ಬನ್ನೂರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ

17BANNU1
ಬನ್ನೂರಿನಲ್ಲಿ ರೈತಮುಖಂಡರನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು. ಅತ್ತಹಳ್ಳಿ ಶಿವರಾಜು, ರಂಗಸ್ವಾಮಿ, ಬನ್ನೂರು ಜಯರಾಂ ಇದ್ದರು.
Published on

ಬನ್ನೂರು: ರೈತರನ್ನು ಪೊಲೀಸರು ವಿನಾಕಾರಣ ಬಂಧಿಸಿ ಕರೆದೊಯ್ದಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ಇಲ್ಲಿನ ಪೋಲಿಸ್ ಠಾಣೆಯ ಎದುರು ಹಾಗೂ ಸಂತೇಮಾಳ ಬಳಿ ಶುಕ್ರವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮವಿದ್ದು, ಇದಕ್ಕೆ ಅಡ್ಡಿಪಡಿಸಬಹುದೆಂಬ ಶಂಕೆಯಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ರಾತ್ರಿ ರೈತ ಮುಖಂಡರಾದ ಬನ್ನೂರು ನಾರಾಯಣ್, ಎಂ.ವಿ. ಕೃಷ್ಣಪ್ಪ, ಶಿವರಾಂ, ಅತ್ತಹಳ್ಳಿ ದೇವರಾಜು ಅವರನ್ನು ಬಂಧಿಸಿ ಮೈಸೂರಿಗೆ ಕರೆದೊಯ್ದಿದ್ದರು.
ಕಾರ್ಮಿಕ ಮುಖಂಡ ಶಿವರಾಜು ಮಾತನಾಡಿ, ರೈತ ಪರ ಹೋರಾಟಗಾರರ ಮನೆಗೆ ಪೋಲಿಸರು ಏಕಾಏಕಿ ನುಗ್ಗಿ ಬಂಧಿಸಿರುವ ಕ್ರಮ ಸರಿಯಲ್ಲ. ರೈತ ಮುಖಂಡರು ದರೋಡೆಕೋರರಲ್ಲ, ಲೂಟಿಕೋರರಲ್ಲ. ಹೀಗಿರುವಾಗ ಅವರನ್ನು ಬಂಧಿಸಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ಶಾಂತಿಯಿಂದ ಪ್ರತಿಭಟನೆ ಮಾಡಲು ಹಕ್ಕಿದೆ. ಇಂದಿನ ಸರ್ಕಾರ ಆ ಹಕ್ಕನ್ನೂ ಮೊಟಕುಗೊಳಿಸಿ ರೈತರ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದೆ. ಕೂಡಲೇ ಬಂಧಿತ ರೈತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ರಂಗಸ್ವಾಮಿ ಮಾತನಾಡಿ, ಯಾವುದೇ ವ್ಯಕ್ತಿಯನ್ನು ಬಂಧಿಸುವ ಮುನ್ನ ಬಂಧನದ ವಾರೆಂಟ್ ಇರಬೇಕು. ಹಾಗಾಗಿ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಠಾಣೆ ಮುಂದೆ ಹೊರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಅರುಣ, ನವೀನ, ಮಧು, ಕುಮಾರ, ಚೇತನ, ವೀರಭದ್ರ, ಮಹೇಶ, ಸಿದ್ದೇಶ, ಅತ್ತಹಳ್ಳಿ ಗೋಪಿ, ರಾಮಕೃಷ್ಣ, ಬನ್ನೂರು ಜಯರಾಂ, ಶಂಕರ, ಮಹೇಶ್, ರಮೇಶ್, ರಾಮ, ಪಾರ್ಥ, ನಿಂಗಣ್ಣ, ಚಿನ್ನಸ್ವಾಮಿ, ಚಂದ್ರು, ಕೃಷ್ಣ, ಗಣೇಶ್, ಹೊರಹಳ್ಳಿ ನಾರಾಯಣ್ ಸೇರಿದಂತೆ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net