್ಲಿ ನೀಡಲಾಗಿರುವ ಲಾಕ್​ಡೌನ್​ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ. ಅದೇ ರೀತಿ ಗೃಹ ಸಚಿವರು ಎರಡು ದಿನಗಳಿಂದ ಸಭೆಗಳನ್ನು ನಡೆಸಿ, ಕಳೆದ ಬಾರಿಯ ಲೋಪಗಳು ಮರುಕಳಿಸದಂತೆ ಸೂಚನೆ ನೀಡಿದ್ದಾರೆ.

ಕಟ್ಟಡ ನಿರ್ವಣಕ್ಕೆ ಅವಕಾಶ: ಬೆಂಗಳೂರು ಪ್ರದೇಶದ ವ್ಯಾಪ್ತಿಯೊಳಗೆ ಹೊರಗಿನಿಂದ ಕಾರ್ವಿುಕರನ್ನು ಕರೆತರದೇ ಸ್ಥಳೀಯವಾಗಿಯೇ ಇರುವ ಕಾರ್ವಿುಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿ ಮುಂದುವರಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net